ಚಿತ್ರದುರ್ಗ ನನ್ನ ತವರು ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ : ದಿವ್ಯಪ್ರಭು ಜಿ.ಆರ್.ಜೆ.
ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆ.10 : ಕರ್ನಾಟಕದಲ್ಲಿ ಹನ್ನೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಚಿತ್ರದುರ್ಗದ ಜನ ನೀಡಿದಂತ ಬೀಳ್ಕೊಡುಗೆ ನನ್ನ ಜೀವನದಲ್ಲಿ ಮರೆಯಲಾಗದಂತ ಮಧುರ ಕ್ಷಣ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಯಾಗಿರುವ ಶ್ರೀಮತಿ ದಿವ್ಯಪ್ರಭು ಜಿ.ಆರ್.ಜೆ. ತಮ್ಮ ಮನದಾಳದ ಸಂತಸ ವ್ಯಕ್ತಪಡಿಸಿದರು.
ಚಿತ್ರದುರ್ಗ ನಾಗರೀಕ ವೇದಿಕೆಯಿಂದ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ಹೃದಯಸ್ಪರ್ಶಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ದಿವ್ಯಪ್ರಭು ಜಿ.ಆರ್.ಜಿ. ವರ್ಗಾವಣೆಯಾಗುವುದು ಸಹಜ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಯಾದಾಗ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಬೀಳ್ಕೊಡುಗೆ ನೀಡುವುದನ್ನು ನೋಡಿದ್ದೇನೆ. ಆದರೆ ಚಿತ್ರದುರ್ಗ ಜಿಲ್ಲೆಯ ಜನ ಸೇರಿ ನನಗೆ ಇಂತಹ ಅಭೂತಪೂರ್ವವಾದ ಬೀಳ್ಕೊಡುಗೆ ನೀಡಿರುವುದನ್ನು ಎಂದಿಗೂ ಮರೆಯುವುದಿಲ್ಲ. ಇಲ್ಲಿಯವರೆಗೂ ನನ್ನ ತವರು ಮನೆ ತಮಿಳುನಾಡು ಎಂದು ಹೇಳುತ್ತಿದ್ದೆ. ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆಂದು ಅಂತರಾಳದಿಂದ ನುಡಿದರು.
ಅಧಿಕಾರವಿದ್ದಾಗ ನಿಷ್ಟೆ ಮತ್ತು ಕಾಳಜಿಯಿಂದ ಜನ ಸೇವೆ ಮಾಡಿದಾಗ ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಯಬಹುದು. ಹುಟ್ಟು-ಸಾವಿನ ನಡುವೆ ಸಾರ್ವಜನಿಕವಾಗಿ ಏನು ಮಾಡಿದ್ದೇವೆನ್ನುವುದು ಮುಖ್ಯ. ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟು ಇನ್ನೂರಕ್ಕೂ ಹೆಚ್ಚು ಜನ ಅಸ್ಪಸ್ಥರಾದಾಗ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದೇನೆ. ಅದಕ್ಕೆ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರು ಸಹಕರಿಸಿದರು.
ಒಳ್ಳೆ ಕೆಲಸ ಮಾಡಿದಾಗ ಭಗವಂತ ಯಾವುದೋ ಒಂದು ರೂಪದಲ್ಲಿ ಫಲ ಕೊಡುತ್ತಾನೆ. ಅಧಿಕಾರಿಗಳಾದವರಿಗೆ ಜನಸೇವೆ ಮಾಡುವ ಗುಣವಿರಬೇಕು. ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದಾಗ ಬಡವರ, ಜನ ಸಾಮಾನ್ಯರ ಸಮಸ್ಯೆಗಳಿಗೆ ಹತ್ತಿರವಿದ್ದು, ಕೈಲಾದಷ್ಟು ಒಳ್ಳೆಯದು ಮಾಡಬಹುದು. ಹಾಗಾಗಿ ರಾಜ್ಯದಲ್ಲಿ ನಾನು ಎಲ್ಲಿಯೇ ಅಧಿಕಾರದಲ್ಲಿರಲಿ ಚಿತ್ರದುರ್ಗಕ್ಕೆ ನನ್ನಿಂದ ಏನಾದರೂ ಒಳ್ಳೇದು ಮಾಡುವ ಸಂದರ್ಭ ಸಿಕ್ಕಾಗ ಖಂಡಿತ ಮಾಡುತ್ತೇನೆಂದು ಭರವಸೆ ನೀಡಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ದಿವ್ಯಪ್ರಭು ಧೀರ, ದಿಟ್ಟ ಮಹಿಳೆ. ಸುಸಂಸ್ಕøತ ಕುಟುಂಬದಿಂದ ಬಂದವರು. ಮೊದಲಿಗೆ ಐ.ಎಫ್.ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೆ ಛಲವಿಟ್ಟು ಐ.ಎ.ಎಸ್. ಪಾಸ್ ಆಗಿ ರಾಜ್ಯದ ಅನೇಕ ಕಡೆ ಕೆಲಸ ಮಾಡಿ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಯಾಗಿದ್ದಾರೆ. ಅಲ್ಲಿಯೂ ಅವರ ಸೇವೆ ಜನರಿಗೆ ಸಿಗಲಿ. ಮಹಿಳೆ ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ದಿವ್ಯಪ್ರಭುರವರೆ ಕಣ್ಣ ಮುಂದೆ ಇದ್ದಾರೆಂದು ಬಣ್ಣಿಸಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ ಸರ್ಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ದಿವ್ಯಪ್ರಭುರವರು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ದೊಡ್ಡ ಜಿಲ್ಲೆ ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಕವಾಡಿಗರಹಟ್ಟಿ ಪ್ರಕರಣದಲ್ಲಿ ಸಮರ್ಥವಾಗಿ ಕರ್ತವ್ಯ ನಿಭಾಯಿಸಿದರು. ಮುಂದೆಯೂ ಜನಸೇವೆ ಮಾಡಿ ಉತ್ತಮ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತೆ ಶ್ರೀಮತಿ ವಸಿರೆಡ್ಡಿ ವಿಜಯಜೋತ್ಸ್ನ ಮಾತನಾಡುತ್ತ ಐದು ವರ್ಷಗಳ ಹಿಂದೆ ನಾನು ಕೂಡ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಈಗಲೂ ಜಿಲ್ಲೆಯ ಜನ ನನ್ನ ಮೇಲಿಟ್ಟಿರುವ ಅಭಿಮಾನ ಪ್ರೀತಿಯನ್ನು ಮರೆಯುವುದಿಲ್ಲ. ಇಲ್ಲಿ ಕೆಲಸ ಮಾಡುವಾಗ ಎಲ್ಲರ ಸಹಕಾರ ಸಿಕ್ಕಿದೆ. ಆದರೆ ದಿವ್ಯಪ್ರಭುರವರಿಗೆ ನೀಡಿದಂತ ಬೀಳ್ಕೊಡುಗೆಯನ್ನು ನಾನು ಎಲ್ಲಿಯೂ ನೋಡಿಲ್ಲ. ಇದೊಂದು ಸೆಲೆಬ್ರೇಟಿತರ ಇತ್ತು. ದಿವ್ಯಪ್ರಭುರವರು ನೋಡಲು ಮೃದುವಾಗಿರಬಹುದು. ಆದರೆ ಅವರು ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರಗಳು ಕಠಿಣ ದಿಟ್ಟವಾಗಿರುತ್ತಿದ್ದವು. ಈ ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರು ಮೇವಿನ ಕೊರತೆಯಿದೆ. ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲಿ ಎಂದು ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಅಧಿಕಾರಿಗಳಾದ ಮೇಲೆ ಸರ್ಕಾರ ಹೇಳಿದ ಜಾಗಕ್ಕೆ ಹೋಗಿ ಕೆಲಸ ಮಾಡುವುದು ಅನಿವಾರ್ಯ. ದಿವ್ಯಪ್ರಭು ಜಿಲ್ಲಾಧಿಕಾರಿಯಾಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಯಾಗಿದ್ದರೂ ಚಿತ್ರದುರ್ಗ ನಾಗರೀಕ ವೇದಿಕೆಯಿಂದ ಇಷ್ಟೊಂದು ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿರುವುದು ಹೃದಯಸ್ಪರ್ಶಿಯಾಗಿದೆ. ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್‍ರವರಿಂದ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದೇವೆ. ಹಿಂದುಳಿದ ಬರಪೀಡಿತ ಬಡ ಜಿಲ್ಲೆಯ ಅಭಿವೃದ್ದಿ ಕಡೆ ಗಮನ ಕೊಟ್ಟು ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಹದಿನೇಳು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಜಿಲ್ಲಾಧಿಕಾರಿಯಾಗಿ ಚಿತ್ರದುರ್ಗಕ್ಕೆ ಸರ್ಕಾರ ವರ್ಗಾಯಿಸಿ ಎರಡನೆ ಬಾರಿಗೆ ಇಲ್ಲಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದೆ. ದಿವ್ಯಪ್ರಭು ಇಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆಂದರೆ ಅವರಿಗೆ ನೀಡಿದ ಬೀಳ್ಕೊಡುಗೆಯೇ ಸಾಕ್ಷಿ ಎಂದು ಹರ್ಷ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ತಹಶೀಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತೆ ರೇಣುಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಎಸ್.ಆರ್.ಎಸ್. ವಿದ್ಯಾಸಂಸ್ಥೆಯ ಬಿ.ಎ.ಲಿಂಗಾರೆಡ್ಡಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.