ಉತ್ತಮ ಮಳೆ ಬೆಳೆಯಾಗಿ ಬರಗಾಲ ದೂರವಾಗಲಿ ಎಂದು ತುರುವನೂರು ಶ್ರೀ ಆಂಜನೇಯಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ : ಶಾಸಕ ಟಿ. ರಘುಮೂರ್ತಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಫೆಬ್ರವರಿ. 24 : ಉತ್ತಮ ಮಳೆ ಬೆಳೆಯಾಗಿ ಬರಗಾಲ ದೂರವಾಗಲಿ ಎಂದು ಶ್ರೀ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇನೆ ಎಂದು ಚಳ್ಳಕೆರೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ತುರುವನೂರು ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ಆಂಜನೇಯ ಸ್ವಾಮಿ ಆಶೀರ್ವಾದ ಪಡೆದು ಮಾತನಾಡಿದ ಅವರು. ಮಳೆಯಿಲ್ಲದೆ ಜಿಲ್ಲೆಯ ರೈತರು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಸುರಿದು ಭೂಮಿ ತಾಯಿ ಮಡಿಲು ತಂಪಾಗಿ, ಉತ್ತಮ ಬೆಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ' ಎಂದರು.
ಜಿಲ್ಲೆಯಲ್ಲಿ ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಶಾಸಕರು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯ ಆರು ತಾಲ್ಲೂಕುಗಳು ಈಗಾಗಲೇ ಬರಪೀಡಿತ ತಾಲ್ಲೂಕುಗಳು ಎಂದು ಘೊಷಣೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲೆಲ್ಲಿ ನೀರಿನ ಮೂಲಗಳಿವೆ, ಪೈಪ್‍ಲೈನ್ ವಿಸ್ತರಣೆ, ಬೋರ್‍ವೆಲ್‍ಗಳ ದುರಸ್ತಿ, ಟ್ಯಾಂಕರ್ ಮೂಲಕ ಪೂರೈಕೆಯ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿ ಪಡೆಯಲು ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ.
ನೀರಿನ ಸಮಸ್ಯೆಯಾಗದಂತೆ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿಟ್ಟುಕೊಂಡಿರಬೇಕು. ಮಾಲೀಕರ ಮನವೊಲಿಸಿ ಬಾಡಿಗೆ ನಿಗದಿಪಡಿಸಬೇಕು. ಅಂತಹ ಬೋರ್‍ವೆಲ್‍ಗೆ ಅಗತ್ಯವಿದ್ದರೆ ಪೈಪ್‍ಲೈನ್ ಮಾಡಿಕೊಳ್ಳಬಹುದು. ಒಂದು ವೇಳೆ ನೀರು ಲಭ್ಯವಾಗದೇ ಇರುವ ಪಕ್ಷದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಕೊನೆಯ ಆದ್ಯತೆಯಾಗಬೇಕು ಎಂದು ತಿಳಿಸಿದ್ದೇವೆ
ಚಳ್ಳಕೆರೆ ಕ್ಷೇತ್ರದ ಪ್ರತಿಯೊಂದು ಹಳ್ಳಿಯಿಂದ ಮಾಹಿತಿ ಪಡೆದಿದ್ದು ಅಗತ್ಯ ಯಾವ ಗ್ರಾಮಗಳಿಗೂ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಓ ಗಳಿಗೆ ಸೂಚನೆ ನೀಡಿದ್ದೇನೆ. ತಾಲೂಕು ಪಂಚಾಯತಿ ಇಓ ಅವರಿಗೆ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಎಂದು ಖಡಕ್ ಸೂಚನೆ ನೀಡಿದ್ದೇನೆ. ಜನರಿಗೆ ನೀರಿನ ಭವಣೆ ಬಾರದಂತೆ ತಡೆಯಲು ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುರುವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಮಹೇಶ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ರಾಮಕೃಷ್ಣಾ ರೆಡ್ಡಿ, ಇಂಟೂರು ಶೇಷಾದ್ರಿ ರೆಡ್ಡಿ, ಶುಭಾಸ್ ರೆಡ್ಡಿ, ಮಂಜುನಾಥ, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.