ಹಿರಿಯೂರು | ರೈತನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 17 :ಜಮೀನು ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಕೋಡಿಹಳ್ಳಿ ಗ್ರಾಮ ಲೆಕ್ಕಾಧಿಕಾರಿ ನಾಗಪ್ಪ ಲಮಾಣಿ ಎಂಬುವವರನ್ನು ಸೋಮವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಹಲಗಲದ್ದಿ ಗ್ರಾಮದ ತಿಪ್ಪೇಸ್ವಾಮಿ ಎಂಬುವವರು 1.21 ಎಕರೆ ಜಮೀನನ್ನು ಇತ್ತೀಚೆಗೆ ಖರೀದಿ ಮಾಡಿರುತ್ತಾರೆ. ಅದರ ಮ್ಯುಟೇಷನ್ ಆಗಿದ್ದು, ತನ್ನ ಹೆಸರಿಗೆ ಪ್ರತ್ಯೇಕವಾಗಿ ಪಹಣಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿರುತ್ತಾರೆ. ನಂತರ ಹಲಗಲದ್ದಿ ಗ್ರಾಮ ಲೆಕ್ಕಾಧಿಕಾರಿ ನಾಗಪ್ಪ ಲಮಾಣಿ ಅವರನ್ನು ಹಲವಾರು ಬಾರಿ ಭೇಟಿ ಮಾಡಿದ್ದರೂ ಸಹಾ ಅವರು ಸ್ಪಂದಿಸಿರುವುದಿಲ್ಲ. ಇದರಿಂದಾಗಿ ಬೇಸತ್ತ ರೈತ ಚಿತ್ರದುರ್ಗ ಲೋಕಾಯುಕ್ತ ಕಚೇರಿಗೆ ಬಂದು ಪೊಲೀಸ್ ನಿರೀಕ್ಷಕರಾದ ಶ್ರೀಮತಿ ವೈ.ಎಸ್. ಶಿಲ್ಪಾ ಇವರನ್ನು ಭೇಟಿಯಾಗಿ ಅವರಿಗೆ ದೂರು ಸಲ್ಲಿಸಿರುತ್ತಾರೆ.
ಚಿತ್ರದುರ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಈ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಶ್ರೀಮತಿ ವೈ.ಎಸ್. ಶಿಲ್ಪಾ ಮತ್ತು ಅವರ ತಂಡದಿಂದ ಹಿರಿಯೂರು ತಾಲ್ಲೂಕು ಕಛೇರಿ ಆವರಣದಲ್ಲಿ ಫಿರ್ಯಾದಿಯಿಂದ ರೂ.9,000/-ಗಳ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆರೋಪಿತರಿಂದ ಲಂಚದ ಹಣವನ್ನು ಜಪ್ತಿಪಡಿಸಿಕೊಂಡು ಅವರನ್ನು ಬಂಧಿಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಲೋಕಾಯುಕ್ತ ಕಛೇರಿಯ, ಪೊಲೀಸ್ ನಿರೀಕ್ಷಕರುಗಳಾದ ಬಿ. ಮಂಜುನಾಥ ಮತ್ತು ಸಂಗಮನಾಥ ಹೆಚ್. ಹೊಸಮನಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಜಿ.ಎಂ.ತಿಪ್ಪೇಸ್ವಾಮಿ, ಸಿ.ಹೆಚ್.ಸಿ., ಶ್ರೀ ಹೆಚ್. ಶ್ರೀನಿವಾಸ, ಸಿ.ಹೆಚ್.ಸಿ., ಶ್ರೀಮತಿ ಎಸ್.ಆರ್.ಪುಷ್ಪ, ಮ.ಹೆಚ್.ಸಿ., ಎಲ್.ಜಿ.ಸತೀಶ, ಸಿಪಿಸಿ, ಮಂಜುನಾಥ, ಸಿಪಿಸಿ,ಎಂ. ವೀರೇಶ್, ಸಿಪಿಸಿ, ರಾಜೇಶ್, ಸಿಪಿಸಿ, ಕೆ.ಟಿ. ಮಾರುತಿ, ಸಿಪಿಸಿ, ಆರ್.ವೆಂಕಟೇಶ್ ಕುಮಾರ್, ಇತರರು ಹಾಜರಿದ್ದರು.