ನಾಳೆ ಹಿರಿಯೂರು ತೇರುಮಲ್ಲೇಶ್ವರ ಸ್ವಾಮಿಯ ರಥೋತ್ಸವ
ಸುದ್ದಿಒನ್ : ಹಿರಿಯೂರು : ನಾಳೆ (ಫೆಬ್ರವರಿ 24 ರಂದು) ನಗರದ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. ಫೆಬ್ರವರಿ 13 ರಿಂದ ಮಂಗಳವಾರ ರೇವತಿ ನಕ್ಷತ್ರದ ಶುಭ ಲಗ್ನದಲ್ಲಿ ರಾತ್ರಿ 8ಗಂಟೆಗೆ ಕಂಕಣ ಕಲ್ಯಾಣೋತ್ಸವ ಪೂಜೆಯೊಂದಿಗೆ ಜಾತ್ರೆ ಆರಂಭವಾಗಲಿದೆ. ತಹಶೀಲ್ದಾರ್ ಸಿ ರಾಜೇಶ್ ಕುಮಾರ್ ಪೂಜೆಗೆ ಚಾಲನೆ ನೀಡುವರು. ಇಂದು (ಫೆಬ್ರವರಿ 23 ರ ಶುಕ್ರವಾರ) ಸಂಜೆ ದೊಡ್ಡ ಉತ್ಸವ ನಡೆಯಲಿದೆ. ನಾಳೆ ಫೆಬ್ರವರಿ 24 ರಂದು ಮಧ್ಯಾಹ್ನ ತೇರುಮಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಸಂಜೆ ಶ್ರೀ ಚಂದ್ರಮೌಳೇಶ್ವರ ಮತ್ತು ಶ್ರೀ ಉಮಾಮಹೇಶ್ವರ ದೇವರ ರಥೋತ್ಸವ ನಡೆಯಲಿದೆ. ರಥೋತ್ಸವ ನಡೆದು ಎರಡು ದಿನಗಳ ನಂತರ ಕರ್ಪೂರದಾರತಿ ಕಾರ್ಯಕ್ರಮ ನಡೆಯುತ್ತದೆ ಇದಾದ ಬಳಿಕ ಕಂಕಣ ಬಿಚ್ಚುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ವಿವಿಧ ಹೂಗಳಿಂದ ಅಲಂಕರಿಸಿದ ರಥದಲ್ಲಿ ಶ್ರೀ ದೇವರನ್ನು ಕೂರಿಸಿ, ಪೂಜೆ ಸಲ್ಲಿಸಲಾಗುತ್ತದೆ. ನಂತರ ರಥೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿ ಸಿ ರಾಜೇಶ್ ಕುಮಾರ್ ಚಾಲನೆ ನೀಡಲಿದ್ದಾರೆ. ನಂತರ ಸ್ವಾಮೀಯ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಲಿದೆ.
ವೀರಕರಿಯಣ್ಣ ನೇತೃತ್ವದಲ್ಲಿ ರಥೋತ್ಸವ : ಬುಡಕಟ್ಟು ಕಾಡುಗೊಲ್ಲರ ಆರಾಧ್ಯದೈವನಾದ ವೀರಕರಿಯಣ್ಣ ದೇವರು ಬರುವವರೆಗೂ ತೆರುಮಲ್ಲೇಶ್ವರನ ರಥ ಮುಂದಕ್ಕೆ ಚಲಿಸುವುದಿಲ್ಲ. ಹಿರಿಯೂರು ತಾಲೂಕಿನ ಬೀರನಹಳ್ಳಿ ಮುಜರೆ ಗ್ರಾಮದ ಕರಿಯ್ಯನಹಟ್ಟಿ ಗ್ರಾಮದ ವೀರ ಕರಿಯಣ್ಣ ದೇವರು ತೇರುಮಲ್ಲೇಶ್ವರ ಆಸ್ಥಾನಕ್ಕೆ ಬಂದ್ಮೇಲೆ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಈ ಹಿಂದೆ ಹೊಸದುರ್ಗ ತಾಲೂಕಿನ ಯಗಟಿ ಎಂಬಲ್ಲಿ ಮಲ್ಲೆಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ, ಮಳೆ ಆರಂಭವಾಗಿ ವೇದಾವತಿ ನದಿಯ ಪ್ರವಾಹದಲ್ಲಿ ರಥ ಕೊಚ್ಚಿ ಬರುತ್ತದೆ. ನದಿಯಲ್ಲಿ ಕೊಚ್ಚಿ ಬಂದ ರಥ ಇಲ್ಲಿನ ರಾಜರ ಗಮನಕ್ಕೆ ಬರುತ್ತದೆ. ಆನೆ, ಕುದುರೆ ಮೂಲಕ ರಥವನ್ನು ಮೆಲಕ್ಕೆತ್ತುವ ಕಾರ್ಯ ನಡೆಯುತ್ತದೆ. ಆದರೆ ಬರುವುದಿಲ್ಲ. ರಥವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಗ ಪಶುಪಾಲಕ ನಾಗಿದ್ದ ವೀರ ಕರಿಯಣ್ಣ ನೋಡಿ ಅಪ್ಪಣೆ ಕೊಟ್ಟರೆ ನಾನು ರಥವನ್ನು ದಡಕ್ಕೆ ಎಳೆಯುತ್ತಲೇನೆಂದು ಕೇಳಿದಾಗ ರಾಜರು ಅಪ್ಪಣೆ ಕೊಡುತ್ತಾರೆ. ನಂತರ ವೀರ ಕರಿಯಣ್ಣನು ಎರಡು ಹೋರಿಗಳ ಮೂಲಕ ಹೆಗಲ ಮೇಲೆ ಕಂಬಳಿಯನ್ನು ತೆಗೆದು ಹಗ್ಗವನ್ನಾಗಿ ಮಾಡಿ ರಥಕ್ಕೆ ಕಟ್ಟಿ ಯಾರು ನೋಡದ ಮಧ್ಯರಾತ್ರಿ ಸಮಯದಲ್ಲಿ ದೇವಸ್ಥಾನದ ಮುಂದಕ್ಕೆ ರಥವನ್ನು ಎಳೆದು ತಂದು ನಿಲ್ಲಿಸುತ್ತಾನೆ.
ಬೆಳಗ್ಗೆ ರಥವನ್ನು ನೋಡಿದ ಭಕ್ತರು ಅಚ್ಚರಿ ಪಡುತ್ತಾರೆ. ಈ ಹಿಂದೆ ತೇರುಮಲ್ಲೇಶ್ವರ ದೇವಸ್ಥಾನವನ್ನು ಕಟ್ಟುವ ಸಂದರ್ಭದಲ್ಲಿ ತಳಪಾಯ ಹಾಕುವಾಗ ಪೂಜಾ ಕಾರ್ಯಕ್ರಮದಲ್ಲಿ ಹಾಲುತುಪ್ಪ ಬಿಡುವ ಸಂಪ್ರದಾಯವಿರುತ್ತದೆ. ಬುಡಕಟ್ಟು ಕಾಡುಗೊಲ್ಲರ ವೀರಗಾರನಾದ ಕರಿಯಣ್ಣ ಒಬ್ಬ ಪೂಜಾರಿ ಹಾಗೂ ಅಪಾರ ದೈವ ಭಕ್ತ ಉಳ್ಳವನಾಗಿದ್ದನು. ಪಶುಪಾಲಕ ನಾದ ವೀರ ಕರಿಯಣ್ಣ ದೇಗುಲದ ಅಡಿಪಾಯಕ್ಕೆ ಹಾಲನ್ನ ಮೀಸಲಾಗಿ ತಂದು ಅಡಿಪಾಯಕ್ಕೆ ಹಾಕುತ್ತಾನೆ. ಅಂದಿನಿಂದ ಇಂದಿನವರೆಗೂ ಕರಿಯಣ್ಣ ಮುಂದಾಳತ್ವದಲ್ಲಿ ರಥೋತ್ಸವ ನಡೆಯುತ್ತದೆ ಎಂದು ಗ್ರಾಮದ ಹಿರಿಯ ವ್ಯಕ್ತಿ ಕೆ. ವೀರಪ್ಪ ತಿಳಿಸುತ್ತಾರೆ. ಕೆಂಚಪ್ಪ ನಾಯಕ ಮಾಯಸಂದ್ರ ಗ್ರಾಮದವರಾಗಿದ್ದು, ವೀರ ಕರಿಯಣ್ಣ ಪಕ್ಕದ ಬೀರೆನಹಳ್ಳಿ ಕರಿಯ್ಯನಹಟ್ಟಿ ಗ್ರಾಮದ ಆಗಿದ್ದರು ಇಬ್ಬರಿಬ್ಬರಿಗೂ ಅವಿನಾಭಾವ ಸಂಬಂಧ ಇತ್ತು ಎನ್ನಬಹುದು.
"ಪಾಳೇಗಾರ ವಂಶಸ್ಥ ರಾಜ ಕೆಂಚಪ್ಪ ನಾಯಕ 1446ರಲ್ಲಿ ನಿರ್ಮಿಸಿರುವ ತೇರುಮಲ್ಲೇಶ್ವರ ಸ್ವಾಮಿ ದೇಗುಲದ ಮೂಲವಿಗ್ರಹ ಕಾಶಿಯಲ್ಲಿ ಇರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಕಾರಣಕ್ಕೆ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಶ್ರೀ ಶೈಲ ಮಲ್ಲಿಕಾರ್ಜುನ ಪರಮ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀ ಶೈಲಕ್ಕೆ ನಡೆದುಕೊಂಡು ಹೋಗಿ ದರ್ಶನ ಮಾಡಿ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕನಸಿನಲ್ಲಿ ಕಾಣಿಸಿಕೊಂಡ ಮಲ್ಲಿಕಾರ್ಜುನ ಸ್ವಾಮಿ ಮಾತು ಕೊಟ್ಟಿದ್ದರ ಪರಿಣಾಮವಾಗಿ ಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಾಣವಾಗಿದೆ ಎಂಬುದು ನಂಬಿಕೆಯಾಗಿದೆ.
ಹಿರಿಯೂರಿನಲ್ಲಿ ನೆಲೆಸಿದ್ದ ಮಲ್ಲಮ್ಮ ಆಗಾಗ ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ದರ್ಶನ ಮಾಡಿ ಬರುತ್ತಿದ್ದಳು. ಒಮ್ಮೆ ಹೀಗೆಯೇ ಶ್ರೀಶೈಲಕ್ಕೆ ಪ್ರಯಾಣಿಸುವಾಗ ದಣಿವಾಗಿ ಎಲೆ ಅಡಿಕೆ ಹಾಕಿಕೊಳ್ಳಲು ಬಯಸಿದಳು. ಅಡಿಕೆ ಪುಡಿ ಮಾಡಿಕೊಳ್ಳಲು ಕಲ್ಲೊಂದನ್ನು ಎತ್ತಿಕೊಂಡು ಪುಡಿಮಾಡಿ ನಂತರ ಬಿಸಾಡುತ್ತಾರೆ. ಮುಂದೆ ದಾರಿಯಲ್ಲಿ ಎರಡು ಮೂರು ಬಾರಿ ಅಡಿಕೆ ಪುಡಿ ಮಾಡುವಾಗಲೂ ಅದೇ ಕಲ್ಲು ಸಿಕ್ಕಿದ್ದಲ್ಲದೆ, ಮನೆಗೆ ಮರಳಿ ಬಂದಾಗಲೂ ತನ್ನ ಅಡಿಕೆ ಚೀಲದಲ್ಲಿ ಆಕಲ್ಲು ಗೋಚರಿಸುತ್ತದೆ. ಅಚ್ಚರಿಗೊಂಡ ಮಲ್ಲಮ್ಮ ಅದನ್ನು ಹೊರಗೆ ಬಿಸಾಡಿದಾಗ ಅದು ಮನೆಯ ಒಳಗಿದ್ದ ಒಳ ಕಲ್ಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ. ಚೆನ್ನಮಲ್ಲಿಕಾರ್ಜುನನ ಸ್ಮರಣೆಯಲ್ಲಿ ಮಲಗಿದ್ದ ಮಲ್ಲಮ್ಮನಿಗೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವರು "ಇನ್ನು ನಿನಗೆ ವಯಸ್ಸಾಯಿತು. ಶ್ರೀಶೈಲಕ್ಕೆ ಬರುವ ತೊಂದರೆ ತೆಗೆದುಕೊಳ್ಳಬೇಡ. ಕಲ್ಲಿನ ರೂಪದಲ್ಲಿ ಬಂದವನು ನಾನೇ ಇಲ್ಲಿ ನನ್ನನ್ನು ಪೂಜಿಸು" ಎಂದು ಹೇಳಿ ಮಾಯವಾದನಂತೆ. ಕನಸಿನಿಂದ ಎಚ್ಚರಗೊಂಡು ನೋಡಿದಾಗ ಒಳಕಲ್ಲಿನಲ್ಲಿ ಇದ್ದ ಕಲ್ಲು ಲಿಂಗ ವಾಗಿತ್ತು. ಈ ಘಟನೆ ನಂತರ ಮಲ್ಲಮ್ಮನ ಮನೆಯೇ ಮಲ್ಲೇಶ್ವರ ದೇಗುಲ ವಾಯಿತು ಎಂಬ ಪ್ರತೀತಿ ಇದೆ.