ಹಿರಿಯೂರು | ವಾಣಿ ವಿಲಾಸ ಸಾಗರಕ್ಕೆ ಒಳಹರಿವು ಹೆಚ್ಚಳ : ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ ? ಇಲ್ಲಿದೆ ಮಾಹಿತಿ...!
ಸುದ್ದಿಒನ್, ಹಿರಿಯೂರು, ಜುಲೈ. 29 : ಮಳೆಗಾಲ ಶುರುವಾದಾಗಿನಿಂದ ಈ ವರ್ಷ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಹಳ್ಳಕೊಳ್ಳಗಳು, ನದಿಗಳು ತುಂಬಿ ಹರಿಯುವಷ್ಟು ಮಳೆಯಾಗುತ್ತಿದೆ. ಈ ಬಾರಿ ಉತ್ತಮ ಮಳೆ ಜೊತೆಗೆ ಉತ್ತಮ ಬೆಳೆಯಾಗುವ ಎಲ್ಲಾ ಲಕ್ಷಣಗಳು ಕೂಡ ಇದೆ.
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ 974 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 113.50 ಅಡಿಗೆ ಏರಿಕೆಯಾಗಿದೆ.
ಅತ್ತ ಕೆಲ್ಲೋಡ್ ಚೆಕ್ ಡ್ಯಾಂ ಮೈದುಂಬಿ ಹರಿಯುತ್ತಿದ್ದು, ಈ ನೀರು ವೇದಾವತಿ ನದಿ ಮೂಲಕ ವಾಣಿ ವಿಲಾಸ ಜಲಾಶಯ ಸೇರುತ್ತಿದೆ. ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಸಹ ಜಲಾಶಯಕ್ಕೆ ನೀರು ಸಂಗ್ರಹವಾಗಿತ್ತು. ಇದೀಗ ಮತ್ತೆ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಶನಿವಾರ ಮದಗದಕೆರೆ ಉಕ್ಕಿ ಹರಿದಿತ್ತು, ಮತ್ತೊಂದು ಕಡೆ ಅಯ್ಯನಕೆರೆಯೂ ಉಕ್ಕಿ ಹರಿಯುತ್ತಿರುವುದರಿಂದ ವೇದಾವತಿ ನದಿಗೆ ಹೆಚ್ಚು ನೀರು ಹರಿದು ಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗುತ್ತಿರುವ ಕಾರಣ ಅಲ್ಲಿನ ಕೆರೆಗಳು ತುಂಬಿರುವುದರಿಂದ ವಿವಿ ಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಏರಿಕೆಯಾಗಿದೆ.
ವಾಣಿ ವಿಲಾಸ ಸಾಗರದಲ್ಲಿ ಡ್ಯಾಂ ನಲ್ಲಿ ಸೋಮವಾರ 974 ಕ್ಯೂಸೆಕ್ ಒಳಹರಿವು ಕಂಡು ಬಂದಿದೆ. ಈ ಭಾಗದಲ್ಲಿ ಅಷ್ಟಾಗಿ ಮಳೆ ಆಗಿರಲಿಲ್ಲ. ಆದರೂ ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳ ಮಳೆ ನಿರೇ ಆಸರೆಯಾಗಿತ್ತು. ಅಲ್ಲೆಲ್ಲ ನದಿ, ಕೆರೆಗಳು ಭರ್ತಿಯಾಗಿ ವೇದಾವತಿ ನದಿಯತ್ತ ಹರಿಯುತ್ತಿವೆ ಈ ನೀರು ಮುಂದಿನ ಬೇಸಿಗೆವರೆಗೂ ನೀರಾವರಿಗೆ, ಕುಡಿಯಲು ಅನುಕೂಲವಾಗಲಿದೆ.
ಬಯಲು ಸೀಮೆಯ ಈ ಭಾಗದಲ್ಲಿ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ವ್ಯಾಪ್ತಿಯ ಜನರಿಗೆ ವಾಣಿವಿಲಾಸ ಸಾಗರದ ನಿರೇ ಪ್ರಮುಖ ಆಧಾರ.