ಹಿರಿಯೂರು | ಪೊಲೀಸ್ ಪಡೆಯಿಂದ ಹೆಲ್ಮೆಟ್ ಜಾಗೃತಿ
ಸುದ್ದಿಒನ್, ಹಿರಿಯೂರು, ಜನವರಿ. 31 : ಸುರಕ್ಷತೆಗಾಗಿ ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ತಮ್ಮ ಜೀವವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದು ಡಿವೈಎಸ್ಪಿ ಚೈತ್ರ ತಿಳಿಸಿದರು.
ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದ್ವಿಚಕ್ರ ವಾಹನ ಹಾಗೂ ಇತರೆ ವಾಹನ ಸವಾರರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸದಾ ಕಡ್ಡಾಯವಾಗಿ ಜೊತೆಯಲ್ಲಿಟ್ಟುಕೊಂಡಿರಬೇಕು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಸ್ಥಳದಲ್ಲಿಯೇ ದಂಡ ತೆರಬೇಕಾಗುತ್ತದೆ. ಇನ್ನು 18 ವರ್ಷದ ಒಳಗಿನವರು ವಾಹನ ಚಲಾಯಿಸುವುದು ಅಪರಾಧ ಎಂದರು. ನಗರದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲಯಿಸಿದರೆ ಅಂತವರ ವಾಹನವನ್ನು ಜಪ್ತಿ ಮಾಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಯಮಕಿಂಕರನ ವೇಷ ಧರಿಸಿದ ವ್ಯಕ್ತಿಯೊಂದಿಗೆ ಪೊಲೀಸ್ ಪಡೆಯಿಂದ ಹೆಲ್ಮೆಟ್ ಧರಿಸಿ ಬೈಕ್ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಪಿಎಸ್ಐಗಳಾದ ಮಂಜುನಾಥ್, ಶಶಿಕಲಾ, ಲಕ್ಷ್ಮೀನಾರಾಯಣ್, ಸಿಬ್ಬಂದಿಗಳಾದ ರಾಘವೇಂದ್ರ, ರುದ್ರಮುನಿ, ಸುರೇಶ್ ನಾಯ್ಕ್, ರವಿ, ಮಂಜುನಾಥ್, ಹಾಲೇಶ್, ಧನಂಜಯ್ ಸೇರಿದಂತೆ ಮತ್ತಿತರರು ಇದ್ದರು.