Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿರಿಯೂರು | ಸಾರ್ವಜನಿಕರ ದಶಕಗಳ ಸಮಸ್ಯೆ ಬಗೆಹರಿಯಲಿದೆ : ಸಚಿವ ಡಿ ಸುಧಾಕರ್ ಹೇಳಿಕೆ

06:02 PM Oct 14, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 14 : ನಗರದ ಬಹುದೊಡ್ಡ ಸಮಸ್ಯೆಯಾಗಿದ್ದ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ದೊರೆತಿದ್ದು ನಗರದ ಸಾರ್ವಜನಿಕರ ದಶಕಗಳ ಸಮಸ್ಯೆ ಶೀಘ್ರವಾಗಿ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.

Advertisement

ನಗರದ ತಾಲೂಕು ಕಚೇರಿ ಬಳಿ ಸೋಮವಾರ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಹಂತ ನಾಲ್ಕರ ಅಡಿ ಮಂಜೂರಾಗಿರುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ನಗರ ದಿನೇ ದಿನೇ ಬೆಳೆಯುತ್ತಿದ್ದು ಜನಸಂಖ್ಯೆ ಹೆಚ್ಚಿದಂತೆ, ವಾಹನಗಳ ಸಂಖ್ಯೆಯೂ ಹೆಚ್ಚಿದ್ದು ರಸ್ತೆಯ ಗಾತ್ರ ಹಿರಿದಾಗಿಸುವ ಕಾರ್ಯಕ್ಕೆ ಇದೀಗ ಭರದ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ರಸ್ತೆ ಆಸು ಪಾಸಿನ ಅಂಗಡಿಗಳ,ಕಟ್ಟಡಗಳ ಮಾಲೀಕರ ಜೊತೆ ಸಭೆ ನಡೆಸಿ ರಸ್ತೆ ವಿಸ್ತರಣೆಯ ಅವಶ್ಯಕತೆ ಮತ್ತು ಅನಿವಾರ್ಯತೆ ವಿವರಿಸಲಾಗಿತ್ತು. ಎಲ್ಲರೂ ರಸ್ತೆ ವಿಸ್ತರಣೆ ಕಾಮಗಾರಿಗೆ ಒಪ್ಪಿದ್ದು ಈ ಬಾರಿ ರಸ್ತೆ ಅಗಲೀಕರಣ ಕಾಮಗಾರಿ ಸರಾಗವಾಗಿ ನಡೆಯಲಿದೆ. ನಗರದ ಅಭಿವೃದ್ಧಿ ಮತ್ತು ಸುರಕ್ಷತೆಯ ಸಂಚಾರಕ್ಕೆ ರಸ್ತೆ ವಿಸ್ತರಣೆ ತುರ್ತು ಅಗತ್ಯವಿದ್ದು ಆದಷ್ಟು ಬೇಗ ಈ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ.

Advertisement

ರಸ್ತೆ ಅಕ್ಕಪಕ್ಕದ ಮರಗಳ ತೆರವು ಕಾರ್ಯ ಮುಗಿದಿದ್ದು ಕಟ್ಟಡಗಳ ತೆರವು ಕಾರ್ಯವೂ ಇಂದಿನಿಂದ ಶುರುವಾಗಿದೆ. ಕಟ್ಟಡಗಳ ಮಾಲೀಕರು, ಸಾರ್ವಜನಿಕರ ಸಹಕಾರ ಪಡೆದು ಕಟ್ಟಡಗಳ ತೆರವು ಕಾರ್ಯ ನಡೆಯಲಿದೆ.ವಾಹನ ಸವಾರರು ಸಹ ಸಹಕಾರ ನೀಡಿ ಆದಷ್ಟು ಬೇಗ ರಸ್ತೆ ವಿಸ್ತರಣೆಯಾದರೆ ಸುಗಮ ಸಂಚಾರದ ಜೊತೆಗೆ ನಗರದ ಸೌಂದರ್ಯವೂ ಹೆಚ್ಚಲಿದೆ ಎಂದರು.

ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ ನಗರದ ಐದನೇ ವಾರ್ಡ್ ನಿಂದ ಒಂಬತ್ತನೇ ವಾರ್ಡ್ ನಲ್ಲಿ ಹಾದು ಹೋಗಿರುವ ಟಿಬಿ ವೃತ್ತದಿಂದ ತಾಲೂಕು ಕಛೇರಿ ಸೇತುವೆವರೆಗಿನ 1217.30 ಲಕ್ಷ ವೆಚ್ಚದ ಮುಖ್ಯ ರಸ್ತೆ ಅಗಲೀಕರಣ, ವೀಡಿಯನ್ ಮತ್ತು ಚರಂಡಿ ಕಾಮಗಾರಿಗೆ ಸಚಿವರು ಸೋಮವಾರ ಭೂಮಿ ಪೂಜೆ ನೆರವೇರಿಸಿದ್ದು, ತ್ವರಿತ ಗತಿಯಲ್ಲಿ ಕಟ್ಟಡಗಳ ತೆರವು ಕಾರ್ಯ ಮುಗಿಸಲಾಗುವುದು. ಈಗಾಗಲೇ ರಸ್ತೆ ಪಕ್ಕದ ಸರ್ಕಾರಿ ಕಟ್ಟಡಗಳ ತೆರವು ಕಾರ್ಯ ನಡೆದಿದ್ದು ಉಳಿದ ಕಟ್ಟಡಗಳ ತೆರವು ಕಾರ್ಯ ನಿರಂತರವಾಗಿ ನಡೆಯಲಿದೆ. ಟ್ರಾಫಿಕ್ ಸಮಸ್ಯೆಯಿಂದ ಬಳಲಿದ ನಗರದ ಜನತೆಗೆ ಇನ್ನಾದರೂ ಸುಗಮ ಹಾಗೂ ಸುರಕ್ಷತೆಯ ಸಂಚಾರ ಒದಗಲಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿ ರಾಜೇಶ್ ಕುಮಾರ್, ನಗರಸಭೆ ಪೌರಾಯುಕ್ತ ಎ. ವಾಸಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಸದಸ್ಯರಾದ ಬಿಎನ್ ಪ್ರಕಾಶ್, ಗುಂಡೇಶ್ ಕುಮಾರ್, ಶಿವಕುಮಾರ್, ಮುಖಂಡರಾದ ಸಾದತ್ ಉಲ್ಲಾ, ಕಲ್ಲಹಟ್ಟಿ ಹರೀಶ್, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Tags :
bengaluruchitradurgahiriyurMinister D. Sudhakarsuddionesuddione newsಚಿತ್ರದುರ್ಗಬೆಂಗಳೂರುಸಚಿವ ಡಿ.ಸುಧಾಕರ್ಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article