ಹಿರಿಯೂರು | ಅದ್ದೂರಿಯಾಗಿ ನೇರವೇರಿದ ವಿಷ ಜಂತುಗಳ ಪರಿಹಾರಕ ರಂಗನಾಥ ಸ್ವಾಮಿಯ ಅಂಬಿನೋತ್ಸವ
ಸುದ್ದಿಒನ್, ಹಿರಿಯೂರು, ಅಕ್ಟೋಬರ್. 13 : ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ಹಿನ್ನೀರಿನ ದಡದಲ್ಲಿರುವ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಹಾಗೂ ಹಾವು, ಚೇಳುಗಳ ಅರ್ಪಿಸುವ ಹರಕೆಯ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ 1 ಗಂಟೆ ಸಮಯದಲ್ಲಿ ಸಂಭ್ರಮ ಸಡಗರದಿಂದ ನೇರವೇರಿತು.
ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನ ಗಡಿಭಾಗದಲ್ಲಿ ಹರಿಹರರು ನೆಲೆಸಿದ್ದ ಪ್ರಮುಖ ಕ್ಷೇತ್ರವೆಂದು ಕರೆಯುವ ಹಾರನಕಣಿವೆ ಕ್ಷೇತ್ರದ ಅಪಾರ ಮಹಿಮೆ ಹಾಗೂ ಭಕ್ತರನ್ನು ಹೊಂದಿರುವ ಪುಣ್ಯ ಕ್ಷೇತ್ರವಾಗಿದ್ದು, ಶ್ರೀ ರಂಗನಾಥಸ್ವಾಮಿಯ ದಸರಾ ಪ್ರಯುಕ್ತ ವಿಶೇಷ ಜಾತ್ರೆ, ಅಂಬಿನೋತ್ಸವ ಹಾಗೂ ವಿಶೇಷ ಪೂಜೆಗಳು ನಡೆದವು.
ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಿದರು. ನಂತರ ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಪೂಜಾರಿಯು ಮೂರು ಬಾರಿ ಪ್ರದಕ್ಷಿಣೆ ಹಾಕಿ, ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಗಿಡ ಕಡಿಯುವ ಮೂಲಕ ಅಂಬಿನೋತ್ಸವ ಕಾರ್ಯ ನೇರವೇರಿತು.