For the best experience, open
https://m.suddione.com
on your mobile browser.
Advertisement

ಹೆಚ್ಚಿನ ಶುಲ್ಕ ವಸೂಲಿ - ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಟಿ.ವೆಂಕಟೇಶ್

09:55 PM May 21, 2024 IST | suddionenews
ಹೆಚ್ಚಿನ ಶುಲ್ಕ ವಸೂಲಿ   ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ   ಟಿ ವೆಂಕಟೇಶ್
Advertisement

ಚಿತ್ರದುರ್ಗ : ಮೇ 21: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದರು.

Advertisement

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಕಲಿಕೆಯಲ್ಲಿ ಗುಣಾತ್ಮಕ ಸುಧಾರಣೆ ಮತ್ತು ಮಾದರಿ ಫಲಿತಾಂಶದ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ದಾಖಲಾತಿಯ ಆರಂಭ, ಅಗತ್ಯ ದಾಖಲೆಗಳು, ದಾSಲಾತಿಯ ಮುಕ್ತಾಯ, ಶುಲ್ಕ, ಸರ್ಕಾರದ ಮಾನದಂಡ, ಮತ್ತಿತರ ನಿಬಂಧನೆಗಳ ಕುರಿತು ಜನಸಾಮಾನ್ಯರಿಗೆ ಹಾಗೂ ಪೋಷಕರಿಗೆ ತಿಳಿಯುವಂತೆ ಶಾಲೆಯ ಪ್ರಕಟಣಾ ಫಲಕದಲ್ಲಿ ಮಾಹಿತಿಯನ್ನು ಬಿತ್ತರಿಸುವಂತೆ ಸೂಚಿಸಿದರು.

Advertisement

ಚಿತ್ರದುರ್ಗ ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು, ಜನಜೀವನ ನಡೆಸುವುದು ದುಸ್ತರವಾಗಿರುವ ಈ ಸಂದರ್ಭದಲ್ಲಿ ಶಾಲಾ ದಾಖಲಾತಿಗಾಗಿ ಹೆಚ್ಚಿನ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಪಡೆದು ಮಕ್ಕಳ ದಾಖಲಾತಿ ಮಾಡಿಕೊಳ್ಳಬೇಕು. ಕೆಲವು ಸಂದರ್ಭದಲ್ಲಿ ಮಕ್ಕಳಿಗೆ ಶುಲ್ಕ ಪಾವತಿಸಲು ಕಷ್ಟಸಾಧ್ಯವಾದಲ್ಲಿ ಸುಲಭ ಕಂತಿನಲ್ಲಿಹಣ ಪಾವತಿಸಲು ಅವಕಾಶ ನೀಡಬೇಕು. ಒಟ್ಟಾರೆಯಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಜನಸ್ನೇಹಿಯಾಗಿ ವ್ಯವಹರಿಸುವಂತೆ ಸಲಹೆ ನೀಡಿದರು.

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಅತ್ಯಂತ ಕನಿಷ್ಠವಾಗಿದೆ. ಈ ಕಳಪೆ ಫಲಿತಾಂಶಕ್ಕೆ ಸೂಕ್ತ ಕಾರಣ ಏನು ಎನ್ನುವ ಬಗ್ಗೆಯೂ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅವಲೋಕನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ಆರಂಭದಲ್ಲಿಯೇ ಕಳೆದ ಸಾಲಿನ ನ್ಯೂನತೆಗಳು ಮರುಕಳಿಸದಂತೆ ಫಲಿತಾಂಶ ಸುಧಾರಣೆಗೊಳಿಸಲು ಶಿಕ್ಷಕರು ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ಅಗತ್ಯವಿದ್ದಲ್ಲಿ ವಿಷಯ ತಜ್ಞರನ್ನು ಆಹ್ವಾನಿಸಿ, ಅವರಿಂದ ವಿಷಯಾಧಾರಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಮುಂದಿನ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷಾ ಫಲಿತಾಂಶ ಉತ್ತಮ ಶ್ರೇಣಿಯಲ್ಲಿದ್ದು, ಮುಂಚೂಣಿ ಹತ್ತರಲ್ಲಿ ಒಂದಾಗಿರುವಂತೆ ಶಿಕ್ಷಕರು ಗಮನಹರಿಸಬೇಕು. ಅದಕ್ಕಾಗಿ ಶಿಕ್ಷಕರು ಈಗಿನಿಂದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆಂಗ್ಲ, ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರು ವಿಶೇಷವಾಗಿ ಕಾಳಜಿ ವಹಿಸಬೇಕೆಂದ ಅವರು, ಎಲ್ಲಾ ಶಿಕ್ಷಕರು ತಮ್ಮ ಜವಾಬ್ದಾರಿಯರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದವರು ನುಡಿದರು.

ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕರು ಮಾಡಿಕೊಂಡಿರುವ ಸಿದ್ಧತೆಗಳ, ಬೋಧನಾ ಕ್ರಮಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಖುದ್ದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಸೂಕ್ತ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಶಿಕ್ಷಕರ ಕ್ರಮವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಅಲ್ಲದೇ ಅಂತಹ ಶಿಕ್ಷಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸುಧಾರಣಾ ಕ್ರಮವಾಗಿ ದಕ್ಷ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.

ನಾಗಾಲೋಟದಲ್ಲಿ ಓಡುತ್ತಿರುವ ವಿಶ್ವದ ವೇಗಕ್ಕೆ ನಮ್ಮ ಮಕ್ಕಳನ್ನು ಸಿದ್ಧಪಡಿಸುವುದು ಸವಾಲಿನ ಕೆಲಸ. ಎಲ್ಲಾ ಸೌಲಭ್ಯಗಳನ್ನು ಪಡೆದು, ಶಿಕ್ಷಣ ಪಡೆಯುತ್ತಿರುವ ನಗರದ ಮಕ್ಕಳ ಶೈಕ್ಷಣಿಕ ವೇಗಕ್ಕೆ ಯಾವುದೇ ಅತ್ಯಾಧುನಿಕ ಸೌಲಭ್ಯಗಳನ್ನು ಕಾಣದಿರುವ ಗ್ರಾಮೀಣ ಮಕ್ಕಳನ್ನು ಸಿದ್ಧಪಡಿಸಿ, ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವ ಬೆಳೆಸಲು ಶಿಕ್ಷಕರು ಮಾನವೀಯ ನೆಲೆಯಲ್ಲಿ ಪ್ರಾಮಾಣಕವಾಗಿ ಕಾರ್ಯನಿರ್ವಹಿಸಬೇಕು. ಇದು ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ನಾಸಿರುದ್ದೀನ್,  ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ ಸೇರಿದಂತೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

Tags :
Advertisement