ದುಶ್ಚಟಗಳಿಂದ ದೂರವಿದ್ದರೆ ಹೃದಯಾಘಾತ ತಡೆಗಟ್ಟಬಹುದು : ಹೃದಯ ತಜ್ಞ ಡಾ.ಶಾಂತಕುಮಾರ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.05 : ಆಧುನಿಕ ಯುಗದಲ್ಲಿ ಒತ್ತಡದ ಜೀವನದಲ್ಲಿ ಎಲ್ಲರೂ ಬದುಕುತ್ತಿರುವುದರಿಂದ ಹೃದಯಾಘಾತ ಎನ್ನುವುದು ಸಾಮಾನ್ಯವಾಗಿದೆ ಎಂದು ಎಸ್.ಎಸ್.ನಾರಾಯಣ ಆಸ್ಪತ್ರೆಯ ಹೃದಯ ತಜ್ಞ ಡಾ.ಶಾಂತಕುಮಾರ್ ತಿಳಿಸಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜ, ಎಸ್.ಎಸ್.ನಾರಾಯಣ ಆಸ್ಪತ್ರೆ ದಾವಣಗೆರೆ ಇವರ ಸಹಯೋಗದೊಂದಿಗೆ ಸಿಟಿ ಕ್ಲಬ್ ಬಿಲ್ಡಿಂಗ್‍ನಲ್ಲಿರುವ ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಚೇರಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅತಿಯಾದ ಧೂಪಪಾನ, ಮದ್ಯಪಾನ ಕೂಡ ಹೃದಯಾಘಾತಕ್ಕೆ ಆಹ್ವಾನವಿದ್ದಂತೆ. ಹಾಗಾಗಿ ದುಶ್ಚಟಗಳಿಂದ ದೂರವಿರುವ ಮೂಲಕ ಹೃದಯಾಘಾತವನ್ನು ತಡೆಗಟ್ಟಬಹುದಾಗಿದೆ. ಹಿಂದಿನ ಕಾಲದಲ್ಲಿ ದೈಹಿಕ ಶ್ರಮವಿತ್ತು. ಈ ಎಲ್ಲದಕ್ಕೂ ಯಂತ್ರಗಳನ್ನು ಬಳಸುತ್ತಿರುವುದರಿಂದ ಮಾನವ ಸೋಮಾರಿಯಾಗುತ್ತಿದ್ದಾನೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಇವುಗಳು ಹೆಚ್ಚು ಅಪಾಯಕಾರಿ. ಸದೃಢ ಆರೋಗ್ಯಕ್ಕಾಗಿ ಪ್ರತಿನಿತ್ಯ ಕನಿಷ್ಟ ಒಂದು ಗಂಟೆಯಾದರೂ ಯೋಗ, ಧ್ಯಾನ ಮಾಡಬೇಕು. ಜೊತೆಗೆ ಬೆಳಿಗ್ಗೆ ಸಂಜೆ ವೇಳೆ ವಾಯುವಿಹಾರ ಪದ್ದತಿ ಅಳವಡಿಸಿಕೊಂಡರೆ ಸೂಕ್ತ ಎಂದು ಡಾ.ಶಾಂತಕುಮಾರ್ ಹೇಳಿದರು.
ಎದೆನೋವು, ಉಸಿರಾಟದ ತೊಂದರೆ, ಅನಿಯಮಿತ ಹೃದಯ ಬಡಿತ, ಭುಜದಲ್ಲಿ ನೋವು, ದುರ್ಬಲತೆ, ತಲೆಸುತ್ತುವಿಕೆ, ಬೆವರುವುದು, ವಾಕರಿಕೆಯಾಗುವ ಲಕ್ಷಣವಿರುವವರನ್ನು ತಪಾಸಣೆ ನಡೆಸಿ ಹೃದಯ ತಪಾಸಣಾ ಶಿಬಿರದಲ್ಲಿ ಸೂಕ್ತ ಸಲಹೆಗಳನ್ನು ನೀಡಲಾಯಿತು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ, ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಉಪಾಧ್ಯಕ್ಷರುಗಳಾದ ನಾಗರಾಜ್ ಸಂಗಮ್, ಲಾಯರ್ ವಿಶ್ವನಾಥ್ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.