ಆಡುಮಲ್ಲೇಶ್ವರ ಮೃಗಾಲಯದ ಸಿಬ್ಬಂದಿಗೆ ಆರೋಗ್ಯ ತಪಾಸಣೆ : ರೇಬೀಸ್ ನಿಯಂತ್ರಣಕ್ಕೆ ಎಆರ್‌ವಿ ಮುಂಜಾಗ್ರತಾ ಲಸಿಕೆ ಪರಿಣಾಮಕಾರಿ : ಡಾ.ಬಿ.ವಿ.ಗಿರೀಶ್
ಚಿತ್ರದುರ್ಗ.ಸೆ.21: ಪ್ರಾಣಿ ಕಡಿತದಿಂದ ಉಂಟಾಗುವ ರೇಬೀಸ್ ನಿಯಂತ್ರಣಕ್ಕೆ ಎಆರ್‌ವಿ ಮುಂಜಾಗ್ರತಾ ಲಸಿಕೆ ಪರಿಣಾಮಕಾರಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಶನಿವಾರ ಆರೋಗ್ಯ ಇಲಾಖೆ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಸಲುವಾಗಿ ಮೃಗಾಲಯದ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಾಣಿಗಳೊಂದಿಗೆ ಸಂಪರ್ಕ ಹೊಂದಿರುವ ಮೃಗಾಯಲದ ಸಿಬ್ಬಂದಿಗಳು ಪ್ರಾಣಿ ಕಡಿತದಿಂದ ಉಂಟಾಗುವ ರೇಬೀಸ್ ಕಾಯಿಲೆಗೆ ತುತ್ತಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ, ಈ ದಿನ ನಿಮ್ಮಲ್ಲರಿಗೂ ಉಚಿತವಾಗಿ ಕ್ಷಯರೋಗ ರೋಗ ಪರೀಕ್ಷೆ, ಹೆಚ್.ಐ.ವಿ.ಪರೀಕ್ಷೆ, ಮಧುಮೇಹ, ರಕ್ತದೊತ್ತಡದ ಲಿವರ್ ಕಾರ್ಯಕ್ಷಮತೆ ಪರೀಕ್ಷೆ, ಸಣ್ಣಪುಟ್ಟ ಕಾಯಿಲೆಗಳ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಐ.ಬಿ.ಅಕ್ಷತಾ ಮಾತನಾಡಿ, ಎಲ್ಲಾ ಸಿಬ್ಬಂದಿಗಳು ತಪ್ಪದೇ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ನೀವು ಕೆಲಸ ಮಾಡುವ ಜಾಗಕ್ಕೆ ಆರೋಗ್ಯ ಇಲಾಖೆ ವಿವಿಧ ತಂಡಗಳು ಬಂದಿದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸ್ವಚ್ಛ ಅಭ್ಯಾಸವನ್ನು ಮಾಡಿ ಅಂದರೆ ತಂಬಾಕು ಜಗಿಯುವುದು, ಧೂಮಪಾನ, ಮದ್ಯಪಾನ ಮಾಡುವ ಹವ್ಯಾಸವನ್ನು ಬಿಡಿ. ಕ್ಷಯರೋಗ ಇತರೆ ಶ್ವಾಸಕೋಶದ ಸೋಂಕಿಗೆ ತುತ್ತಾಗದಂತೆ ಸ್ವಚ್ಛ ನಡವಳಿಕೆಗಳನ್ನು ಕಾಪಾಡಿಕೊಳ್ಳಿ. ದೈಹಿಕ ಮಾನಸಿಕ ಆರೋಗ್ಯ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ 28 ಜನ ಸಿಬ್ಬಂದಿ ಅಧಿಕಾರಿಗಳಿಗೆ ರೇಬೀಸ್ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಲಸಿಕೆ ನೀಡಿ, ವಿವಿಧ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.
ಕ್ಷೇತ್ರ ಆರೋಗಶಿಕ್ಷಣಾಧಿಕಾರಿಗಳಾದ ಬಿ.ಮೈಗಪ್ಪ, ಜಾನಕಿ, ಸಂಚಾರಿ ಆರೋಗ್ಯ ಘಟಕದ ಡಾ.ಮಂಜರಿ, ತ್ರಿವೇಣಿ, ಲಕ್ಷ್ಮೀದೇವಿ, ಸಲ್ಮನ್ ಖಾನ್, ಶಂಕರಮೂರ್ತಿ, ಶ್ರೀ ನಿವಾಸ, ಕ್ಷಯರೋಗ ವಿಭಾಗದ ಮಾರುತಿ ,ನಾಗರಾಜ್ ಹೆಚ್.ಐ.ವಿ.ವಿಭಾಗದ ರವೀಂದ್ರ, ನಾಗರಾಜ್ ಉಪ ವಲಯ ಆರಣ್ಯಾಧಿಕಾರಿ ವೆಂಕಟೇಶ ನಾಯ್ಕ್ ಇತರರು ಉಪಸ್ಥಿತರಿದ್ದರು.