ಹರಿದಾಸ ಹಬ್ಬ 2024 | ಚಿತ್ರದುರ್ಗದಲ್ಲಿ ಆಯೋಧ್ಯಾರಾಮನ ಭವ್ಯ ಶೋಭಾಯಾತ್ರೆ
ಸುದ್ದಿಒನ್, ಚಿತ್ರದುರ್ಗ ಜ. 26 : ನಗರದ ಶ್ರೀ ಹರಿವಾಯು ಗುರು ಸೇವಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಶ್ರೀರಾಮನಹಬ್ಬ ಶ್ರೀ ಕನಕಪುರಂದಾಸರಾದಿ ಹರಿದಾಸರುಗಳ ಸ್ಮರಣೆಯ ಹರಿದಾಸ ಹಬ್ಬ 2024ರ ಅಂಗವಾಗಿ ಇಂದು ನಗರದಲ್ಲಿ ಆಯೋಧ್ಯಾರಾಮನ ಭವ್ಯ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು.
ನಗರದ ಆನೆಬಾಗಿಲ ಬಳಿಯಲ್ಲಿನ ಶ್ರೀ ಸುವೃಷ್ಟಿ ಪ್ರಾಣದೇವರ ಸನ್ನಿದಾನದಿಂದ ಪ್ರಾರಂಭವಾದ ಶೋಭಾಯತ್ರೆಯೂ ನಗರದ ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಡಾ.ಕೋಮಲ ಆಸ್ಪತ್ರೆ ಮುಂಭಾಗ ಧರ್ಮಶಾಲಾ ರಸ್ತೆಯ ಮೂಲಕ ಐಯ್ಯಣ್ಣನ ಪೇಟೆಯಿಂದ ವಾಸವಿ ಶಾಲೆಯನ್ನು ತಲುಪಿತು.
ಈ ಶೋಭಾಯಾತ್ರೆಯಲ್ಲಿ ಶ್ರೀರಾಮ ಮತ್ತು ಅಂಜನೇಯನ ಪ್ರತಿಮೆಗಳು, ಶ್ರೀ ಪುರಂದರದಾಸರು, ಶ್ರೀ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಹಾಗೂ ಕನಕದಾಸರರ ಭಾವಚಿತ್ರಗಳನ್ನು ಇಡಲಾಗಿತು. ಜಾನಪದ ಕಲಾಮೇಳಗಳಾದ ಚಂಡೆ, ನಾಗಸ್ವರ, ವೀರಗಾಸೆಯಂತ ವಾದ್ಯಗಳು ಶೋಭಾಯಾತ್ರೆಗೆ ಮೆರಗನ್ನು ನೀಡಿದವು.
ಮೆರಣಿಗೆಯ ನೇತೃತ್ವವನ್ನು ಭೀಮನಕಟ್ಟೆ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೆಂದ್ರತೀರ್ಥ ಶ್ರೀ ಪಾದಂಗಳವರು ವಹಿಸಿದ್ದರು, ಬೆಳ್ಳಿಯ ರಥದಲ್ಲಿ ವಿರಾಜಮಾನರಾಗಿ ಕುಳಿತ್ತಿದ್ದ ಶ್ರೀಗಳು ದಾರಿಯುದ್ದಕ್ಕೂ ಭಕ್ತಾಧಿಗಳಿಗೆ ದರ್ಶನಾರ್ಶಿವಾದವನ್ನು ನೀಡಿದರು, ಅನೇಕ ಭಕ್ತಾಧಿಗಳು ಸಹಾ ಶ್ರೀಗಳ ದರ್ಶನವನ್ನು ಪಡೆದು ಪುನೀತರಾದರು ಅಲ್ಲದೆ ಅವರಿಂದ ಆರ್ಶೀವಾದವನ್ನು ಸಹಾ ಪಡೆದರು. ಈ ಶೋಭಾಯಾತ್ರೆಯಲ್ಲಿ ಮಹಿಳೆಯರು ಪುರುಷರು ಬಿಳಿದಾದ ಸಮವಸ್ತ್ರವನ್ನು ಧರಿಸಿದ್ದರು, ಮತ್ತು ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು.