ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಹಿಂದುಳಿದ ಮಠಾಧೀಶರ ಬೃಹತ್ ಸಮಾವೇಶ : ಪ್ರಣವಾನಂದ ಸ್ವಾಮೀಜಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್ ,18 : ಸಂವಿಧಾನಬದ್ದವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆಯುವುದಕ್ಕಾಗಿ ಮುಂದಿನ ವರ್ಷ ದೊಡ್ಡ ಮಟ್ಟದ ಸಮಾವೇಶ ನಡೆಸಲಾಗುವುದೆಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಅಖಿಲ ಭಾರತ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯ ಹಾಗೂ ಎಂ.ಎಲ್.ಸಿ. ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಹಿಂದುಳಿದ ಮಠಾಧೀಶರೆಲ್ಲಾ ಸೇರಿಕೊಂಡು ಬೃಹತ್ ಸಮಾವೇಶ ನಡೆಸಿ ನಮ್ಮ ಹಕ್ಕುಗಳಿಗಾಗಿ ಸರ್ಕಾರವನ್ನು ಒತ್ತಾಯಿಸಲಾಗುವುದು. ನಾವು ಯಾವ ಪಕ್ಷದ, ಜಾತಿ ಧರ್ಮದ ವಿರುದ್ದವಾಗಿ ಸಮಾವೇಶ ಮಾಡುವುದಿಲ್ಲ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಕನಸು ನನಸಾಗಬೇಕಾದರೆ ಅತಿ ಹಿಂದುಳಿದ ಮಠಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲೇಬೇಕು. ಸಮಾವೇಶಕ್ಕೆ ಸಂಬಂಧಿಸಿದಂತೆ ಪ್ರತಿ ಮನೆ ಮನೆಗೆ ಹೋಗಿ ಸಂವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ. ಮುಂದಿನ ಪೀಳಿಗೆಯ ಭವಿಷ್ಯ ಚೆನ್ನಾಗಿರಬೇಕಾದರೆ ನಾವು ಈಗಿನಿಂದಲೇ ಹೋರಾಟ ಮಾಡಬೇಕು. ಇದಕ್ಕೆ ಅತಿ ಹಿಂದುಳಿದ ವರ್ಗಗಳ ಬೆಂಬಲ ಬೇಕೆಂದು ಕೋರಿದರು.
ಅಹಿಂದಾ ನಾಯಕ ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಬಲ ಮಠಗಳಿಗೆ ಅನುದಾನ ನೀಡುತ್ತಿದ್ದಾರೆಯೇ ವಿನಃ ಅತಿ ಹಿಂದುಳಿದ ಮಠಗಳ ಕಡೆ ತಿರುಗಿ ನೋಡಿತ್ತಿಲ್ಲ. ಎಲ್ಲಾ ಪಕ್ಷಗಳು ನಮ್ಮನ್ನು ನಿರ್ಲಕ್ಷಿಸುತ್ತಿವೆ. ಹಾಗಾಗಿ ಬೃಹತ್ ಸಮಾವೇಶ ನಡೆಸುವುದು ಅನಿವಾರ್ಯ ಎಂದು ಹೇಳಿದರು.
ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವ ಬದಲು ಸಂವಿಧಾನವನ್ನು ಪೂಜಿಸಿ. ಹಳ್ಳಿಗಳಲ್ಲಿ ಈಗಲೂ ಅಸ್ಪøಶ್ಯತೆಯಿದೆ. ಡಾ.ಬಿ.ಆರ್.ಅಂಬೇಡ್ಕರ್‍ರವರ ಆಶಯ ಇನ್ನು ಈಡೇರಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮಿತಿಗಳನ್ನು ರಚಿಸಿ ಅತಿ ಹಿಂದುಳಿದ ಜನಾಂಗವನ್ನು ಜಾಗೃತಿಗೊಳಿಸಲಾಗುವುದೆಂದರು.
ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಬಸವನಾಗಿದೇವಸ್ವಾಮಿ ಮಾತನಾಡಿ ಅತಿ ಹಿಂದುಳಿದ ಜನಾಂಗ ಸಂವಿಧಾನದ ಜೊತೆ ಸಾಗುತ್ತ ಬಡತನ ನಿರ್ಮೂಲನೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಇಲ್ಲದಿದ್ದರೆ ಇನ್ನು ಬಡತನ ರೇಖೆಗಿಂತ ಕೆಳಗಿರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಜ್ಞಾನ, ತಪ್ಪು ತಿಳುವಳಿಕೆ, ಮೂಢನಂಬಿಕೆಯಿಂದ ಅತಿ ಹಿಂದುಳಿದ ಜನಾಂಗ ಸಂವಿಧಾನದಿಂದ ದೂರ ಉಳಿದಿರುವುದರಿಂದ ಬಡತನ ಜಾಸ್ತಿಯಾಗುತ್ತಿದೆ. ಸರ್ಕಾರದಿಂದ ಸಿಗಬೇಕಾದ ನ್ಯಾಯವಾದ ಹಕ್ಕುಗಳನ್ನು ಪಡೆಯಬೇಕಾಗಿರುವುದರಿಂದ 2025 ರಲ್ಲಿ ಬೃಹತ್ ಸಮಾವೇಶ ನಡೆಸುವ ಸಂಬಂಧ ಸ್ಥಳ ಮತ್ತು ದಿನಾಂಕವನ್ನು ನಿಗಧಿಪಡಿಸಲಾಗುವುದು. ರಾಜ್ಯಾದ್ಯಂತ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಕ್ತಿ ಪ್ರದರ್ಶಿಸಬೇಕೆಂದು ವಿನಂತಿಸಿದರು.
ಬಿ.ಕೆ.ಹರಿಪ್ರಸಾದ್, ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ವಿಶ್ವಕರ್ಮ ಸಮಾಜದ ದೊಡ್ಡೇಂದ್ರ ಸ್ವಾಮೀಜಿ, ವೇದವ್ಯಾಸ ಸ್ವಾಮೀಜಿ, ಗೋವಿಂದಾಚಾರ್ಯ ಸ್ವಾಮೀಜಿ, ಕರ್ಣಾಕರ ಸ್ವಾಮೀಜಿ ವೇದಿಕೆಯಲ್ಲಿದ್ದರು.