For the best experience, open
https://m.suddione.com
on your mobile browser.
Advertisement

ತುರುವನೂರು ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಮಹೋತ್ಸವ ಸಂಪನ್ನ

12:25 PM Feb 24, 2024 IST | suddionenews
ತುರುವನೂರು ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಮಹೋತ್ಸವ ಸಂಪನ್ನ
Advertisement

ಸುದ್ದಿಒನ್, ಚಿತ್ರದುರ್ಗ, (ಫೆ.24) : ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ಮಹೋತ್ಸವವು ಮಘ ನಕ್ಷತ್ರದ ಶುಭ ಮುಹೂರ್ತದಲ್ಲಿ ಸಕಲಮಂಗಲ ವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ಶನಿವಾರ ಬೆಳಿಗ್ಗೆ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

Advertisement
Advertisement

ಜಾತ್ರೆಯ ದಿನವಾದ ಇಂದು (ಶನಿವಾರ) ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Advertisement

ಗೋಪುರಕ್ಕೆ ಕಳಸಾರೋಹಣ ಹಾಗೂ ವಿಶೇಷ ಪೂಜೆ ನೆರವೇರಿಸಿ, ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತಂದು ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ತೇರಿಗೆ ದೊಡ್ಡ ಗಾತ್ರದ ಹೂವಿನ ಹಾರ ಮತ್ತು ಬಾವುಟಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿದ ನಂತರ ತೆಂಗಿನಕಾಯಿ ಹೊಡೆದು ನೆರೆದಿದ್ದ ಭಕ್ತ ಸಮೂಹ ಭಕ್ತಿ ಸಮರ್ಪಿಸಿದರು.

Advertisement
Advertisement

ದೇವರಿಗೆ ಹಾಕಿದ್ದ ಹಾರಗಳ ಹರಾಜು ಪ್ರಕ್ರಿಯೆಯಲ್ಲಿ

ಮೊದಲನೆಯ ಹಾರವನ್ನು ಪಲ್ಲಕ್ಕಿ ದಾಸಪ್ಪನವರಾದ ವೆಂಕಟೇಶ್  ಅವರು 52501/- ರೂಪಾಯಿಗಳಿಗೆ

ಎರಡನೆಯ ಹಾರವನ್ನು ಇಂಟೂರು ಶೇಷಾದ್ರಿ ರೆಡ್ಡಿಯವರು 15001/- ರೂಪಾಯಿಗಳಿಗೆ

ಮೂರನೆಯ ಹಾರವನ್ನು ಮಾಳಿಗೆ ನರಸಿಂಹಪ್ಪನವರು 10,501/- ರೂಪಾಯಿಗಳಿಗೆ

ನಾಲ್ಕನೆಯ ಹಾರವನ್ನು ಹಾರೆಯವರ ರಘುರಾಮರೆಡ್ಡಿ ಅವರು 8001/- ರೂಪಾಯಿಗಳಿಗೆ

ಐದನೆಯ ಹಾರವನ್ನು ಬೋಳ್ ಭೀಮಾರೆಡ್ಡಿ
5001/- ರೂ. ಗಳಿಗೆ ಪಡೆದು ಭಕ್ತಿ ಸಮರ್ಪಿಸಿದರು.

ಬೆಳಿಗ್ಗೆ 11 ಗಂಟೆಗೆ ತೇರನ್ನು ಸಾವಿರಾರು ಭಕ್ತರು ಎಳೆದು ಸಂಭ್ರಮಿಸಿದರು. ಅಡವಿ ಆಂಜನೇಯ ಸ್ವಾಮಿ ದೇವಸ್ಥಾನದವರೆಗೂ ತೇರನ್ನು ಎಳೆದರು. ಡೊಳ್ಳು ಕುಣಿತ, ನಂದಿಧ್ವಜ ಕುಣಿತ ಮುಂತಾದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಭಕ್ತರು ತೇರಿಗೆ ಬಾಳೆ ಹಣ್ಣು ಎಸೆದ ಧನ್ಯತಾ ಭಾವ ಮೆರೆದರು. ತುರುವನೂರು, ಕೂನಬೇವು, ಬೆಳಗಟ್ಟ, ದೊಡ್ಡಘಟ್ಟ, ಕಡಬನಕಟ್ಟೆ, ಮುಸ್ಟೂರು, ಬಂಗಾರಕ್ಕನಹಳ್ಳಿ, ಹವಳೇನಹಳ್ಳಿ, ಚಿಕ್ಕಗೊಂಡನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಬಂದು ದೇವರ ದರ್ಶನ ಪಡೆದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಕಾಯಿ-ಕರ್ಪೂರ, ಮುಡಿಪು ಸಮರ್ಪಿಸಿದರು. ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ಏರಪಡಿಸಲಾಗಿತ್ತು.

ತೇರು ಮತ್ತು ದೇವಸ್ಥಾನದ ಮುಂದೆ ನಿಂತು ಭಕ್ತರು ಮೊಬೈಲ್‌ ನಲ್ಲಿ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸಿದರು.ಮುಂಜಾಗ್ರತೆ ಕ್ರಮವಾಗಿ ಜಾತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಶ್ರೀ ಆಂಜನೇಯ ತೇರು ಎಳೆದ ಮೇಲೆ ಮಧ್ಯಾಹ್ನ 4:30 ರ ನಂತರ ಇಳಿ ಹೊತ್ತಿನಲ್ಲಿ ಮುರುಡಪ್ಪನನ್ನು ಆತನ ಮನೆಯಲ್ಲಿ ಹೂವುಗಳಿಂದ ಅಲಂಕರಿಸಿ ಕಾಲಿಗೆ ಗಗ್ಗರ ತೊಡಿಸಿ ಗೋವಿಂದನ ನಾಮ ಸ್ಮರಣೆ, ಮಂಗಳ ವಾದ್ಯಗಳೊಂದಿಗೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆತಂದು ಅಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆಯ ಮೂಲಕ ಅಡವಿನ ಹನುಮಂತರಾಯ ದೇವಸ್ಥಾನ ಮತ್ತು ಭೂತನಾಥನಿಗೆ ವಂದಿಸಿ ಊರಿನ ಪೂರ್ವ ದಿಕ್ಕಿನಲ್ಲಿರುವ ದೊಡ್ಡಘಟ್ಟದ ಕೆರೆ ಬಳಿಯ ಉಗ್ರನರಸಿಂಹ ಸ್ವಾಮಿಯ ದೇವಸ್ಥಾನದ ವರೆಗೂ ಕಾಲ್ನಡಿಗೆಯಲ್ಲೇ ನಡೆದು ಹೋಗಿ ಸೂರ್ಯಾಸ್ತವಾಗುತ್ತಿದ್ದಂತೆ ಅಂದರೆ ಗೋಧೂಳಿ ಸಮಯದಲ್ಲಿ ಉಗ್ರನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮತ್ತೆ ತುರುವನೂರಿಗೆ ಕಾಲ್ನಡಿಗೆಯಲ್ಲೇ ಹಿಂತಿರುಗುತ್ತಾನೆ.

ತುರುವನೂರಿನ ಅಡವಿ ದೇವಸ್ಥಾನದ ಬಳಿ ಇರುವ ಭೂತನಾಥನ ಆಶ್ರಯದಲ್ಲಿ ಸ್ಪಲ್ಪ ಕಾಲ ವಿರಮಿಸಿ ಸೂರ‍್ಯನು ಅಸ್ತಮಿಸಿದ ಮೂರು ಗಂಟೆಗಳ ಬಳಿಕ ಆ ಸ್ಥಳದಲ್ಲಿ ಗೋವಿಂದ ನಾಮಗಳಿಂದ ಸ್ಮರಿಸುತ್ತಿದ್ದಂತೆ ಪುನಃ ಪವಾಡ ನಡೆಯುತ್ತದೆ.

ಶ್ರೀ ನರಸಿಂಹಸ್ವಾಮಿ ಹಾಗೂ ಆಂಜನೇಯನ ಪ್ರವೇಶದಿಂದ ದಾಸಪ್ಪ ಪವಾಡ ಪುರಷನಾಗುತ್ತಾನೆ ಹೀಗಾಗಿ ಮುಳ್ಳಪಲ್ಲಕ್ಕಿಯಲ್ಲಿ ಸೊಪ್ಪಿನ ಪತ್ರೆ ಹರಡಿ ಅದರ ಮೇಲೆ ಮುರುಡಪ್ಪನನ್ನು ಮಲಗಿಸಿ ಮೆರವಣಿಗೆ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಅಂದರೆ ಇದರಿಂದ ಎಲ್ಲ ದುಷ್ಟಶಕ್ತಿಗಳು ತೊಲಗಲಿ ಎಂದು ಆ ನಂತರ ಮೆರವಣಿಗೆ ಮುಗಿಯುತ್ತಿದ್ದಂತೆ ಮಧ್ಯರಾತ್ರಿ ದೇವಸ್ಥಾನದಲ್ಲಿ ತುಂಬಿಸಿಕೊಳ್ಳಬೇಕು. ಆಗ ಆಂಜನೇಯ ಮೂಲಸ್ವರೂಪದಲ್ಲಿ ಲೀನವಾಗುತ್ತಾನೆ. ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಪವಾಡ ಇದು.

ಇನ್ನೂ ದೇವಸ್ಥಾನದಿಂದ ಮನೆಗೆ ತೆರಳಿದ ನಂತರ ಉಪವಾಸ ಕೈಬಿಡುತ್ತಾರೆ. ಮರುದಿನ ದೇವಸ್ಥಾನಕ್ಕೆ ಬಂದು ಪೂಜೆ ನೆರವೇರಿಸುತ್ತಾರೆ .ಇದಾದ ನಂತರ ರಥೋತ್ಸವದ ಎರಡನೇ ದಿನ ಓಕುಳಿ ದಿನ ಮಂಗಳವಾದ್ಯಗಳೊಂದಿಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಕಲ್ಲೇಶ್ವರ ಸ್ವಾಮಿಯ ಎರಡೂ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಗಂಗಾಪೂಜೆಗೆ ಬಾವಿಗೆ ತೆರಳಿ ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ತುರುವಪ್ಪ ಬೇಟೆ ರಂಗಪ್ಪ ದೇವರಿಗೆ ಪೂಜೆಸಲ್ಲಿಸಿ ಅಲ್ಲಿಂದ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ಕಲ್ಲೇಶ್ವರ ಮೂರ್ತಿಯನ್ನು ಗುಡಿತುಂಬಿಸುತ್ತಾರೆ. ಹಾಗೆಯೇ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಸ್ವಾಮಿ ಮೂರ್ತಿಯನ್ನು ಗುಡಿತುಂಬಿಸಲಾಗುತ್ತದೆ ಅಲ್ಲಿಗೆ ಆಂಜನೇಯ ಉತ್ಸವ ಮುಗಿಯುತ್ತದೆ.

Advertisement
Tags :
Advertisement