ವೈಮನಸ್ಸು ದೂರ : ಚಂದ್ರಪ್ಪ ನಿವಾಸಕ್ಕೆ ಗೋವಿಂದ ಕಾರಜೋಳ ಭೇಟಿ
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.03 : ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೇ ಬಂಡಾಯ ಸಾರಿದ್ದ ಶಾಸಕ ಎಂ ಚಂದ್ರಪ್ಪ ಹಾಗೂ ಪುತ್ರ ರಘು ಚಂದನ್ ಇದೀಗ ಶಾಂತರಾಗಿದ್ದಾರೆ. ಬಿಎಸ್ವೈ ಹಾಗೂ ಪುತ್ರ ಬಿವೈ ವಿಜಯೇಂದ್ರ ಅವರ ಸಂಧಾನದಿಂದ ಎಲ್ಲವನ್ನು ಮರೆತು ಗೋವಿಂದ ಕಾರಜೋಳಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಇಂದು ಚಂದ್ರಪ್ಪ ಅವರ ನಿವಾಸಕ್ಕೆ ಗೋವಿಂದ ಕಾರಜೋಳ ಭೇಟಿ ನೀಡಿದ್ದಾರೆ. ಅಲ್ಲೇ ತಿಂಡಿ ಸವಿಯುವ ಮೂಲಕ ಮುನಿಸು ಬಿಟ್ಟು ಇಬ್ಬರು ಒಂದಾಗಿದ್ದಾರೆ.
ಚಂದ್ರಪ್ಪ ನಿವಾಸ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು, ಯುವಕ ರಘುಚಂದನ್ ಆಶಾವಾದಿ, ಈ ಕಾರಣಕ್ಕೆ ಅವರು ಪಕ್ಷಸಂಘಟನೆ, ಹೋರಾಟ ಮಾಡಿಕೊಂಡು ಟಿಕೆಟ್ ನಿರೀಕ್ಷೆ ಯಲ್ಲಿದ್ದರು. ಆದ್ರೆ ಕೇಂದ್ರ ಹಾಗೂ ರಾಜ್ಯ ನಾಯಕರು ಇದೊಂದು ಬಾರಿ ನೀವೇ ನಿಲ್ಲಿ ಅಂದ್ರು, ರಾಷ್ಟ್ರೀಯ ನಾಯಕರ ಒತ್ತಾಯದ ಮೇರೆಗೆ ನಾನು ಓಕೆ ಅಂದೆ, ನಾನು ಯಾರ ಮಾತನ್ನು ಮೀರುವುದಿಲ್ಲವೋ ಅವರಿಂದ ಹೇಳಿಸಿದ್ರು, ಅದಕ್ಕೆ ನಾನು ಆಯಿತು ಸ್ವಾಮಿ ಅಂದೆ, ಚಂದ್ರಪ್ಪ ನಾನು ಒಂದೇ ತೆಟ್ಟೆಯಲ್ಲಿ ಉಂಡ ಅಣ್ಣ ತಮ್ಮಂದಿರು. ಆವೇಶದಲ್ಲಿ ಮಾತುಗಳು ಹೆಚ್ವು ಕಡಿಮೆ ಆಗಿರುತ್ತೆ. ಈಗ ಚಂದ್ರಪ್ಪ ಹಾಗೂ ರಘುಚಂದನ್ ನಿಮ್ಮ ಚುನಾವಣೆ ನಮ್ಮದೇ ಜವಾಬ್ದಾರಿ ಅಂದಿದ್ದಾರೆ. ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ಸಂಪೂರ್ಣ ಬೆಂಬಲ ಕೊಡ್ತೀನಿ ಎಂದು ಹೇಳಿದರು.
ಮೊಳಕಾಲ್ಮೂರಲ್ಲಿ ಬಿಜೆಪಿಯಿಂದ ಮತದಾರರಿಗೆ ಹಣ ನೀಡುವ ಕುರಿತು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಭ್ಯರ್ಥಿ
ಅದೆಲ್ಲ ಸತ್ಯಕ್ಕೆ ದೂರವಾದ ಮಾತು, ಚುನಾವಣೆಯಲ್ಲಿ ಅಪಪ್ರಚಾರಗಳು ನಡೆಯುತ್ತೆವೆ. ಅದಕ್ಕೆ ನಾವು ಬೆಲೆ ಕೊಡಬಾರದು. ನಮ್ಮ ಕಡೆ ಆ ಪದ್ಧತಿಯೇ ಇಲ್ಲ ಎಂದು ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.