For the best experience, open
https://m.suddione.com
on your mobile browser.
Advertisement

ಪ್ರಿಯಾಂಕಾಗಾಂಧಿ ಹೇಳಿಕೆಗೆ ಗೋವಿಂದ ಕಾರಜೋಳ ತಿರುಗೇಟು

06:47 PM Apr 24, 2024 IST | suddionenews
ಪ್ರಿಯಾಂಕಾಗಾಂಧಿ ಹೇಳಿಕೆಗೆ ಗೋವಿಂದ ಕಾರಜೋಳ ತಿರುಗೇಟು
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್,ಚಿತ್ರದುರ್ಗ, ಏಪ್ರಿಲ್.24  : ಅಪ್ಪರ್ ಭದ್ರಾ ಯೋಜನೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದೆ ಸೋನಿಯಾಗಾಂಧಿ ಪುತ್ರಿ ಪ್ರಿಯಾಂಕಾಗಾಂಧಿ ಮಾತನಾಡಿರುವುದು ಸೋಜಿಗದ ಸಂಗತಿ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ ಖಂಡಿಸಿದರು.

Advertisement

ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳವಾರ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಿಯಾಂಕಾಗಾಂಧಿ ಅಪ್ಪರ್‍ಭದ್ರಾ ಯೋಜನೆಗೆ ಸಂಬಂಧಿಸಿದಂತೆ ಮೊದಲು ಮಾಹಿತಿಯನ್ನು ಪಡೆದುಕೊಂಡು ಮಾತನಾಡಲಿ. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಐದು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಐದುವರೆ ಲಕ್ಷ ಎಕರೆ ನೀರಾವರಿಯಾಗುತ್ತದೆ. 367 ಕೆರೆಗಳಿಗೆ ನೀರು ತುಂಬಿಸಬಹುದು. ಇದಕ್ಕಾಗಿ ನಮ್ಮ ಸರ್ಕಾರವಿದ್ದಾಗ 22 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಒಂಬತ್ತು ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ನಾನು ನೀರಾವರಿ ಮಂತ್ರಿಯಾದಾಗ ಕಾಮಗಾರಿಯನ್ನು ಆರಂಭಿಸಿದೆ. 2013 ರಿಂದ 18 ರವರೆಗೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದಾಗ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸುಳ್ಳು ಮಾಹಿತಿ ಯಾರಿಗೂ ಕೊಡಬಾರದು ಎಂದು ಎಚ್ಚರಿಸಿದರು.

ಕೇವಲ ಗ್ಯಾರೆಂಟಿಗಳಲ್ಲೇ ರಾಜ್ಯದ ಜನರನ್ನು ಕಾಂಗ್ರೆಸ್‍ನವರು ವಂಚಿಸುತ್ತಿದ್ದಾರೆಂದುಕೊಂಡಿದ್ದೆವು. ರೈತರ ನೀರಾವರಿ ಯೋಜನೆಗಳಲ್ಲೂ ವಂಚಿಸುತ್ತಿದೆ ಎನ್ನುವುದು ಈಗ ಗೊತ್ತಾಯಿತು. ಅಪ್ಪರ್‍ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‍ನಲ್ಲೇ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿದೆ. ಬಿ.ಎನ್.ಚಂದ್ರಪ್ಪ 2014 ರಿಂದ 2019 ರವರೆಗೆ ಸಂಸದರಾಗಿದ್ದರೂ ಒಮ್ಮೆಯೂ ಕ್ಷೇತ್ರದ ಅಭಿವೃದ್ದಿ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಮಾತನಾಡಲಿಲ್ಲ. ಈಗ ನಮ್ಮ ಅಭಿವೃದ್ದಿ ಕೆಲಸಗಳನ್ನು ನೋಡಿ ಸಹಿಸಲು ಆಗದೆ ಸುಳ್ಳು ಆರೋಪಗಳನ್ನು ಮಾಡುತ್ತಿರುವುದನ್ನು ಕಟುವಾಗಿ ಖಂಡಿಸುತ್ತೇನೆ. ನೇರ ರೈಲು ಮಾರ್ಗವಾಗಬೇಕು. ಎಲ್ಲರಿಗೂ ಸರ್ಕಾರಿ ಉದ್ಯೋಗ ಕೊಡಲು ಆಗಲ್ಲ. ಅದಕ್ಕಾಗಿ ಪ್ರಧಾನಿ ಮೋದಿರವರು ಹತ್ತು ವರ್ಷಗಳ ಅವಧಿಯಲ್ಲಿ ಕೌಶಲ್ಯಾಧಾರಿತ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದರಿಂದ ಯುವಕ-ಯುವತಿಯರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸರ್ಕಾರ ಒತ್ತು ಕೊಡುತ್ತಿದೆ. ವಿಮಾನ ನಿಲ್ದಾಣವಾದರೆ ಕೈಗಾರಿಕೋದ್ಯಮ ಬೆಳೆಯುತ್ತದೆ. ದೇಶಕ್ಕಾಗಿ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗಬೇಕಾಗಿರುವುದರಿಂದ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಬಹುಮತಗಳಿಂದ ನನ್ನನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಗೋವಿಂದ ಕಾರಜೋಳ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸಿ ಅಭಿವೃದ್ದಿಯಾಗಬೇಕಾದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಮತದಾರರಲ್ಲಿ ವಿನಂತಿಸಿದರು.

ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ಆಡಳಿತಕ್ಕೆ ಜನ ಮಂತ್ರಮುಗ್ದರಾಗಿದ್ದಾರೆ. ಕ್ಷೇತ್ರದಲ್ಲಿರುವ ಹದಿನೆಂಟುವರೆ ಲಕ್ಷ ಜನರಲ್ಲಿ ಹದಿನಾರು ಲಕ್ಷ 37 ಸಾವಿರದ 685 ಜನರಿಗೆ ಅಕ್ಕಿ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯಲ್ಲಿ 963 ಕಿ.ಮೀ. ರಸ್ತೆಯಾಗಿದೆ. ಅದೇ ನಮ್ಮ ಸರ್ಕಾರದಲ್ಲಿ 1946 ಕಿ.ಮೀ. ರಸ್ತೆಯಾಗಿದೆ. ಮೂರು ಲಕ್ಷ 37 ಸಾವಿರದ 527 ರೈತರಿಗೆ ಕಿಸಾನ್ ಸಮ್ಮಾನ್ ಸಿಕ್ಕಿದೆ. ಉಜ್ವಲ ಯೋಜನೆಯಡಿ 25331 ಜನರಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. 3 ಲಕ್ಷ 95 ಸಾವಿರದ 794 ಜನರಿಗೆ ಬಲ್ಬ್ ತಲುಪಿದೆ. 2 ಲಕ್ಷ 75 ಸಾವಿರದ 945 ಮನೆಗಳಿಗೆ ಶೌಚಾಲಯ ಕಟ್ಟಿಸಲಾಗಿದೆ. ಜಿಲ್ಲೆಯಲ್ಲಿ ಹದಿನೆಂಟು ಸಾವಿರದ 380 ಮನೆಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲಾ ಸಾಧನೆಗಳನ್ನು ನೋಡಿ ಬಿಜೆಪಿ.ಗೆ ಮತ ಕೊಡಿ ಎಂದು ಕೇಳಿದರು.

ಬಿಜೆಪಿ ಖಾಲಿ ಚೆಂಬು ಕೊಟ್ಟಿದೆ ಎಂದು ಹೀಯಾಳಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ನಾಡಿನ ಜನರಿಗೆ ಚಿಪ್ಪು ಕೊಟ್ಟಿದ್ದಾರೆಂದು ತಿರುಗೇಟು ನೀಡಿದ ಎನ್.ರವಿಕುಮಾರ್ ಮಹಿಳೆಯರಿಗೆ ಸುರಕ್ಷಿತೆ ಇಲ್ಲ. ಹುಬ್ಬಳ್ಳಿಯಲ್ಲಿ ಹಾಡು ಹಗಲೆ ವಿದ್ಯಾರ್ಥಿನಿ ನೇಹ ಕೊಲೆ, ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದು ಕೂಗುವವರ ಮೇಲೆ ಕ್ರಮವಿಲ್ಲ.

ಎಸ್.ಡಿ.ಪಿ.ಐ. ಪಿ.ಎಫ್.ಐ. ನವರ ಮೇಲೆ ದಾಖಲಾಗಿದ್ದ 175 ಕೇಸುಗಳನ್ನು ಕಾಂಗ್ರೆಸ್ ಸರ್ಕಾರ ತೆಗೆದು ಹಾಕಿ 1600 ಮಂದಿಯನ್ನು ಬಿಡುಗಡೆಗೊಳಿಸಿದೆ. ಕುಕ್ಕರ್ ಬಾಂಬರ್‍ಗಳೆಲ್ಲಾ ಕಾಂಗ್ರೆಸ್‍ನವರ ಬದ್ರರ್ಸ್ ರಾಜ್ಯದಲ್ಲಿ ಔರಂಜೇಬ, ಟಿಪ್ಪು ಆಡಳಿತ ನಡೆಯುತ್ತಿದೆ. 1700 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ. ಜಾನುವಾರುಗಳಿಗೆ ಮೇವು ನೀರಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಬರದ ಭಾಗ್ಯ, ಮಹಿಳೆಯರಿಗೆ ಹತ್ಯೆ ಭಾಗ್ಯ ಕೊಟ್ಟಿದ್ದಾರೆ. ಕ್ರೈಂ, ಸೈಬರ್ ಕ್ರೈಂ ಜಾಸ್ತಿಯಾಗಿದೆ. ಛಾಪ ಕಾಗದದ ಬೆಲೆ ಏರಿಕೆ, ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ. ಇಂತಹ ಸರ್ಕಾರಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜನ ಸರಿಯಾದ ಬುದ್ದಿ ಕಲಿಸುತ್ತಾರೆಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಮಾತನಾಡುತ್ತ ದೇಶದ ಪ್ರಧಾನಿ ನರೇಂದ್ರಮೋದಿರವರ ಪಾರದರ್ಶಕ ಆಡಳಿತವನ್ನು ಮೆಚ್ಚಿಕೊಂಡು ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಜೆಪಿ.ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನರೇಂದ್ರಮೋದಿಗೆ ಬಲ ಬಂದಂತಾಗಿದೆ. ದೇಶದ ಭದ್ರತೆಗೆ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಅದಕ್ಕಾಗಿ ನಾಳೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಬಹುಮತಗಳಿಂದ ಗೆಲ್ಲಿಸಿ ಸಂಸತ್‍ಗೆ ಕಳಿಸಿಕೊಡಿ ಎಂದು ಮತದಾರರನ್ನು ಕೋರಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಬಿಜೆಪಿ. ಎಸ್ಸಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಪತ್ರಿಕಾಗೋಷ್ಠಿಯಲ್ಲಿದ್ದರು.

Tags :
Advertisement