ಸರ್ಕಾರ ಕೆನೆಪದರ ಮುಂದಿಟ್ಟುಕೊಂಡು ಒಳ ಮೀಸಲಾತಿ ಜಾರಿ ತಡ ಮಾಡುಬಹುದು : ಅಂಬಣ್ಣ ಅರೋಲಿಕರ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.11 : ಒಳ ಮೀಸಲಾತಿ ನ್ಯಾಯಬದ್ದ, ಸಂವಿಧಾನಬದ್ದ ಹೋರಾಟವಾಗಬೇಕೆ ವಿನಃ ಯಾರ ಹಕ್ಕನ್ನು ಕಿತ್ತುಕೊಳ್ಳಬಾರದೆಂಬುದು ಪಾರ್ಥಸಾರಥಿಯ ಆಶಯವಾಗಿತ್ತೆಂದು ಎಂ.ಆರ್.ಹೆಚ್.ಎಸ್.ರಾಜ್ಯ ಕಾರ್ಯದರ್ಶಿ ರಾಯಚೂರಿನ ಅಂಬಣ್ಣ ಅರೋಲಿಕರ್ ಸ್ಮರಿಸಿದರು.
ಪಾರ್ಥಸಾರಥಿ ಗೆಳೆಯರ ಬಳಗ-ಕರ್ನಾಟಕ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾನು ಕಂಡಂತೆ ಪಾರ್ಥಸಾರಥಿ ನೆನಪಿನ ಕಾರ್ಯಕ್ರಮವನ್ನು ಕ್ರಾಂತಿಗೀತೆ ಮೂಲಕ ಉದ್ಗಾಟಿಸಿ ಮಾತನಾಡಿದರು.
ದಲಿತರಲ್ಲಿ ಒಳ ಮೀಸಲಾತಿ ಕುರಿತು ಜಾಗೃತಿ ಮೂಡಿಸಿದ ಪಾರ್ಥಸಾರಥಿ ಪಕ್ಷ ಬೇಧ ಮರೆತು ಎಲ್ಲರೊಂದಿಗೂ ಸಂಪರ್ಕವಿಟ್ಟುಕೊಂಡು ನಾಡಿನಾದ್ಯಂತ ಸುತ್ತಾಡಿ ಹೋರಾಟಕ್ಕೆ ಚುರುಕು ನೀಡಿದರು. ಹಿರಿಯ ಐ.ಎ.ಎಸ್.ಅಧಿಕಾರಿಗಳ ಜೊತೆ ಒಳ ಮೀಸಲಾತಿ ವಿಚಾರವಾಗಿ ಚರ್ಚಿಸುತ್ತಿದ್ದರು. ಒಳ ಮೀಸಲಾತಿಯನ್ನು ಪಡೆದೆ ಪಡೆಯುತ್ತೇವೆಂಬ ಗಟ್ಟಿ ನಿರ್ಧಾರ ಅವರದಾಗಿತ್ತು. ದಲಿತರು ಅನುಭವಿಸುತ್ತಿರುವ ಅನ್ಯಾಯವನ್ನು ಎಲ್ಲಿ ಬೇಕಾದರೂ ವಿವರಿಸಿ ಮನವರಿಕೆ ಮಾಡಿಕೊಡುವ ತಾಕತ್ತು ಅವರಲ್ಲಿತ್ತು. ಹೋರಾಟ, ಕಾಲ್ನಡಿಗೆ, ಜಾಥ, ಪಾದಯಾತ್ರೆ ಮೂಲಕ ದಲಿತರಲ್ಲಿ ಸಂಚಲನ ಮೂಡಿಸಿದ ಪಾರ್ಥಸಾರಥಿಯ ಕನಸು ನನಸಾಗುವ ಕಾಲ ಬಂದಿದೆ. ಆದರೆ ಮೈಮರೆತು ಕುಳಿತುಕೊಳ್ಳುವಂತಿಲ್ಲ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
ಹೈದರಾಬಾದ್‍ನಲ್ಲಿ ಮಂದಕೃಷ್ಣ ಮಾದಿಗ ಎಂಟತ್ತು ಲಕ್ಷ ಜನ ಸೇರಿಸಿ ಪ್ರಧಾನಿ ಮೋದಿಯನ್ನು ಕರೆಸಿ ಒಳ ಮೀಸಲಾತಿ ಜಾರಿಯಾಗಲೇಬೇಕೆಂಬ ಬೇಡಿಕೆಯಿಟ್ಟರು. ಒಂದು ವೇಳೆ ಜಾರಿಯಾಗದಿದ್ದಲ್ಲಿ ನಮ್ಮ ಪರ ಯಾರು ನಿಲ್ಲುತ್ತಾರೋ ಅವರಿಗೆ ನಮ್ಮ ಮತ ಎನ್ನುವ ದಿಟ್ಟ ಸಂದೇಶ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಪಂಜಾಬ್, ಹರಿಯಾಣ, ತಮಿಳುನಾಡು, ಕರ್ನಾಟಕ, ಆಂಧ್ರದಲ್ಲಿ ಹೋರಾಟ ತೀವ್ರಗೊಂಡ ಪರಿಣಾಮ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೊದಲು ಒಳ ಮೀಸಲಾತಿಯನ್ನು ಪಡೆದುಕೊಳ್ಳೋಣ. ಕೆನೆ ಪದರ ವಿಚಾರ ಬೇಡ. ಏಕೆಂದರೆ ಸರ್ಕಾರ ಕೆನೆಪದರ ಮುಂದಿಟ್ಟುಕೊಂಡು ಒಳ ಮೀಸಲಾತಿ ಜಾರಿಗೊಳಿಸುವುದನ್ನು ತಡ ಮಾಡುಬಹುದೆಂಬ ಸೂಕ್ಷ್ಮತೆಯನ್ನು ಅಂಬಣ್ಣ ಅರೋಲಿಕರ್ ಪ್ರಸ್ತಾಪಿಸಿದರು.
ಒಳ ಮೀಸಲಾತಿ ತತ್ವ ಪಾರ್ಥಸಾರಥಿಯ ತತ್ವಗಾಗಿತ್ತು. ತಾರ್ಕಿಕ ಅಂತ್ಯ ಕಾಣಬೇಕಿದೆ. ಕೆನೆ ಪದರ ಕುತಂತ್ರಕ್ಕೆ ಬಲಿಯಾಗುವುದು ಬೇಡ. ಒಳ ಮೀಸಲಾತಿಯನ್ನು ತೆಗೆದುಕೊಳ್ಳುವುದಕ್ಕೆ 75 ವರ್ಷ ಬೇಕಾಯಿತಾ? ಸುಪ್ರೀಂಕೋರ್ಟ್ ತೀರ್ಪು ಮಾದಿಗರಿಗೆ ಗೆಲುವು ಸಿಕ್ಕಂತಾಗಿದೆ. ಇದೊಂದು ನ್ಯಾಯಯುತವಾದ ಹೋರಾಟ. ರಾಜ್ಯ ಸರ್ಕಾರ ಜಾರಿಗೊಳಿಸುತ್ತದೆಂಬ ನಂಬಿಕೆಯಿದೆ. ಆದರೆ ಒತ್ತಡ ಹೇರುತ್ತಿರಬೇಕೆಂದರು.
ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟದ ನಿರ್ದೇಶಕ ಡಾ.ಶಿವಾನಂದ ಕಳೆಗಿನಮನಿ ಮಾತನಾಡಿ ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟುಹಾಕಿದ ಪ್ರೊ.ಬಿ.ಕೃಷ್ಣಪ್ಪನವರ ಪೀಠ ಸ್ಥಾನಪನೆಯಾಗಬೇಕೆಂದು ಮೊಟ್ಟ ಮೊದಲು ಧ್ವನಿಯೆತ್ತಿದ ಹೋರಾಟಗಾರ ಪಾರ್ಥಸಾರಥಿಯಲ್ಲಿ ವಿಶಾಲವಾದ ತಿಳುವಳಿಕೆಯಿತ್ತು. ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಒಳ ಮೀಸಲಾತಿ ಕುರಿತು ಸದಾ ಸಂಪರ್ಕದಲ್ಲಿರುತ್ತಿದ್ದ. ವಿಶ್ವವಿದ್ಯಾನಿಲಯಗಳ ಮೇಷ್ಟ್ರುಗಳಿಗೂ ಇಲ್ಲದಷ್ಟು ಅರಿವು ಆತನಲ್ಲಿತ್ತು. ಕರ್ನಾಟಕದ ಚರಿತ್ರೆಯನ್ನು ತುದಿ ನಾಲಿಗೆಯಲ್ಲಿರಿಸಿಕೊಂಡಿದ್ದ ಎಂದು ಹೋರಾಟದ ಹಾದಿಯನ್ನು ನೆನಪಿಸಿಕೊಂಡರು. ಸಾಂಸ್ಕøತಿಕ ನಾಯಕರನ್ನು ಬೆಳಕಿಗೆ ತರುವ ಹಂಬಲದಲ್ಲಿದ್ದ ಪಾರ್ಥಸಾರಥಿಯಲ್ಲಿ ಸೂಕ್ಷ್ಮ ಸಂವೇದನೆಯಿತ್ತು. ಸಮಾಜದ ಹಿತಕ್ಕಾಗಿ ಆತನ ಹೋರಾಟ ಪ್ರಾಮಾಣಿಕವಾಗಿತ್ತು ಎಂದು ಹೇಳಿದರು.
ಹೋರಾಟಗಾರ ದಲಿತ ಸಂಘರ್ಷ ಸಮಿತಿ ದಾವಣಗೆರೆಯ ಬಿ.ಎಂ.ಹನುಮಂತಪ್ಪ ಮಾತನಾಡುತ್ತ ಪಾರ್ಥಸಾರಥಿ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಸಮಾಜಕ್ಕೆ ದಿಕ್ಸೂಚಿಯಾದ ಹೋರಾಟ ಅವರದು. ಕ್ರಾಂತಿಗೀತೆ, ಹೋರಾಟ ಗೀತೆಗಳು ಹೆಚ್ಚಾಗಬೇಕು. ಏಕೆಂದರೆ ಹೊಲೆ ಮಾದಿಗರನ್ನು ವಿಜೃಂಭಿಸಿದ್ದೆ ಕ್ರಾಂತಿ ಹಾಡುಗಳು, ಬ್ಯಾಕ್‍ಲಾಗ್ ಹುದ್ದೆಗಳು ಸಾಕಷ್ಟು ಖಾಲಿಯಿದೆ. ಮಾದಿಗರಿಗೆ ಸಿಗಬೇಕಾದ ಹುದ್ದೆಗಳನ್ನು ಬ್ಯಾಕ್‍ಲಾಗ್‍ಗೆ ಸೇರಿಸಬಹುದು. ಇದರ ವಿರುದ್ದ ಮಾದಿಗರು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ತಿಳಿಸಿದರು.
ಸದ್ಯ ಒಳ ಮೀಸಲಾತಿ ಜಾರಿಯಾಗಬೇಕು. ಕೆನೆ ಪದರ ವಿಚಾರ ಬೇಡ. ದಾರಿತಪ್ಪಿಸುವ ಹುನ್ನಾರವಿದೆ. ಅಸ್ಪøಶ್ಯರು ಮಾದಿಗರಿಗೆ ಅನುಕೂಲವಾಗಲಿ ಎಂದು ಪಾರ್ಥಸಾರಥಿ ತನ್ನ ಜೀವನವನ್ನು ಒಳ ಮೀಸಲಾತಿ ಹೋರಾಟಕ್ಕಾಗಿಯೇ ಮುಡುಪಾಗಿಟ್ಟ ದಿಟ್ಟತನ ಇತರರಿಗೆ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಟಿ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಒಳ ಮೀಸಲಾತಿಗಾಗಿ ದಲಿತರ ಪರ ಹೋರಾಟ ಮಾಡಿದ ಪಾರ್ಥಸಾರಥಿ ಒಳ್ಳೆ ಕ್ರಾಂತಿಕಾರಿ ಹಾಡುಗಾರ. ಅಷ್ಟೆ ಸೂಕ್ಷ್ಮತೆಯಿತ್ತು. ನಾಡಿನಾದ್ಯಂತ ಸಂಚರಿಸಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ದಲಿತರನ್ನು ಎಚ್ಚರಿಸಿದ್ದ ಎಂದರು.
ಸಿ.ಮುನಿಸ್ವಾಮಿ, ಡಾ.ಎಂ.ಶ್ರೀನಿವಾಸ್‍ಮೂರ್ತಿ, ಮಂಡ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ.ಬರಗೂರಪ್ಪ, ಡಾ.ಮಂಜುನಾಥ್, ನಿವೃತ್ತ ಉಪನ್ಯಾಸಕ ಚಂದ್ರಣ್ಣ ಬೆಳ್ಳಿಪಟ್ಲು, ಶಿಕ್ಷಣ ಇಲಾಖೆಯ ಡಾ. ಹಂಪಿಲಿಂಗಯ್ಯ, ಎಂ.ಆರ್.ಹೆಚ್.ಎಸ್.ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‍ಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹಾಗೂ ಪಾರ್ಥಸಾರಥಿ ಕುಟುಂಬದವರು ವೇದಿಕೆಯಲ್ಲಿದ್ದರು.
ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಚಳ್ಳಕೆರೆ ನಗರಸಭೆ ಮಾಜಿ ಸದಸ್ಯ ಎಂ.ಶಿವಮೂರ್ತಿ, ನ್ಯಾಯವಾದಿಗಳಾದ ಶರಣಪ್ಪ, ಬೀಸ್ನಳ್ಳಿ ಜಯಣ್ಣ ಸೇರಿದಂತೆ ಪಾರ್ಥಸಾರಥಿಯ ಅನೇಕ ಅಭಿಮಾನಿಗಳು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.