ಕೌಶಲ್ಯಾಧಾರಿತ ಶಿಕ್ಷಣ ಕೊಡುವುದು ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರದ ಕೆಲಸ : ಡಾ.ವೆಂಕಟರಾವ್ ಪಲಾಟೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 22 : ಬಿ.ಇ.ಡಿ. ಶಿಕ್ಷಣದ ಜೊತೆ ಕೌಶಲ್ಯ, ಪ್ರತಿಭೆಯಿರಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಭಾರಿ ಕುಲ ಸಚಿವರಾದ ಡಾ.ವೆಂಕಟರಾವ್ ಪಲಾಟೆ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕೋಟೆ ರಸ್ತೆಯಲ್ಲಿರುವ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಬಿ.ಇ.ಡಿ. ಕಾಲೇಜಿನಲ್ಲಿ ಶುಕ್ರವಾರ ನಡೆದ 2023-24 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಗಾಟನೆ ಹಾಗೂ ಪ್ರತಿಭಾ ಪುರಸ್ಕಾರ, ಸ್ವಾಗತ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಒಳ್ಳೆಯ ಶಿಕ್ಷಕರು ದೇಶದ ಆಸ್ತಿ. ಬಿ.ಇ.ಡಿ. ಮುಗಿಸಿದವರಿಗೆ ಆತ್ಮವಿಶ್ವಾಸವಿರಬೇಕು. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಆದರೆ ಕೌಶಲ್ಯಾಧಾರಿತ ಶಿಕ್ಷಣ ಕೊಡುವುದು ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರದ ಕೆಲಸ. ವೇದಗಳ ಕಾಲದಿಂದಲೂ ಪರಿಪೂರ್ಣ ಶಿಕ್ಷಣಕ್ಕೆ ಬೇರೆ ಬೇರೆ ವ್ಯಾಖ್ಯಾನಗಳಿವೆ. ಆಧುನಿಕ ಶಿಕ್ಷಣ ಸಿಕ್ಕಿದ್ದು, ಬ್ರಿಟೀಷರ ಆಡಳಿತದ ನಂತರ. ಜಾತಿ ಪದ್ದತಿ, ಸತಿ ಸಹಗಮನ ಪದ್ದತಿ ನಿಕೃಷ್ಟ ಕೆಟ್ಟ ಆಚರಣೆ. ಭಾರತದ ಶಿಕ್ಷಣದ ತಳಹದಿ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.
ಇಡಿ ಜಗತ್ತಿನ ಎಲ್ಲಾ ಭಾಷೆಗಳು ಇಂಗ್ಲಿಷ್‍ನಲ್ಲಿದೆ. ಭಾವನೆಗಳನ್ನು ಹಂಚಿಕೊಳ್ಳಲು ಮಾತೃಭಾಷೆಗಳು ಬೇಕು. ಅನಿವಾರ್ಯವಾಗಿ ಇಂಗ್ಲಿಷ್ ಬೇಕು. ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಾಠ ಮಾಡುವ ಕೌಶಲ್ಯವಿದ್ದಾಗ ಪರಿಪೂರ್ಣ ಶಿಕ್ಷಕರಾಗುತ್ತೀರಿ. ಪ್ರಶಿಕ್ಷಣಾರ್ಥಿಗಳಾದ ನೀವುಗಳು ಶ್ರಮ ಸಂಸ್ಕøತಿಗೆ ಸೇರಬೇಕು. ಸ್ವಂತಿಕೆ, ಆತ್ಮಸ್ಥೈರ್ಯವಿದ್ದಾಗ ಮಾತ್ರ ನಿಮ್ಮ ಜೀವನವನ್ನು ನೀವುಗಳೆ ರೂಪಿಸಿಕೊಳ್ಳಬಹುದು ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯ ನಿಕಾಯ ಶಿಕ್ಷಣ ಮುಖ್ಯಸ್ಥರಾದ ಡಾ.ಕೆ.ವೆಂಕಟೇಶ್ ಮಾತನಾಡಿ ಕರ್ತವ್ಯಕ್ಕೆ ತಲೆಬಾಗಿದರೆ ನೀವುಗಳು ಯಾರಿಗೂ ತಲೆಬಾಗುವುದು ಬೇಡ. ಬಿ.ಇ.ಡಿ. ಮುಗಿಸಿದ ನಂತರ ಉತ್ತಮ ಶಿಕ್ಷಕನಾಗಲು ತರಬೇತಿ ಮುಖ್ಯ. ಪ್ರಶಿಕ್ಷಣಾರ್ಥಿಗಳ ಭಯ ಹೋಗಲಾಡಿಸುವುದಕ್ಕಾಗಿಯೇ ಬಿ.ಇ.ಡಿ. ವಿದ್ಯಾರ್ಥಿಗಳಿಗೆ ಮೈಕ್ರೋ ಟೀಚಿಂಗ್ ನೀಡಲಾಗುವುದು. ನೀವುಗಳು ಶಿಕ್ಷಕರುಗಳಾದ ಮೇಲೆ ಹತ್ತು ಹಲವಾರು ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು. ಪ್ರಶಿಕ್ಷಣಾರ್ಥಿಗಳಾದ ನೀವುಗಳು ಶ್ರಮ ಹಾಕಬೇಕು. ಆಗ ಮಾತ್ರ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಬಹುದು ಎಂದು ತಿಳಿಸಿದರು.
ಐ.ಡಿ.ಬಿ.ಐ. ಬ್ಯಾಂಕ್ ವ್ಯವಸ್ಥಾಪಕ ಪ್ರಸನ್ನಕುಮಾರ್ ಎಂ.ಎಸ್. ಮಾತನಾಡುತ್ತ ಆರ್ಥಿಕವಾಗಿ ಸ್ವತಂತ್ರವಾಗಿರಬೇಕು. ಹಣ ಗಳಿಸುವುದು ಎಷ್ಟು ಮುಖ್ಯವೋ ಅದನ್ನು ಹೇಗೆ ಉಳಿತಾಯ ಮಾಡಬೇಕೆನ್ನುವುದು ಕೂಡ ಅಷ್ಟೆ ಮುಖ್ಯ. ದುಡಿಯುವ ವ್ಯಕ್ತಿಗೆ ಜೀವ ವಿಮೆ ಇರಬೇಕು. ಏಕೆಂದರೆ ಯಾವ ಸಂದರ್ಭದಲ್ಲಿ ಮನುಷ್ಯನ ಆರೋಗ್ಯ ಕೈಕೊಡುತ್ತದೆ ಎನ್ನುವುದು ಗೊತ್ತಿಲ್ಲ. ಆಗ ಇಡಿ ಕುಟುಂಬವೇ ಪರಿತಪಿಸಬೇಕಾಗುತ್ತದೆ. ಅನಾವಶ್ಯಕವಾಗಿ ಸಾಲ ಮಾಡಿ ಜೀವನವಿಡಿ ಬಡ್ಡಿ ಕಟ್ಟುವಂತಾಗಬಾರದು. ಇದ್ದುದರಲ್ಲಿಯೇ ತೃಪ್ತಿಪಡುವುದು ಒಳ್ಳೆಯದು ಎಂದು ತಿಳಿಸಿದರು.
ರಾಘವೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ಸೀಡ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಹೆಚ್.ಶ್ರೀನಿವಾಸ್, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಶ್ರೀಮತಿ ಕೆ.ಶಾರದಮ್ಮ, ಪ್ರಾಚಾರ್ಯರಾದ ಡಾ.ಬಸವರಾಜಪ್ಪ ಎ.ಜಿ. ಶ್ರೀಮತಿ ಹೇಮಾವತಿ ವೇದಿಕೆಯಲ್ಲಿದ್ದರು.