ಅದಿರು ಸಾಗಿಸಲು ಅವಕಾಶ ನೀಡಿ : ಚಿತ್ರದುರ್ಗದಲ್ಲಿ ಲಾರಿ ಮಾಲೀಕರ ಸಂಘದ ಒತ್ತಾಯ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 14 : ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಆದ ತೀರ್ಮಾನದಂತೆ ಶೇ. 30 : 70 ಅನುಪಾತದಡಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡಲು ಅವಕಾಶ ನೀಡದಿರುವ ಹಿರೇಗುಂಟನೂರು ಹೋಬಳಿ ಬೆದರು ಬೊಮ್ಮನಹಳ್ಳಿ ಮತ್ತು ಮೇಗಳಹಳ್ಳಿ ಮಿನರಲ್ ಎಂಟರ್ ಪ್ರೈಸಸ್ ಸೇಸಾ ಗೋವಾ(ವೇದಾಂತ) ಮೈನ್ಸ್ ವಿರುದ್ದ ಚಿತ್ರದುರ್ಗ ಅದಿರು ಮತ್ತು ಸರಕು ಸಾಗಾಣಿಕೆ ಲಾರಿ ಮಾಲೀಕರ ಸಂಘದಿಂದ ಒನಕೆ ಓಬವ್ವ ವೃತ್ತದಲ್ಲಿ ಧರಣಿ ಮುಂದುವರೆದಿದೆ.
ದಿನಾಂಕ : 4-7-2013 ಅಂದಿನ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಗಣಿಗುತ್ತಿಗೆ ಪ್ರತಿನಿಧಿಗಳು ಲಾರಿ ಮಾಲೀಕರ ಸಮುಖ್ಯದಲ್ಲಿ ನಡೆದ ತೀರ್ಮಾನದಂತೆ ಶೇ.70 ರಷ್ಟು ಕಬ್ಬಿಣದ ಅದಿರು ರೈಲು ಮೂಲಕ ಮತ್ತು ಶೇ.30 ಅದಿರನ್ನು ಲಾರಿಗಳ ಮೂಲಕ ಸಾಗಿಸುವಂತೆ ತೀರ್ಮಾನವಾಗಿತ್ತು.
ಆದರೆ ಗಣಿ ಮಾಲೀಕರುಗಳು ಸಭೆಯಲ್ಲಿ ಆದ ತೀರ್ಮಾನದಂತೆ ನಿಯಮ ಪಾಲಿಸದಿರುವುದರಿಂದ ಲಾರಿ ಮಾಲೀಕರುಗಳು ಜೀವನ ಸಾಗಿಸಲು ಆಗದೆ ಬೀದಿಗೆ ಬಿದ್ದಿದ್ದಾರೆ. ನ್ಯಾಯ ಕೇಳಲು ಹೋದರೆ ಗಣಿ ಮಾಲೀಕರುಗಳು ನಮ್ಮ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಕಬ್ಬಿಣದ ಅದಿರು ಸಾಗಿಸಲು ಲಾರಿಗಳಿಗೆ ಅವಕಾಶ ನೀಡುವಂತೆ ಪ್ರತಿಭಟನಾನಿರತರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಚಿತ್ರದುರ್ಗ ಅದಿರು ಮತ್ತು ಸರಕು ಸಾಗಾಣಿಕೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಡಿ.ಅಶ್ವಕ್‍ಆಲಿ, ಗೌರವಾಧ್ಯಕ್ಷ ಮಹಮದ್ ಇಮ್ರಾನ್, ಕಾರ್ಯದರ್ಶಿ ಡಿ.ನಾಗರಾಜ್, ಸೈಯದ್ ಅನೀಸ್, ಸಾಧಿಕ್, ಶಂಷೀರ್, ಕೊಟ್ರೇಶ್, ಲೋಕೇಶ್, ಫಾರೂಖ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.