Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಿ : ಲೇಖಕ ಯೋಗೀಶ್ ಸಹ್ಯಾದ್ರಿ

12:37 PM Nov 24, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ನ. 23 : ಕನ್ನಡಿಗರು ಎಷ್ಟೇ ಭಾಷೆಗಳನ್ನು ಕಲಿತರೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಭಾರತದ ನೆಲದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ ಎಂದು ಲೇಖಕ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ನಗರದ ತುರುವನೂರು ರಸ್ತೆಯಲ್ಲಿರುವ ಕೆ.ಕೆ. ನ್ಯಾಷನಲ್ ಆಂಗ್ಲ ಹಿರಿಯ ಹಾಗೂ ಪ್ರೌಢಶಾಲೆ ಚಿತ್ರದುರ್ಗ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ದಿ:9/11/24 ರಂದು ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲೇಖಕ ಯೋಗೀಶ್ ಸಹ್ಯಾದ್ರಿ ಅವರು, ಕನ್ನಡಿಗರಿಗೆ ಕನ್ನಡ ಭಾಷೆಯೆ ಸ್ವರ್ಗ ಹಾಗೂ ಹಬ್ಬವಿದ್ದಂತೆ. ಆದರೆ ಕನ್ನಡ ಮಾತೃಭಾಷೆಯು ಉದ್ಯೋಗದ ಭಾಷೆಯಾಗುವಂತೆಯೂ ಸರ್ಕಾರ ಮತ್ತು ಸಾಹಿತಿಗಳು, ಕನ್ನಡ ಪ್ರೇಮಿಗಳು ಕಾರ್ಯಗತರಾಗಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಕನ್ನಡದ ಮಕ್ಕಳ ಪ್ರೇಮವನ್ನು ಮಾತಿನಲ್ಲಿ ಬಣ್ಣಿಸಲಾಗದು ಎಂದು ಹೇಳುತ್ತಾ, ಕನ್ನಡ ಭಾಷೆಯ ಇತಿಹಾಸ, ಪ್ರಾಮುಖ್ಯತೆ, ಕವಿಗಳು, ಕವಿವಾಣಿಗಳು, ಬಸವಣ್ಣ, ಕನಕದಾಸರು ಮೊದಲಾದ ಕವಿ ಶ್ರೇಷ್ಠರನ್ನು ನೆನಪಿಸಿಕೊಂಡರು. ನಾವು ವ್ಯವಹರಿಸಲು ಮತ್ತು ಬದುಕಲು ಎಷ್ಟೇ ಭಾಷೆಗಳನ್ನು ಕಲಿಯಬಹುದು. ಆದರೆ ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡಬೇಕು ಎಂದು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ|| ಹೆಚ್. ಆರ್. ಮಂಜುನಾಥ್ ರವರು ಎಷ್ಟೇ ದೇಶ ವಿದೇಶ ಸುತ್ತಿದರೂ ಭಾರತೀಯನಾಗಿ, ಕನ್ನಡಿಗನಾಗಿ ಹೆಮ್ಮೆ ಇದೆ, ಮಕ್ಕಳ ಪ್ರತಿಭೆಯನ್ನು ಗುರುತಿಸುವುದಕ್ಕೆ ಇದು ಒಂದು ವೇದಿಕೆ ಎಂದರು. ಆಡಳಿತ ಅಧಿಕಾರಿ ಶ್ರೀಯುತ ಕಾರ್ತಿಕ್ ರವರು ಪ್ರಬಂಧ ಸ್ಪರ್ಧೆಯ ರೂಪು-ರೇಷೆಗಳನ್ನು ವಿವರಿಸಿ ವಿಜೇತರಾದವರನ್ನು ಘೋಷಿಸಿದರು. ಶ್ರೀಮತಿ ಸುಶೀಲಾ ಕಾರ್ಯಕ್ರಮ ನಿರೂಪಿಸಿದರು, ಪ್ರಾರ್ಥನೆ ಶ್ರೀಮತಿ ಲಾವಣ್ಯ ಅವರದು, ಸ್ವಾಗತವನ್ನು ಶ್ರೀಮತಿ ರೂಪಿಣಿ ನೆರವೇರಿಸಿದರು. ವಂದನಾರ್ಪಣೆಯನ್ನು ಶ್ರೀಮತಿ ವಿಜಯಲಕ್ಷ್ಮಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಮಹೇಶ್ವರಪ್ಪ ಹಾಗೂ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ರವರು, ಹಿರಿಯ ಶಿಕ್ಷಕಿ ಸಿ.ಬಿ ನಿರ್ಮಲಾ ರವರು ಉಪಸ್ಥಿತರಿದ್ದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮೊದಲ ಬಹುಮಾನ - ಆಧ್ಯಾ (ತರಳಬಾಳು)
ಎರಡನೆಯ ಬಹುಮಾನ-ಜಯಶ್ರೀ (ಸಂತ ಜೋಸೆಫರ ಶಾಲೆ)
ತೃತೀಯ ಬಹುಮಾನ - ಬೇಬಿ.ಆರ್ ( ಕೆ.ಕೆ.ನ್ಯಾಷನಲ್ ಆಂಗ್ಲ ಹಿರಿಯ ಹಾಗೂ ಪ್ರೌಢಶಾಲೆ) ಹಾಗೂ
ಆಧ್ಯಾ ಕೌಸರ್ ( ಸಂತ ಜೋಸೆಫರ ಶಾಲೆ)
ಇವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

Advertisement
Tags :
Author Yogeesh Sahyadribengaluruchitradurgakannadakannada languageKannadaNewssuddionesuddionenewsಕನ್ನಡಕನ್ನಡ ಭಾಷೆಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಪ್ರಾಶಸ್ತ್ಯ ಲೇಖಕ ಯೋಗೀಶ್ ಸಹ್ಯಾದ್ರಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article