Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಫೆಬ್ರವರಿ ಅಂತ್ಯದ ವೇಳೆಗೆ ರೈತರಿಗೆ ಬೆಳೆವಿಮೆ ಪರಿಹಾರ ಹಣ ನೀಡಿ : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿ ಸೂಚನೆ

05:22 PM Feb 08, 2024 IST | suddionenews
Advertisement

 

Advertisement

 

ಸುದ್ದಿಒನ್, ಚಿತ್ರದುರ್ಗ. ಫೆಬ್ರವರಿ .08: ಬೆಳೆ ವಿಮೆಗಾಗಿ ನೊಂದಾಯಿಸಿಕೊಂಡಿರುವ ರೈತರ ಖಾತೆಗೆ ಇದೇ ಫೆಬ್ರವರಿ ಅಂತ್ಯದ ವೇಳೆಗೆ ಇದೇ ಫೆಬ್ರವರಿ ಅಂತ್ಯದ ವೇಳೆಗೆ ನಿಯಮಾನುಸಾರ ಬೆಳೆವಿಮೆ ಪರಿಹಾರ ಹಣ ಜಮೆಯಾಗುವಂತೆ ಕೃಷಿ ಹಾಗೂ ವಿಮಾ ಕಂಪನಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

Advertisement

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2023-24ನೇ ಫಸಲ್ ಭೀಮಾ ಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಕೇವಲ ದತ್ತಾಂಶಗಳ ಮರು ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. ಈ ಕಾರ್ಯವನ್ನು 15 ದಿನದ ಒಳಗೆ ಪೂರ್ಣಗೊಳಿಸಿ ಅರ್ಹ ರೈತರ ಖಾತೆ ನೇರವಾಗಿ ಪರಿಹಾರದ ಹಣವನ್ನು ಜಮೆ ಮಾಡಬೇಕು. ಇದಕ್ಕೆ ಯಾವುದೇ ಸಬೂಬುಗಳನ್ನು ನೀಡಬಾರದು. ಬೆಳೆ ವಿಮೆ ಪರಿಹಾರದ ಕಾರ್ಯ ಸಂಪೂರ್ಣವಾಗಿ ಪಾರದರ್ಶಕವಾಗಿ ಇರಬೇಕು. ತಾಂತ್ರಿಕ ಕಾರಣಗಳಿಂದ ಬೆಳೆವಿಮೆ ಪರಿಹಾರದ ಹಣ ಬಿಡುಗಡೆ ಆಗದಿದ್ದರೆ, ಅಥವಾ ಕೆಲವು ರೈತರ ಖಾತೆಗೆ ಜಮೆ ಆಗದಿದ್ದರೆ ಈ ಕುರಿತು ಪ್ರತಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೂ ಮಾಹಿತಿ ನೀಡಬೇಕು.  ರೈತರು ಗೊಂದಲಕ್ಕೆ ಒಳಗಾಗದಂತೆ ತಿಳಿ ಹೇಳಬೇಕು.  ಕೃಷಿ ವಿಮಾ ಕಂಪನಿಗಳು ಬೆಳೆ ಪರಿಹಾರದ ಕಾರ್ಯವನ್ನು ವ್ಯಾಪಾರೀಕರಣದ ದೃಷ್ಠಿಯಿಂದ ನೋಡಬಾರದು. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ತಾಲ್ಲೂಕುಗಳಲ್ಲಿಯೂ ವಿಮಾ ಕಂಪನಿ ಪ್ರತಿನಿಧಿಗಳನ್ನು ನೇಮಕ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಬೆಳೆವಿಮೆ ಕುರಿತು ರೈತರಿಗೆ ಕಾರ್ಯಗಾರ ಆಯೋಜಿಸಿ:

ಬೆಳೆವಿಮೆ ನೀತಿಗಳು, ಯಾವ ಸಂದರ್ಭದಲ್ಲಿ ವಿಮೆ ಕಟ್ಟಬೇಕು. ವಿಮೆಗೆ ಕಟ್ಟಿದ ಹಣವನ್ನು ಬೇರೆ ಬೆಳೆಗಳಿಗೆ ಯಾವ ರೀತಿ ಬದಲಾಯಿಸಿಕೊಳ್ಳಬೇಕು ಎಂಬುದು ರೈತರಿಗೆ ಮಾಹಿತಿಯ ಕೊರತೆ ಇರುತ್ತದೆ.  ಹೀಗಾಗಿ ಕೃಷಿ ಇಲಾಖೆ ವತಿಯಿಂದ ಪ್ರತಿ ಹೊಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೆಳೆವಿಮೆ ಕುರಿತು ಕಾರ್ಯಗಾರ ಆಯೋಜಿಸಬೇಕು. ಇದರಲ್ಲಿ ಪ್ರಗತಿ ಪರ ರೈತರು, ರೈತರ ಮುಖಂಡರು ಪಾಲ್ಗೊಳ್ಳುವಂತೆ ಮಾಡಿ ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಬೇಕು. ಬೆಳೆ ಸಮೀಕ್ಷೆ ಕೈಗೊಳ್ಳಬೇಕಾದ ವೈಜ್ಞಾನಿಕ ವಿಧಾನಗಳ ಬಗ್ಗೆ ರೈತರಿಗೆ ತಿಳುವಳಿಕೆ ನೀಡಿ. ಸಮೀಕ್ಷೆ ಸಂದರ್ಭದಲ್ಲಿ ತಮ್ಮ ಜಮೀನುಗಳಲ್ಲಿ ಇದ್ದು, ಸಮೀಕ್ಷೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ರೈತರು ಕೂಡ ತಮ್ಮ ಜಮೀನು ಹಾಗೂ ಬೆಳೆಗಳ ಬಗ್ಗೆ ಜಾಗರೂಕತೆ ವಹಿಸಬೇಕು. ಪಹಣಿಗಳಲ್ಲಿ ಬೆಳೆ ತಪ್ಪಾಗಿ ನಮೂದು ಅದರೆ ಅದು ರೈತರಿಗೆ ತೊಂದರೆಯಾಗುತ್ತದೆ. ಸ್ಮಾರ್ಟ್ ಪೋನ್‍ಗಳಲ್ಲಿ ಜಮೀನಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.

2023-24ನೇ ಸಾಲಿನಲ್ಲಿ ಜಿಲ್ಲೆಯ 2,59,486 ಎಕರೆ ಕೃಷಿ ಭೂಮಿಯ ಪೈಕಿ, 1,05,000 ಎಕೆರೆ ಪ್ರದೇಶಕ್ಕೆ 80,633 ರೈತರು ಬೆಳೆ ವಿಮೆ ನೊಂದಾವಣಿ ಮಾಡಿಸಿದ್ದಾರೆ. ಇದರಲ್ಲಿ ಶೇಂಗಾ 38,496, ಮುಸುಕಿ ಜೋಳ 27,396 , ತೊಗರಿ 4,109, ರಾಗಿ 2,719, ಸಾಮೆ 3,790, ಹೆಸರು 2,427, ಹತ್ತಿ 1,960, ಸೂರ್ಯಕಾಂತಿ 675, ಟೊಮ್ಯಾಟೊ ಬೆಳೆಗೆ 97, ಎಳ್ಳು 17, ಹುರುಳಿ 70, ನವಣೆ 376, ಸಜ್ಜೆ 51, ಕೆಂಪು ಮೆಣಸಿನಕಾಯಿಗೆ 61 ರೈತರು ಬೆಳೆ ವಿಮೆಗೆ ನೊಂದಾಯಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಖಾಸಗಿ ಬೆಳೆ ವಿಮೆ ಕಂಪನಿಗಳು ರೈತರನ್ನು ಶೋಷಣೆ ಮಾಡುತ್ತಿವೆ. ಬೆಳೆ ವಿಮೆ ಕಟ್ಟಿಸಿಕೊಳ್ಳಲು ದಿನಾಂಕ ನಿಗದಿ ಮಾಡುವ ಕಂಪನಿಗಳು, ಸಕಾಲದಲ್ಲಿ ಬೆಳೆವಿಮೆಯ ಪರಿಹಾರದ ಮೊತ್ತವನ್ನು ಪಾತಿಸಲು ದಿನಾಂಕ ನಿಗದಿ ಮಾಡುವುದಿಲ್ಲ. ರಾಜ್ಯದಲ್ಲಿ ಬರ ಘೋಷಣೆ ಆದ ತಕ್ಷಣ ಮಧ್ಯಂತರ ಪರಿಹಾರವನ್ನು ಬೆಳೆ ವಿಮೆ ಕಂಪನಿ ನೀಡಬೇಕಿತ್ತು.  ವಿವಿಧ ಜಿಲ್ಲೆಗಳಲ್ಲಿ ಮಧ್ಯಂತರ ಪರಿಹಾರ ನೀಡಲಾಗಿದೆ. ಜಿಲ್ಲೆಯ ರೈತರಿಗೆ ಮಾತ್ರ ನೀಡಿಲ್ಲ. ಬೆಳೆವಿಮೆ ಕಂಪನಿಗಳು ನೊಂದಣಿ ಮಾಡಿರುವ ರೈತರಿಗೆ ಯಾವುದೇ ರೀತಿ ಬಾಂಡ್‍ಗಳನ್ನು ನೀಡುತ್ತಿಲ್ಲ. ಇತರೆ ಜೀವ ವಿಮೆ ಕಂಪನಿಗಳ ಮಾದರಿಯಲ್ಲಿ ಬೆಳೆವಿಮೆ ಬಾಂಡ್‍ಗಳನ್ನು ನೀಡಬೇಕು. ನೆರೆಯ ಆಂದ್ರ ಹಾಗೂ ತೆಲಂಗಾಣ ರಾಜ್ಯದಲ್ಲಿನ ಮಾದರಿಯಂತೆ ನಮ್ಮಲ್ಲಿಯೂ ಸರ್ಕಾರಿ ವಿಮಾ ಕಂಪನಿಗಳೇ ಬೆಳೆವಿಮೆಯನ್ನು ನೊಂದಾಯಿಸಿಕೊಳ್ಳುವಂತಾಗಬೇಕು ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ಸಭೆಯಲ್ಲಿ ಮನವಿ ಮಾಡಿಕೊಂಡರು.

ರಾಜ್ಯದ ಬೆಳೆವಿಮೆ ಪರಿಹಾರದ ಪದ್ದತಿ ವಿಶ್ವದಲ್ಲೇ ಉತ್ತಮವಾದ ಪದ್ದತಿ ಎಂದು ಮನ್ನಣೆ ಪಡೆದಿದೆ. ವಿದೇಶಗಳು ಕೂಡ ಈ ಪದ್ದತಿಯನ್ನು ಅಳವಡಿಕೊಳ್ಳಲು ಚಿಂತನೆ ನಡೆಸಿವೆ. ಫಸಲ್ ಭೀಮಾ ಯೋಜನೆ ಸಂಪೂರ್ಣ ಪಾರದರ್ಶವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಬಾರಿ 8 ತಿಂಗಳ ಒಳಗೆ ರೈತರ ಖಾತೆ ಪರಿಹಾರ ಧನ ಜಮೆ ಮಾಡಲಾಗಿದೆ. ಪೂರ್ಣ ಪ್ರಮಾಣದ ಪರಿಹಾರ ಧನವನ್ನು ಜಮೆ ಮಾಡಲು ಎಲ್ಲಾ ಸಿದ್ದತೆಗಳನ್ನು  ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಮಧ್ಯಂತರ ಪರಿಹಾರವನ್ನು ನೀಡಿಲ್ಲ. ಫೆಬ್ರವರಿ ಅಂತ್ಯದ ವೇಳೆ ಸಂಪೂರ್ಣ ಪರಿಹಾರ ರೈತರ ಖಾತೆಗೆ ನೇರವಾಗಿ ಜಮೆ ಆಗುವ ನಿರೀಕ್ಷೆ ಇದೆ ಎಂದು ಜಂಟಿ ನಿರ್ದೇಶಕ ಮಂಜುನಾಥ ಸ್ಪಷ್ಟನೆ ನೀಡಿದರು.

ಹಿರಿಯೂರು ತಾಲ್ಲೂಕಿನಲ್ಲಿ ಸೂರ್ಯಕಾಂತಿ ಬೆಳೆ ಬಿತ್ತನೆ ಬಗ್ಗೆ ಉಂಟಾಗಿರುವ ತಾಂತ್ರಿಕ ದೋಷಗಳನ್ನು ರೈತರು ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿಗಳು ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ, ರೈತರಿಗೆ ಅನ್ಯಾಯವಾಗದಂತೆ ಬೆಳೆವಿಮೆ ಪರಿಹಾರ ಹಣ ಪಾವತಿಯಾಗುವಂತೆ ನೋಡಿಕೊಳ್ಳಲು ಕೃಷಿ ಹಾಗೂ ವಿಮಾ ಕಂಪನಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕ ಡಾ.ಶಿವಕುಮಾರ್, ನರ್ಬಾಡ್ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಕವಿತಾ ಶಶಿಧರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್, ಚಿತ್ರದುರ್ಗ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ವಿಮಾ ಕಂಪನಿಯ ಜಿಲ್ಲಾ ವ್ಯವಸ್ಥಾಪಕ ಹರ್ಷವರ್ಧನ್,  ರೈತ ಮುಖಂಡರಾದ ಕೊಂಚೆ ಶಿವರುದ್ರಪ್ಪ, ಹಂಪಯ್ಯನ ಮಾಳಿಗೆ ಧನಂಜಯ್ ಸೇರಿದಂತೆ ಇತರೆ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Tags :
Additional District Collector BT Kumaraswamychitradurgacompensation!crop insuranceFarmersfebruarynoticesuddionesuddione newsಅಂತ್ಯಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿಚಿತ್ರದುರ್ಗಪರಿಹಾರ ಹಣಫೆಬ್ರವರಿಬೆಳೆವಿಮೆರೈತರುಸುದ್ದಿಒನ್ಸುದ್ದಿಒನ್ ನ್ಯೂಸ್ಸೂಚನೆ
Advertisement
Next Article