ಫೆಬ್ರವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾಸಮ್ಮೇಳನ | ಚಿತ್ರದುರ್ಗ ಜಿಲ್ಲೆಯಿಂದ 5000 ನೌಕರರು ಭಾಗವಹಿಸುವ ನಿರೀಕ್ಷೆ : ಕೆ.ಟಿ.ತಿಮ್ಮಾರೆಡ್ಡಿ
ಸುದ್ದಿಒನ್, ಚಿತ್ರದುರ್ಗ ಫೆ. 25 : ಹಳೇ ಪಿಂಚಣಿ ಯೋಜನೆ ಮರು ಜಾರಿ, 7 ನೇ ವೇತನ ಆಯೋಗದ ವರದಿಯ ಅನುಷ್ಠಾನ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಾಡುವಂತೆ ಆಗ್ರಹಿಸಿ ಫೆಬ್ರವರಿ 27 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾಸಮ್ಮೇಳನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದೆಂದು ಜಿಲ್ಲಾಧ್ಯಕ್ಷರಾದ ಕೆ.ಟಿ.ತಿಮ್ಮಾರೆಡ್ಡಿಯವರು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾಸಮ್ಮೇಳನದಲ್ಲಿ ರಾಜ್ಯ ಮೂಲೆ ಮೂಲೆಗಳಿಂದ ಸುಮಾರು 2 ರಿಂದ 3 ಲಕ್ಷ ನೌಕರರು ಭಾಗವಹಿಸುತ್ತಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಸುಮಾರು 5000 ನೌಕರರು ಭಾಗವಹಿಸುವ ನಿರೀಕ್ಷೆಯಿದ್ದು ಸದರಿ ನೌಕರರುಗಳು ಬಸ್, ರೈಲು ಹಾಗೂ ಖಾಸಗಿ ವಾಹನಗಳಲ್ಲಿ ಸಮ್ಮೇಳನಕ್ಕೆ ತೆರಳುತ್ತಿದ್ದಾರೆ. ಬಸ್ ಮೂಲಕ ತೆರಳುವ ನೌಕರರಿಗೆ ಜಿಲ್ಲಾ ಕೇಂದ್ರ ಸ್ಥಾನ ಹಾಗೂ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬಸ್‍ಗಳ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ಹಾಗೂ ಆಯಾ ತಾಲ್ಲೂಕು ಶಾಖೆಗಳ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಕೇಂದ್ರ ಚಿತ್ರದುರ್ಗದಿಂದ 20 ಬಸ್ ಹಾಗೂ ಆಯಾ ತಾಲ್ಲೂಕು ಕೇಂದ್ರಗಳಿಂದ ತಲಾ 10 ಬಸ್‍ಗಳು ಒಟ್ಟು 70 ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು ಆಯಾ ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು ತಮ್ಮ ತಮ್ಮ ತಾಲ್ಲೂಕು ಕೇಂದ್ರಗಳ ಮೂಲಕ ಹೊರಡುವ ಬಸ್‍ಗಳಲ್ಲಿ ಸಮ್ಮೇಳನ ಸ್ಥಳಕ್ಕೆ ಹೋಗಬಹುದಾಗಿರುತ್ತದೆ, ಚಿತ್ರದುರ್ಗ ಕೇಂದ್ರ ಸ್ಥಾನದಲ್ಲಿ 20 ಬಸ್‍ಗಳ ವ್ಯವಸ್ಥೆ ಕಲ್ಪಿಸಿದ್ದು, ಐ.ಬಿ.ಮುಂಭಾಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಸ್ಸುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು,ಫೆ. 27ರ ಮಂಗಳವಾರ ಬೆಳಗ್ಗೆ 6 ಗಂಟೆಗೆ ಬಸ್ ಹೊರಡುವುದರಿಂದ ನೌಕರರು ಸದರಿ ಸ್ಥಳದಲ್ಲಿ ಹಾಜರಿದ್ದು ಸಮ್ಮೇಳನಕ್ಕೆ ಹೋಗಬಹುದಾಗಿರುತ್ತದೆ ಎಂದು ತಿಮ್ಮಾರೆಡ್ಡಿ ತಿಳಿಸಿದ್ದಾರೆ.
ಸದರಿ ಸಮ್ಮೇಳನದಲ್ಲಿ ಭಾಗವಹಿಸುವ ನೌಕರರಿಗೆಫೆ. 27ಮತ್ತು28 ಎರಡು ದಿನ ವಿಶೇಷ ಸಾಂದರ್ಭಿಕ ರಜೆಯನ್ನು (ಓ.ಓ.ಡಿ.ಸೌಲಭ್ಯ) ರಾಜ್ಯ ಸರ್ಕಾರ ಮಂಜೂರು ಮಾಡಿ ಆದೇಶ ಹೊರಡಿಸಿದ್ದು ಸಮ್ಮೇಳನದಲ್ಲಿ ಭಾಗವಹಿಸುವ ನೌಕರರು ತಮ್ಮ ಇಲಾಖೆ ಮುಖ್ಯಸ್ಥರಿಗೆ ಈ ಬಗ್ಗೆ ಮನವಿ ಸಲ್ಲಿಸಿ ಸೌಲಭ್ಯ ಪಡೆಯಬಹುದಾಗಿರುತ್ತದೆ ಎಂದಿದ್ದಾರೆ.
ಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್ ಕೆ. ಮಂಜುನಾಥ್, ಜಿಲ್ಲಾ ಖಜಾಂಚಿ, ವೀರೇಶ್, ರಾಜ್ಯ ಪರಿಷತ್ ಸದಸ್ಯರಾದ ಬಾಗೇಶ್ ಆರ್. ಉಗ್ರಾಣ ಜಿಲ್ಲಾ ಗೌರವಾಧ್ಯಕ್ಷರಾದ ಲೋಕೇಶ್ ಸುಧಾ, ಸಿದ್ದೇಶ್, ಬಾಲಪ್ಪ ಚಂದ್ರನಾಯ್ಕ್ ಸೇರಿದಂತೆ ಇತರರು ಭಾಗವಹಿಸಿದ್ದರು.