ಗಣೇಶ ಮೂರ್ತಿ ವಿಸರ್ಜನೆ : ಚಿತ್ರದುರ್ಗ ನಗರದಲ್ಲಿ ಎಲ್ಲೆಲ್ಲಿ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ ?
ಚಿತ್ರದುರ್. ಸೆ.04: ಗಣೇಶ ಮೂರ್ತಿ ವಿಸರ್ಜನೆಗೆ ನಗರದ ಒನಕೆ ಓಬವ್ವ ಕ್ರೀಡಾಂಗಣ ಬಳಿ, ಐಯುಡಿಪಿ ಬಡಾವಣೆ ರಾಜ್ ಕುಮಾರ್ ಪಾರ್ಕ್ ಹತ್ತಿರ, ಕೋಟೆ ರಸ್ತೆಯ ಏಕನಾಥೇಶ್ವರಿ ಪಾದ ಗುಡಿ ಮುಂಭಾಗ, ಜೆ.ಸಿ.ಆರ್. ಬಡಾವಣೆಯ ಗಣೇಶ ದೇವಸ್ಥಾನದ ಹತ್ತಿರ, ಸಿಹಿ ನೀರು ಹೊಂಡ ಆವರಣ, ಪತಂಜಲಿ ಆಸ್ಪತ್ರೆಯ ಪಕ್ಕ, ಕೆಳಗೋಟೆಯ ಚನ್ನಕೇಶವ ದೇವಸ್ಥಾನದ ಹತ್ತಿರ, ತುರುವನೂರು ರಸ್ತೆಯ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಮುಂಭಾಗ, ಗೋಪಾಲಪುರ ನೀರಿನ ಟ್ಯಾಂಕ್ ಹತ್ತಿರ, ಗುಮಸ್ತರ ಕಾಲೋನಿ ರೈತ ಭವನದ ಹತ್ತಿರ, ಜೋಗಿಮಟ್ಟಿ ರಸ್ತೆಯ ತಿಪ್ಪಿನಘಟ್ಟಮ್ಮ ದೇವಸ್ಥಾನದ ಹತ್ತಿರದ ಪಾರ್ಕ್ ಹಾಗೂ ಚಂದ್ರವಳ್ಳಿ ಕೆರೆ ಹತ್ತಿರ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.
ಪ್ರಯುಕ್ತ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವುದೇ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ಮಣ್ಣಿನಿಂದ ನಿರ್ಮಸಿದ ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ, ಮೂರ್ತಿಗಳನ್ನು ಪೂಜಿಸಿದ ನಂತರ ಹೊಂಡ, ಕೆರೆ ಭಾವಿಗಳಲ್ಲಿ ವಿಸರ್ಜಿಸಬಾರದು. ಇದರಿಂದ ಜಲ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಉಂಟಾಗಿ ಜೀವ ರಾಶಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಪರಿಸರಕ್ಕೆ ಧಕ್ಕೆಯಾಗದಂತೆ ಗಣೇಶ ಹಬ್ಬದ ನಂತರ ನಗರ ಸಭೆಯ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ಸದ್ಬಳಕೆ ಮಾಡಿಕೊಂಡು ಮೂರ್ತಿ ವಿಸರ್ಜಿಸುವಂತೆ ಪೌರಾಯುಕ್ತೆ ಎಂ.ರೇಣುಕಾ ನಾಗರೀಕರಲ್ಲಿ ಮನವಿ ಮಾಡಿದ್ದಾರೆ.