For the best experience, open
https://m.suddione.com
on your mobile browser.
Advertisement

ನವೆಂಬರ್ 19 ರಿಂದ ಡಿಸೆಂಬರ್ 12 ರವರೆಗೆ “ನಮ್ಮ ಶೌಚಾಲಯ-ನಮ್ಮ ಗೌರವ” ವಿಶೇಷ ಆಂದೋಲನ : ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್

05:57 PM Nov 16, 2024 IST | suddionenews
ನವೆಂಬರ್ 19 ರಿಂದ ಡಿಸೆಂಬರ್ 12 ರವರೆಗೆ “ನಮ್ಮ ಶೌಚಾಲಯ ನಮ್ಮ ಗೌರವ” ವಿಶೇಷ ಆಂದೋಲನ   ಜಿಲ್ಲಾ ಪಂಚಾಯಿತಿ ಸಿಇಒ ಎಸ್ ಜೆ ಸೋಮಶೇಖರ್
Advertisement

ಚಿತ್ರದುರ್ಗ. ನ.16: ವಿಶ್ವ  ಶೌಚಾಲಯ ದಿನಾಚರಣೆ ಪ್ರಯುಕ್ತ ಇದೇ ನ 19 ರಿಂದ ಡಿಸೆಂಬರ್ 10 ರವರೆಗೆ “ನಮ್ಮ ಶೌಚಾಲಯ-ನಮ್ಮ ಗೌರವ” ಎಂಬ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.

Advertisement

ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನ.19ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದೇಸೆ ಮುಕ್ತ ಸ್ಥಿತಿಯ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರಸ್ತುತ ವರ್ಷ “ನಮ್ಮ ಶೌಚಾಲಯ-ನಮ್ಮ ಗೌರವ ಎಂಬ ಶೀರ್ಷಿಕೆ ಹಾಗೂ “ಅಂದದ ಶೌಚಾಲಯ-ಆನಂದದ ಜೀವನ” ಎಂಬ ಘೋಷವಾಕ್ಯದೊಂದಿಗೆ ವಿಶೇಷ ಆಂದೋಲನ ಆಯೋಜಿಸಲಾಗುತ್ತಿದೆ.  ವಿಶೇಷ ಆಂದೋಲನದಲ್ಲಿ ಜಿಲ್ಲಾಮಟ್ಟದ, ತಾಲ್ಲೂಕುಮಟ್ಟದ ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಜಾಗೃತಿ ಚಟುವಟಿಕೆಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಲಾಗುವುದು.

Advertisement

ಜಿಲ್ಲಾಮಟ್ಟದಲ್ಲಿ ನ.19ರಂದು ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ  ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಅಂದು ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಲಾಗುವುದು. ತಾಲ್ಲೂಕುಪಂಚಾಯಿತಿಗಳಲ್ಲಿ ಶಿಫಾರಸ್ಸುಗೊಂಡ ಅತ್ಯುತ್ತಮ ಗೃಹ ಶೌಚಾಲಯಗಳ ಪೈಕಿ 5ನ್ನು ಆಯ್ಕೆ ಮಾಡುವುದು ಹಾಗೂ ಸಮುದಾಯ ಶೌಚಾಲಯಗಳ ಪೈಕಿ 5ನ್ನು ಆಯ್ಕೆ ಮಾಡಿ ಪುರಸ್ಕಾರ ನೀಡಿ ಗೌರವಿಸಲಾಗುವುದು.
ವಿಶೇಷ ಆಂದೋಲನ ಅಂಗವಾಗಿ ಎಲ್ಲ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯ ಬಳಕೆ ಕುರಿತು ಸಮೀಕ್ಷೆ ನಡೆಸಲಾಗುವುದು. ಗೃಹ ಶೌಚಾಲಯಗಳನ್ನು ನಿರಂತರವಾಗಿ ಬಳಸುವ ಫಲಾನುಭವಿಗಳನ್ನು ಗುರುತಿಸಿ ಬಹುಮಾನ ನೀಡಿ ಗೌರವಿಸಲಾಗುವುದು. ಸ್ಪರ್ಧೆ ಆಯೋಜಿಸಿ  ಅತ್ಯುತ್ತಮ ವೈಯಕ್ತಿಕ ಗೃಹ ಶೌಚಾಲಯಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಸ್ಪರ್ಧೆ ಕಳುಹಿಸಿಕೊಡಲಾಗುವುದು. ಸ್ವಚ್ಛತಾ ಕಾರ್ಮಿಕರಿಗೆ ವಿಶೇಷ ಶಿಬಿರ ಆಯೋಜಿಸಲಾಗುವುದು. ಶೌಚಾಲಯ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೌಚಾಲಯ ನಿರ್ಮಾಣಕ್ಕೆ  ಕ್ರಮವಹಿಸಲಾಗುವುದು. ಸಮುದಾಯ ಶೌಚಾಲಯಗಳನ್ನು ಶುಚಿತ್ವಗೊಳಿಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಅವುಗಳ ಸೌಂದರ್ಯೀಕರಣಕ್ಕೆ ಆಂದೋಲನ ಹಮ್ಮಿಕೊಳ್ಳಲಾಗುವುದು.

ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳು ಶೌಚಾಲಯ ಆಂದೋಲನಕ್ಕೆ ಸಹಯೋಗ ನೀಡಲಿವೆ. ಶೌಚಾಲಯ ಇಲ್ಲದಿರುವ ಆಸ್ಪತ್ರೆ, ಅಂಗನವಾಡಿ ಹಾಗೂ ಶಾಲೆಗಳನ್ನು ಪಟ್ಟಿ ಮಾಡಿ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಲಿವೆ. ಈಗಾಗಲೇ ಇರುವ ಶೌಚಾಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲಿವೆ. ರೋಗಿಗಳು, ಮಕ್ಕಳು ಹಾಗೂ ಹದಿ ಹರೆಯದವರಿಗೆ  ಅಂಗನವಾಡಿ, ಆಶಾ ಹಾಗೂ ಶಿಕ್ಷಕರು ಜಾಗೃತಿ ಮೂಡಿಸಲಿದ್ದಾರೆ. ಶಾಲೆಗಳಲ್ಲಿ ಈ ಕುರಿತು ನಾಟಕ, ಕಿರುಚಿತ್ರ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ಸಾಮಾಜಿಕ ಜಾಣತಾಣಗಳಲ್ಲಿಯೂ ಶೌಚಾಲಯ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.

Advertisement
Tags :
Advertisement