ಆರ್ಯ ವೈಶ್ಯ ಸಮುದಾಯದ ವಧು ವರಾನ್ವೇಷಣೆಗಾಗಿ ಋಣಾನುಬಂಧ ಕಾರ್ಯಕ್ರಮ : ಎಲ್. ಈ. ಶ್ರೀನಿವಾಸ್‍ಬಾಬು
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂ.16 : ಕಾಲ ಬದಲಾದಂತೆ ವೃತ್ತಿ ಮನಸ್ಸುಗಳು ಬದಲಾಗುತ್ತಿವೆ ಎಂದು ಕರ್ನಾಟಕ ಆರ್ಯವೈಶ್ಯ ಆವೋಪ.ಗಳ ಒಕ್ಕೂಟದ ಕಾರ್ಯದರ್ಶಿ ಹೆಚ್.ಜಿ.ದತ್ತಕುಮಾರ್ ಹೇಳಿದರು.
ಆರ್ಯವೈಶ್ಯ ಸಂಘ ಚಿತ್ರದುರ್ಗ, ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘದಿಂದ ವಾಸವಿ ಮಹಲ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಆರ್ಯವೈಶ್ಯ ರಾಜ್ಯ ಮಟ್ಟದ ಉಚಿತ ವಧು-ವರರ ಪರಿಚಯ ಋಣಾನುಬಂಧ ವೇದಿಕೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಪೋಷಕರಿಗೂ ಮಕ್ಕಳು ಪ್ರಾಯಕ್ಕೆ ಬಂದ ಮೇಲೆ ವಿವಾಹ ಮಾಡಿ ದಡ ಸೇರಿಸುವ ಆಸೆ ಇರುತ್ತದೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಯೋಗ ಕೂಡಿ ಬರಬೇಕು. ಹಾಗಾಗಿ ಆರ್ಯವೈಶ್ಯ ಜನಾಂಗಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಋಣಾನುಬಂಧ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಗಂಡಿನ ಸಂಖ್ಯೆ ಜಾಸ್ತಿಯಿದ್ದು, ಹೆಣ್ಣಿನ ಸಂಖ್ಯೆ ಕಡಿಮೆಯಿದೆ. ವ್ಯಾಪಾರಕ್ಕಾಗಿ ಬಂದ ಆರ್ಯವೈಶ್ಯ ಜನಾಂಗ ಹೆಚ್ಚಾಗಿ ಕಿರಾಣಿ ಅಂಗಡಿಗಳನ್ನು ನಡೆಸುವುದು ವಾಡಿಕೆ. ಬರಗಾಲದಂತ ಸಂದರ್ಭಗಳಲ್ಲಿ ಶೆಟ್ಟರ ಅಂಗಡಿಗಳಲ್ಲಿ ಕಿರಾಣಿ ಸಾಮಾಗ್ರಿಗಳನ್ನು ಸಾಲವಾಗಿ ಕೊಡಲಾಗುತ್ತಿತ್ತು ಎನ್ನುವುದನ್ನು ಸ್ಮರಿಸಿಕೊಂಡರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಈ.ಶ್ರೀನಿವಾಸ್‍ಬಾಬು ಮಾತನಾಡಿ ಆರ್ಯವೈಶ್ಯ ಜನಾಂಗದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆಯಿದ್ದು, ಗಂಡಿನ ಸಂಖ್ಯೆ ಜಾಸ್ತಿಯಿರುವುದರಿಂದ
ಕನ್ಯೆ ಸಿಗುವುದು ಕಷ್ಟಕರ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಋಣಾನುಬಂಧ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ. ಆರ್ಯವೈಶ್ಯ ಜನಾಂಗ ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಬಾಗಲಕೋಟೆ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್.ಕೋರ ಮಾತನಾಡುತ್ತ ದಾಂಪತ್ಯ ಜೀವನ ಎನ್ನುವುದು ಜನ್ಮ ಜನ್ಮಾಂತರದ ಋಣಾನುಬಂಧವೆಂದು ಹಿರಿಯರು ಹೇಳುತ್ತಾರೆ. ಯುವಕ-ಯುವತಿಯರು ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಇದೊಂದು ಅವಕಾಶ. ಋಣಾನುಬಂಧ ಅತ್ಯುತ್ತಮ ವೇದಿಕೆ ಎಂದು ಹೇಳಿದರು.
ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭೆ ಮಾಜಿ ಅಧ್ಯಕ್ಷ ಸಿ.ಎಸ್.ಶಿವಕುಮಾರ್ ಮಾತನಾಡಿ ಆರ್ಯವೈಶ್ಯ ಸಂಘ ಒಳ್ಳೆ ಹೆಜ್ಜೆಯನ್ನಿಟ್ಟಿದೆ. ಇಂತಹ ಪುಣ್ಯದ ಕೆಲಸಕ್ಕೆ ಕೆಲವರು ಕಾಳೆಯುವ ಕೆಲಸ ಮಾಡುತ್ತಾರೆ. ಅದಕ್ಕೆ ಬದಲಾಗಿ ಜನಾಂಗದೊಂದಿಗೆ ಸಹಕರಿಸಲಿ ಎಂದು ಸಲಹೆ ನೀಡಿದರು.
ಆ.ವೋ.ಪ. ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಅಧ್ಯಕ್ಷತೆ ವಹಿಸಿದ್ದರು.
ಆ.ವೋ.ಪ. ಮಾಜಿ ಅಧ್ಯಕ್ಷ ಎ.ರಾಧಾಕೃಷ್ಣಶೆಟ್ಟಿ, ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಎಸ್.ನಾಗರಾಜ್, ಆ.ವೋ.ಪ. ಕಾರ್ಯದರ್ಶಿ ಡಿ.ಆರ್.ತಿಪ್ಪೇಸ್ವಾಮಿ, ಆ.ವೋ.ಪ. ಉಪಾಧ್ಯಕ್ಷ ಡಾ.ರಾಮಲಿಂಗಶೆಟ್ಟಿ ವೇದಿಕೆಯಲ್ಲಿದ್ದರು.