ಶಾಸಕ ಮುನಿರತ್ನ ವಿರುದ್ಧ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿ : ಎಸ್.ಜಯಣ್ಣ ಮನವಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಗುತ್ತಿಗೆದಾರನನ್ನು ಮನೆಗೆ ಕರೆಸಿಕೊಂಡು ಲಂಚಕ್ಕೆ ಬೇಡಿಕೆಯಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬೆಂಗಳೂರು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ನಾಯ್ಡು ವಿರುದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಸ್.ಜಯಣ್ಣ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅವರಿಗೆ ಶುಕ್ರವಾರ ದೂರು ಸಲ್ಲಿಸಿದರು.
ಬಿ.ಬಿ.ಎಂ.ಪಿ.ಗುತ್ತಿಗೆದಾರ ಚೆಲುವರಾಜ್‍ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ ನೀನೊಬ್ಬ ಗೌಡ ಜಾತಿಗೆ ಸೇರಿದವನಾಗಿದ್ದು, ಒಲೆಯನನ್ನು ಏಕೆ ಮನೆಯೊಳಗೆ ಬಿಟ್ಟುಕೊಳ್ಳುತ್ತೀಯ ಎಂದು ಅವಮಾನಿಸಿರುವುದಲ್ಲದೆ ಗುತ್ತಿಗೆದಾರನ ಮನೆಯಲ್ಲಿರುವ ಮಹಿಳೆಯರ ಬಗ್ಗೆಯೂ ಕೆಟ್ಟದ್ದಾಗಿ ಮಾತನಾಡಿರುವ ಶಾಸಕ ಮುನಿರತ್ನ ನಾಯ್ಡು
ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಿದ್ದುಪಡಿ ಕಾಯಿದೆಯಡಿ ಪ್ರಕರಣ ದಾಖಲಿಸಿ ಶಾಸಕ ಸ್ಥಾನದಿಂದ ವಜಾಗೊಳಿಸಿ ಗಡಿಪಾರು ಮಾಡಿ ಎಸ್ಸಿ.ಎಸ್ಟಿ. ಹಾಗೂ ಒಕ್ಕಲಿಗ ಸಮುದಾಯದವರಿಗೆ ನ್ಯಾಯ ಒದಗಿಸುವಂತೆ ಎಸ್.ಜಯಣ್ಣ ಪೊಲೀಸ್ ಇನ್ಸ್‍ಪೆಕ್ಟರ್‍ಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಕೆ.ಪಿ.ಸಿ.ಸಿ. ಎಸ್ಸಿ. ವಿಭಾಗ ರಾಜ್ಯ ಸಂಚಾಲಕ ಚಿದಾನಂದಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್, ಕೋಟಿ, ಬ್ಲಾಕ್ ಅಧ್ಯಕ್ಷ ಪಾಂಡುರಂಗಪ್ಪ ಈ ಸಂದರ್ಭದಲ್ಲಿದ್ದರು.