ನೀರಾವರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರೈತ ಸಂಘ ಒತ್ತಾಯ
ಸುದ್ದಿಒನ್, ಹಿರಿಯೂರು, ಏಪ್ರಿಲ್. 02 : ತಾಲೂಕಿನ ವಾಣಿವಿಲಾಸ ಜಲಾಶಯದಿಂದ ನಿಯಮ ಮೀರಿ ಹೆಚ್ಚು ನೀರು ಹರಿಸಿರುವ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ನಿರ್ಲಕ್ಷ್ಯ ತೊರಿರುವ ಅಧಿಕಾರಿಗಳ ವಿರುದ್ಧ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 89 ವರ್ಷಗಳ ನಂತರ ವಿವಿ ಸಾಗರ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದಿತ್ತು. 18 ತಿಂಗಳಲ್ಲಿ 20 ಅಡಿ ನೀರು ಡ್ಯಾಂನಿಂದ ಖಾಲಿಯಾಗಿದೆ.
ನೀರಾವರಿ ಇಲಾಖೆಯ ಆಯುಕ್ತರು ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರಿನ ಸಲುವಾಗಿ 0.25 ಟಿಎಂಸಿ ನೀರು ಹರಿಸುವಂತೆ ಸರ್ಕಾರ ಆದೇಶಿಸಿತ್ತು. ಅದರಂತೆ 2024, ಮಾರ್ಚ್ 21ರಿಂದ ನದಿ ಪಾತ್ರಕ್ಕೆ ದಿನನಿತ್ಯ 600 ಕ್ಯೂಸೆಕ್ ನೀರು ಹರಿಯುತ್ತದೆ. 13 ದಿನಕ್ಕೆ 0.78 ಕ್ಯೂಸೆಕ್ ನೀರು ಹರಿಸಲಾಗಿದೆ. ಸರಾಸರಿ ಮುಕ್ಕಾಲು ಟಿಎಂಸಿ ನೀರು ಈಗಾಗಲೇ ಜಲಾಶಯದಿಂದ ಹರಿದು ಹೋಗಿದೆ. ಆದರೂ ಇದುವರೆಗೂ ಅಧಿಕಾರಿಗಳು ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ, ದಿನನಿತ್ಯ ನೀರು ಬಿಡುತ್ತಿದ್ದಾರೆ ಆದ್ದರಿಂದ, ತಾವುಗಳು ವೈಯಕ್ತಿಕ ಗಮನ ಹರಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೇಂದು ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಪ್ರಮಾಣ ಕಡಿಮೆ ಬೀಳುವ ಸಂಭವವಿದೆ ಎಂದು ಸೂಚಿಸುತ್ತಾರೆ. ಆದ್ದರಿಂದ ಈಗ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ನಿರಂತರವಾಗಿ ಹರಿಯುವುದರಿಂದ ಹೆಚ್ಚಾಗಿ ನೀರು ಬಳಕೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗಬಹುದು ಮುಂದಾಲೋಚನೆಯ ದೃಷ್ಟಿಯಿಂದ ಜನರಲ್ಲಿ ಅರಿವು ಮೂಡಿಸಿ, ನೀರಿನ ಬಳಕೆ ಕಡಿಮೆ ಮಾಡುವ ಸಲುವಾಗಿ ಎರಡು ದಿನಕ್ಕೆ ಒಂದು ಬಾರಿ ನೀರು ಬಿಡುವಂತೆ ಜಿಲ್ಲಾಡಳಿತ ಮುಂದಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಜೀವರಾಶಿಗಳನ್ನ ಆರಕ್ಷಿಸಬೇಕಾಗಿ ತಮ್ಮಲ್ಲಿ ಕೋರುತ್ತೇವೆಂದು ಪತ್ರದ ಮೂಲಕ ರೈತ ಸಂಘ ಒತ್ತಾಯಿಸಿದೆ.