ಅಪ್ಪರ್ ಭದ್ರ ಯೋಜನೆಗೆ 5300 ಕೋಟಿ ನೀಡುವುದಾಗಿ ಹುಸಿ ಭರವಸೆ ನೀಡಿದ್ದೆ ಬಿಜೆಪಿ ಸಾಧನೆ: ಶಾಸಕ ಗೋವಿಂದಪ್ಪ
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.22 : ಬಿಜೆಪಿಯು ಅಪ್ಪರ್ ಭದ್ರವನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ಸುಳ್ಳು ಪ್ರಚಾರ ನೀಡಿ. ರು.5300 ಕೋಟಿ ನೀಡುವುದಾಗಿ ಹುಸಿ ಭರವಸೆ ನೀಡಿದ್ದೆ ಸಾಧನೆ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿಲ್ಲಿ ಸೋಮವಾರ ಮತಯಾಚಿಸಿ ಮಾತನಾಡಿದ ಅವರು, ಅಪ್ಪರ್ ಭದಾ ಯೋಜನೆಯೂ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶದ ಮಹತ್ವಾಕಾಂಕ್ಷಿ ಯೋಜನೆಗೆ 2013 ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರು.12300 ಕೋಟಿ ಮೀಸಲಿಟ್ಟಿದ್ದ ಹಣದಲ್ಲಿ ರು.7000 ಕೋಟಿಗೂ ಹೆಚ್ಚು ಕಾಮಗಾರಿಯನ್ನು ನಡೆಸಲಾಯಿತು. ಈಗ ಎರಡನೇ ಅವಧಿಯಲ್ಲಿಯೂ ಸಹ ರು.1250 ಕೋಟಿ ಹಣ ಮೀಸಲಿಟ್ಟಿದೆ ಎಂದರು.
ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದ್ದಾಗ ಈ ಯಾವ ಭರವಸೆಗಳು ಈಡೇರಲಿಲ್ಲ. ಹಾಗಾಗಿ ಈಗಿನ ಲೋಕಸಬಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಬರಿಗೈಯಲ್ಲಿ ಬಂದು ಮತಯಾಚನೆ ಮಾಡುವ ದುಸ್ಥಿಯನ್ನ ತಂದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ. ಈ ಯೋಜನೆಯನ್ನು ಸಕಾರಗೊಳಿಸಲು ಸಾವಿರಾರು ಕೋಟಿಗಳ ಅನುದಾನವನ್ನು ಭರಿಸಿದೆ. ಅಪ್ಪರ್ಭದ್ರ ಯೋಜನೆಗೆ ಬಿಜೆಪಿ ನಯ ಪೈಸೆ ಕೊಡುಗೆ ನೀಡಿಲ್ಲ. ಕಾಂಗ್ರೆಸ್ ನೀಡಿದ ಅನುದಾನಗಳನ್ನೆ ಬಳಸಿಕೊಂಡು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸುತ್ತಾ ಜನರ ಮುಂದೆ ಪುಕ್ಕಟೆ ಪ್ರಚಾರ ಪಡೆದುಕೊಂಡಿದ್ದೆ ಅವರ ಸಾಧನೆ ಎಂದರು.
ಅಪ್ಪರ್ ಭದ್ರ ಯೋಜನೆ ಕಾರ್ಯಪ್ರಗತಿಯ ಎಲ್ಲ ಬೆಳವಣಿಗೆಗಳಲ್ಲಿ ನಮ್ಮ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರು ಸಕ್ರಿಯವಾಗಿ ತೊಡಗಿಸಿಕೊಂಡು ಯೋಜನೆ ಸಾಕಾರಗೊಳ್ಳಲು ಹಗಲಿರುಳು ಶ್ರಮಿಸಿದ್ದಾರೆ. ಜಿಲ್ಲೆಯ 5 ಜನ ಶಾಸಕರು, ಮಾಜಿ ಶಾಸಕರು, ಹಾಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಿಗದಿತ ಅವಧಿಯೊಳಗೆ ಅಪ್ಪರ್ ಭದ್ರ ಯೋಜನೆಯನ್ನು ಪೂರ್ಣಗೊಳಿಸಿ ಈ ಬಾಗದ ಕೃಷಿ, ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಿದ್ದೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಅಪ್ಪರ್ ಭದ್ರಾ ಯೋಜನೆಯ ಆಯಾ ಕಟ್ಟಿನ ಜಾಗವಾದ ಅಬ್ಬಿನಹೊಳಲು ಬಳಿಯ ವೈಜಂಕ್ಷನ್ ಕಾಮಗಾರಿಯೂ ಕಳೆದ ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿತು.
ಯೋಜನೆಗಾಗಿ ಭೂಮಿ ಕಳೆದುಕೊಳ್ಳಲಿರುವ ಆ ಭಾಗದ ರೈತರು ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಇಟ್ಟು ಹೋರಾಟ ನಡೆಸಿಕೊಂಡು ಬಂದಿದ್ದರು. ಇದರಿಂದ ಕಾಮಗಾರಿ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು. ರೈತರ ಬೇಡಿಕೆಗೆ ಬಿಜೆಪಿ ಸರ್ಕಾರ ಸೊಪ್ಪು ಹಾಕದೇ ನಿರ್ಲಕ್ಷ್ಯ ವಹಿಸಿತ್ತು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಜಲಸಂನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ವೈ ಜಂಕ್ಷನ್ ಕಾಮಗಾರಿ ಸ್ಥಳಕ್ಕೆ ಆಗಮಿಸಿ ರೈತರ ಹೆಚ್ಚಿನ ಪರಿಹಾರದ ಬೇಡಿಕೆ ಈಡೆರಿಸುವ ಮತ್ತೆ ಭರವಸೆ ಕೊಟ್ಟು ಕಾಮಗಾರಿಗೆ ಮರು ಚಾಲನೆ ನೀಡಿದರು.
ಈ ಸಮಸ್ಯೆ ನಿವಾರಣೆಯಿಂದಾಗಿ ಇಡೀ ಯೋಜನೆಯ ಪ್ರಗತಿ ವೇಗ ಪಡೆದುಕೊಳ್ಳಲಿದ್ದು, ಚಿತ್ರದುರ್ಗ, ತುಮಕೂರು, ಶಾಖಾ ಕಾಲುವೆಗಳ ಮೂಲಕ ಯೋಜಿತವಾಗಿ ಭದ್ರಾ ನೀರು ಸರಾಗವಾಗಿ ಹರಿಯಲಿದೆ ಎಂದು ಹೇಳಿದರು.
ರಾಷ್ಟ್ರದಲ್ಲಿ ಸಂವಿಧಾನ, ಜಾತ್ಯತೀತ ಸಿದ್ಧಾಂತ ಇನ್ನೂ ಬಲಿಷ್ಠವಾಗಿದೆ ಎಂದರೆ ಅದು ಕಾಂಗ್ರೆಸ್ ನೀಡಿದ ಕೊಡುಗೆಯಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದ ದೀನ ದಲಿತರು, ಅಲ್ಪಸಂಖ್ಯಾತರು, ಬಡವರಿಗೆ ಅನುಕೂಲವಾಗಿದೆ. ಇಂತಹ ಯಾವುದೇ ಜನಪರ ಯೋಜನೆ ಬಿಜೆಪಿ ಅನುಷ್ಠಾನ ಮಾಡಿರುವುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ವಿ.ಉಮಾಪತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ತಿಪ್ಪೇಸ್ವಾಮಿ ಜೆಜೆಹಟ್ಟಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶಪ್ಪ, ಪದ್ಮನಾಭ್ ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್, ಅಲ್ತಾಫ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಆರ್.ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಹೆಚ್.ಟಿ.ಬಸವರಾಜ್, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೊ.ತಿಪ್ಪೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಉಪಾಧ್ಯಕ್ಷ ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಿಕಾ ಸತೀಶ್, ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಅಜೀಮಾಭಾನು, ಸುಮಂಗಳಮ್ಮ ಮುಖಂಡರಾದ ಚಂದ್ರಶೇಖರ್, ಪಿ.ಕೆ.ಪರಪ್ಪ, ಬಿ.ಜಿ.ಅರುಣ್, ಯುವ ಕಾಂಗ್ರೇಸ್ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಯಶ್ವಂತ್ ಗೌಡ ಉಪಸ್ಥಿತರಿದ್ದರು.