For the best experience, open
https://m.suddione.com
on your mobile browser.
Advertisement

ಶಾಲೆಯಲ್ಲಿನ ಶಿಕ್ಷಣಕ್ಕಿಂತಲೂ ಜೀವನದಲ್ಲಿನ ಅನುಭವ ಶ್ರೇಷ್ಟವಾದುದು : ಕೆ.ಎಂ.ವೀರೇಶ್

06:38 PM Apr 05, 2024 IST | suddionenews
ಶಾಲೆಯಲ್ಲಿನ ಶಿಕ್ಷಣಕ್ಕಿಂತಲೂ ಜೀವನದಲ್ಲಿನ ಅನುಭವ ಶ್ರೇಷ್ಟವಾದುದು   ಕೆ ಎಂ ವೀರೇಶ್
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552

ಸುದ್ದಿಒನ್, ಚಿತ್ರದುರ್ಗ ಏ. 05 : ಶಾಲೆಯಲ್ಲಿನ ಶಿಕ್ಷಣಕ್ಕಿಂತಲೂ ಜೀವನದಲ್ಲಿನ ಅನುಭವ ಶ್ರೇಷ್ಟವಾದುದು ಎಂದು ಬಾಪೂಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಹೇಳಿದರು.

Advertisement

ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಸಮೂಹ ಸಂಸ್ಥೆಗಳು, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಲ್ಲಾಪುರದಲ್ಲಿರುವ ಬಾಪೂಜಿ ಸಮೂಹ ಸಂಸ್ಥೆಗಳ ಕ್ಯಾಂಪಸ್‍ನಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪೌರತ್ವ ತರಬೇತಿ ಶಿಬಿರ ಉದ್ಗಾಟಿಸಿ ಮಾತನಾಡಿದರು.

ವಿದ್ಯಾರ್ಥಿಯಿದ್ದಾಗ ಕಲಿಯುವ ಶಿಸ್ತು ಜೀವನವಿಡಿ ಇರಬೇಕು. ಪಾಠದ ಸಂದರ್ಭದಲ್ಲಿ ಪುಸ್ತಕ ಪೆನ್ನು ಬಹಳ ಮುಖ್ಯ. ಶಿಕ್ಷಣದ ಜೊತೆ ಸಂಸ್ಕಾರ, ಜ್ಞಾನ, ಬದುಕು ವೃದ್ದಿಯಾಗಬೇಕು. ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಅನೇಕ ಸಾಹಿತಿಗಳ ಕೊಡುಗೆ ನಾಡಿಗೆ ಅಪಾರವಾಗಿದೆ. ಪ್ರಕೃತಿ ನೀಡಿರುವ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ಬೆಳಕು, ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪೌರ ಪ್ರಜ್ಞೆ, ಪರಿಸರ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಮೂರು ದಿನಗಳ ಕಾಲ ಪೌರತ್ವ ತರಬೇತಿ ಶಿಬಿರದಲ್ಲಿ ನೀವುಗಳು ಕಲಿಯುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕೆ.ಎಂ.ವೀರೇಶ್ ಕರೆ ನೀಡಿದರು.

ನಿವೃತ್ತ ಡಿ.ವೈ.ಎಸ್ಪಿ. ಸೈಯದ್ ಇಸಾಕ್ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಆತ್ಮವಿಶ್ವಾಸವಿಲ್ಲದಿದ್ದರೆ ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಕೇವಲ ಪರೀಕ್ಷೆ ಪದವಿಗಾಗಿ ಓದುವುದಕ್ಕಿಂತಲೂ ಹೆಚ್ಚಾಗಿ ಸಾಮಾನ್ಯ ಜ್ಞಾನಕ್ಕಾಗಿ ದಿನಪತ್ರಿಕೆ, ಇನ್ನಿತರೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿ. ವಾಸ್ತವಿಕತೆ, ಗಟ್ಟಿತನ ಇರಬೇಕು. ದೊಡ್ಡ ಸಾಹಿತಿಗಳು ಪುಸ್ತಕ ಓದಿ ಬುದ್ದಿವಂತರಾದವರಲ್ಲ. ಗ್ರಹಿಕೆಯಿಂದ ಜ್ಞಾನವಂತರಾಗಿದ್ದಾರೆಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಭಾಷೆಯ ಮೇಲೆ ನಿರ್ಧಿಷ್ಠತೆ, ಪ್ರಖರತೆಯಿರಬೇಕು. ಜ್ಞಾನವೇ ನಿಜವಾದ ಭಂಡಾರ. ಇಂದಿನ ಮಕ್ಕಳು ತುಂಬಾ ಚುರುಕಾಗಿರುವುದರಿಂದ ಮೊದಲು ಶಿಕ್ಷಕರುಗಳು ಅಪ್ಡೇಟ್ ಆಗಿರಬೇಕು. ಇಲ್ಲದಿದ್ದರೆ ಮಕ್ಕಳ ಭವಿಷ್ಯ ರೂಪಿಸಲು ಆಗಲ್ಲ. ಮೂರು ದಿನಗಳ ಕಾಲ ನಡೆಯುವ ಪೌರತ್ವ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಡುವ ವಿಚಾರಗಳನ್ನು ಗಮನವಿಟ್ಟು ಕೇಳಿ. ಶಿಕ್ಷಣದ ಜೊತೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಿರಿ. ಜೀವನಕ್ಕೆ ಹಾಸ್ಯವಿರಬೇಕು. ಗ್ರಹಿಕೆಗೆ ಆಲೋಚನೆ ಮುಖ್ಯ. ಸತ್ಯ ಒಪ್ಪಿಕೊಂಡು ಮುನ್ನುಗ್ಗಿ ಎಂದು ಹೇಳಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಶಿಬಿರಾಧಿಕಾರಿ ಡಾ.ಹನುಮಂತರೆಡ್ಡಿ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ಶ್ರಮದಾನ ಎನ್ನುವುದೇ ಕಡಿಮೆಯಾಗುತ್ತಿದೆ. ಅದಕ್ಕಾಗಿ ಪ್ರಶಿಕ್ಷಣಾರ್ಥಿಗಳಿಗೆ ಮೂರು ದಿನಗಳ ಕಾಲ ಪೌರತ್ವ ಶಿಬಿರ ಹಮ್ಮಿಕೊಂಡಿದ್ದು, ಯೋಗ, ಧ್ಯಾನ, ಶ್ರಮದಾನ ಕುರಿತು ಹೇಳಿಕೊಡಲಾಗುವುದು. ಶಿಕ್ಷಣದ ಜೊತೆ ಸಮಾಜಮುಖಿಗಳಾಗಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ದಾವಣಗೆರೆ ವಿ.ವಿ.ಸಿಂಡಿಕೇಟ್ ಸದಸ್ಯೆ ಪ್ರೊ. ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಂಶುಪಾಲರಾದ ಪ್ರೊ. ಹೆಚ್.ಎನ್.ಶಿವಕುಮಾರ್ ವೇದಿಕೆಯಲ್ಲಿದ್ದರು.

Tags :
Advertisement