Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೋರ್‍ವೆಲ್ ಕೊರೆಯಲು ದುಬಾರಿ ಶುಲ್ಕ | ಏಕರೂಪ ದರ ನಿಗದಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

05:34 PM Mar 15, 2024 IST | suddionenews
Advertisement

ಚಿತ್ರದುರ್ಗ, ಮಾ.15:  ರೈತರಿಗೆ ಹೊರೆಯಾಗದಂತೆ ಹಾಗೂ ಬೋರ್‍ವೆಲ್ ಕೊರೆಯುವ ಮಾಲೀಕರಿಗೆ ಹಾಗೂ ಏಜೆನ್ಸಿಗಳಿಗೂ ನಷ್ಟವಾಗದಂತೆ ಬೋರ್‍ವೆಲ್ ಕೊರೆಯಲು ಏಕರೂಪ ದರನಿಗದಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

Advertisement

ಜಿಲ್ಲೆಯಲ್ಲಿ ಅಂತರ್ಜಲ ಕುಸಿತದಿಂದಾಗಿ ಬೋರ್‍ವೆಲ್‍ಗಳು ಬರಿದಾಗುತ್ತಿದ್ದು, ಬೋರ್‍ವೆಲ್ ಕೊರೆಯಲು ಅತ್ಯಂತ ದುಬಾರಿ ಶುಲ್ಕವನ್ನು ವಸೂಲಿ ಮಾಡಿ ರೈತರ ಶೋಷಣೆ ಮಾಡುತ್ತಿದ್ದು, ಈ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೋರ್‍ವೆಲ್ ಕೊರೆಯುವ ಏಜೆನ್ಸಿಗಳು ಹಾಗೂ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಬೋರ್‍ವೆಲ್ ಕೊರೆಯಲು ಏಕರೂಪ ದರನಿಗದಿಗೆ ತಾಲ್ಲೂಕುವಾರು ಆಯಾ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ರೈತ ಸಂಘನೆಗಳ ಮುಖಂಡರು, ಬೋರ್‍ವೆಲ್ ಏಜೆನ್ಸಿಗಳನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚನೆ ಮಾಡಿ, ಏಕರೂಪ ದರ ನಿಗದಿಪಡಿಸಬೇಕು ಎಂದು ಸೂಚನೆ ನೀಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲದ ತೀವ್ರತೆ ಹೆಚ್ಚಾಗಿದೆ. ರೈತರಿಗೆ ಹೆಚ್ಚಿನ ದರ ವಿಧಿಸದೆ ಬೋರ್‍ವೆಲ್ ಮಾಲೀಕರು ಕಾಳಜಿ ವಹಿಸಿ ಏಕರೂಪದ ದರದಲ್ಲಿ ರೈತರಿಗೆ ಬೋರ್‍ವೆಲ್ ಕೊರೆಯುವಂತೆ ತಾಕೀತು ಮಾಡಿದರು.

Advertisement

ವಿಫಲವಾದ ಬೋರ್‍ವೆಲ್‍ಗಳನ್ನು ಸಂಬಂಧಪಟ್ಟ ಬೋರ್‍ವೆಲ್ ಏಜೆನ್ಸಿಗಳು ತಕ್ಷಣವೇ ಮುಚ್ಚಲು ಕ್ರಮ ವಹಿಸಬೇಕು. ವಿಫಲವಾದ ಬೋರ್‍ವೆಲ್ ಕೇಸಿಂಗ್ ಪೈಪ್‍ಗೆ ಯಾವುದೇ ಕಾರಣಕ್ಕೂ ಚಾರ್ಜ್ ತೆಗೆದುಕೊಳ್ಳಬಾರದು. ಕಡ್ಡಾಯವಾಗಿ ಬಿಲ್ ನೀಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು.  ಜಿಲ್ಲೆಯ ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸೂಚನೆ ನೀಡಿದರು.

ರೈತ ಮುಖಂಡ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಕಳೆದ ಒಂದು ತಿಂಗಳ ಹಿಂದೆ ಬೋರ್‍ವೆಲ್ ಕೊರೆಯಲು ಒಂದು ಅಡಿಗೆ ರೂ.90 ಇತ್ತು. ಆದರೆ ಇದೀಗ ರೂ.120 ರಿಂದ 130ಕ್ಕೆ ದರ ಏರಿಕೆಯಾಗಿದೆ.  ಯಾವ ಆಧಾರದ ಮೇಲೆ ದರ ಏರಿಕೆ ಮಾಡಲಾಗಿದೆ ಎಂದು ಪ್ರಶ್ನಿಸಿದ ಅವರು, ರೈತರು ಅಸಂಘಟಿತರಾಗಿರುವುದರಿಂದ ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ.  ಬೋರ್‍ವೆಲ್ ಏಜೆನ್ಸಿಗಳಿಂದ ರೈತರಿಗೆ ಶೋಷಣೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಮಾನವೀಯತೆಯಿಂದ ಕಾಳಜಿ ವಹಿಸಿ, ರಿಯಾಯಿತಿ ದರದಲ್ಲಿ ರೈತರಿಗೆ ಶೋಷಣೆಯಾಗದಂತೆ, ಬೋರ್‍ವೆಲ್ ಕೊರೆಯಬೇಕು ಎಂದು ಮನವಿ ಮಾಡಿದರು.

ರೈತಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ದೇಶದ 140 ಕೋಟಿ ಜನಸಂಖ್ಯೆಗೆ ರೈತರು ಕೃಷಿ ಮಾಡಿ ಆಹಾರ ಭದ್ರತೆ ಕಾಪಾಡಿಕೊಂಡು ಬಂದಿದ್ದಾರೆ. ಬೋರ್‍ವೆಲ್ ವಿಚಾರದಲ್ಲಿ ರೈತರಿಗೆ ಸಾಕಷ್ಟು ಶೋಷಣೆಯಾಗುತ್ತಿದ್ದು, ಇದಕ್ಕೆ ಸರಿಯಾದ ಮಾನದಂಡ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಬೋರ್‍ವೆಲ್ ಕೊರೆಯುವ ವಾಹನಗಳ ಮಾಲೀಕರು, ಏಜೆನ್ಸಿಗಳ ಪ್ರತಿನಿಧಿಗಳು ಮಾತನಾಡಿ, ಬೋರ್‍ವೆಲ್ ಕೊರೆಯಲು ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ.  ಛತ್ತಿಸ್‍ಘಡದಿಂದ ಕಾರ್ಮಿಕರನ್ನು ಕರೆದುಕೊಂಡು ಬರಲಾಗುತ್ತಿದೆ. ಉಪಕರಣಗಳ ವೆಚ್ಚವೂ ಹೆಚ್ಚಾಗಿದೆ. ನಾವು ಕೂಡ ರೈತರ ಪರವಾಗಿದ್ದೇವೆ. ಕಾರ್ಮಿಕರ ಕೊರತೆಯಿಂದ ಶೇ.25ರಷ್ಟು ಬೋರ್‍ವೆಲ್ ಕೊರೆಯುವ ವಾಹನಗಳು ಸ್ಥಗಿತಗೊಂಡಿವೆ ಎಂದು ಹೇಳಿದರು.

ವಾರದೊಳಗೆ ಬೆಳೆ ವಿಮೆ ಪಾವತಿ: ಈಗಾಗಲೇ ಬೆಳೆವಿಮೆ ಕಂಪನಿಯೊಂದಿಗೆ ಚರ್ಚೆ ನಡೆಸಲಾಗಿದ್ದು, ವಾರದೊಳಗೆ ಜಿಲ್ಲೆಯ ರೈತರಿಗೆ ಬೆಳೆವಿಮೆ ಪಾವತಿಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರೈತರಿಗೆ ಭರವಸೆ ನೀಡಿದರು.

ತಾಂತ್ರಿಕ ಕಾರಣಗಳಿಂದಾಗಿ ಬೆಳೆವಿಮೆ ಪಾವತಿ ವಿಳಂಬವಾಗಿದ್ದು, ವಾರದೊಳಗೆ ಬೆಳೆವಿಮೆ ಪಾವತಿ ಮಾಡುವಂತೆ ಬೆಳೆ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಬೆಳೆವಿಮೆ ಪಾವತಿಯಾಗದಿದ್ದರೆ ಎಫ್‍ಐಆರ್ ದಾಖಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಹೇಳಿದರು.

ರೈತಮುಖಂಡ ಭೂತಯ್ಯ ಮಾತನಾಡಿ, ಬರಗಾಲ ಹಾಗೂ ಬೆಳೆ ಇಲ್ಲದೇ ರೈತರು ಕಂಗಲಾಗಿದ್ದಾರೆ.  ಬೆಳೆವಿಮೆ ಪಾವತಿಗೂ ನಿರ್ಧಿಷ್ಟ ದಿನಾಂಕ ನಿಗಧಿಪಡಿಸಬೇಕು ಎಂದು ಮನವಿ ಮಾಡಿದ ಅವರು, ಕೃಷಿ ಮತ್ತು ಕಂದಾಯ ಇಲಾಖೆಯ ಬೆಳೆ ಸಮೀಕ್ಷೆಯ ವರದಿಯನ್ನೇ ಆಧಾರಿಸಿ ಪರಿಹಾರ ನೀಡಬೇಕು.  ಫಸಲ್‍ಭಿಮಾ ಯೋಜನೆಯ ಲೋಪದೋಷ ಸರಿಪಡಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ ಸೇರಿದಂತೆ ಜಿಲ್ಲೆಯ ರೈತ ಮುಖಂಡರು, ಬೋರ್‍ವೆಲ್ ಕೊರೆಯುವ ವಾಹನಗಳ ಮಾಲೀಕರು ಇದ್ದರು.

Advertisement
Tags :
bengalurubore wellchitradurgaDistrict Collector T. Venkateshdrilling borewellExpensive feesnotice for uniform rate fixingsuddionesuddione newsಏಕರೂಪ ದರಚಿತ್ರದುರ್ಗಜಿಲ್ಲಾಧಿಕಾರಿ ಟಿ.ವೆಂಕಟೇಶ್ದುಬಾರಿ ಶುಲ್ಕಬೆಂಗಳೂರುಬೋರ್‍ವೆಲ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article