ಬೆಳೆ ಕಟಾವು ಯಂತ್ರಗಳ ದುಬಾರಿ ಶುಲ್ಕ : ಏಕರೂಪದ ದರ ನಿಗಧಿಪಡಿಸಿ : ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ನ. 12 : ಜಿಲ್ಲೆಯಲ್ಲಿ ಕೃಷಿ ಬೆಳೆಗಳ ಕಟಾವು ಯಂತ್ರಗಳ ಮಾಲೀಕರುಗಳು ಬೆಳೆಕಟಾವು ಮತ್ತು ಒಕ್ಕಲು ಮಾಡಲು ದುಬಾರಿ ಶುಲ್ಕ ಪಡೆಯುತ್ತಿರುವುದನ್ನು ನಿಯಂತ್ರಿಸಿ ಏಕರೂಪದ ದರ ನಿಗಧಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ರಿ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ಜಿಲ್ಲೆಯ ರೈತರುಗಳಿಂದ ಹಿಂದಿನ ವರ್ಷ ಗಂಭೀರವಾದ ಬರಕ್ಕೆ ತುತ್ತಾಗಿದ್ದರು. ಈ ವರ್ಷ ಅತೀವೃಷ್ಟಿಯಿಂದಾಗಿಯೂ ಬರವನ್ನು ಎದುರಿಸುತ್ತಿರುವಂತಾಗಿದೆ. ಕಳೆದ ವರ್ಷ ಮತ್ತು ಈ ವರ್ಷ ರೈತರು ಅಳಿದುಳಿದ ಅಲ್ಪಸ್ವಲ್ಪ ಬೆಳೆಗಳನ್ನು ಒಕ್ಕಲು ಮಾಡಿಕೊಳ್ಳುವ ಮತ್ತು ಕೃಷಿ ಕಾರ್ಮಿಕರ ಲಭ್ಯತೆಯ ಅನಿವಾರ್ಯತೆಯನ್ನು ಯಂತ್ರಗಳ ಮಾಲೀಕರು ದುರುಪಯೋಗ ಮಾಡಿಕೊಲ್ಳುವ ತವಕದಲ್ಲಿದ್ದಾರೆ. ರೈತರೂ ಸಹ ಈ ಎರಡು ವರ್ಷಗಳು ದನಗಳಿಗೆ ಮೇವು ಮತ್ತು ಕಾಳುಗಳನ್ನು ಸಂಗ್ರಹಿಸುವ ಕಾತುರದಲ್ಲಿದ್ದಾರೆ. ಕಳೆದ ವರ್ಷ ಕೆಲವರು ರಾಗಿ ಕಟಾವಿಗೆ 1 ಎಕರೆಗೆ ರೂ.5000/- ದಿಂದ ಮತ್ತು ಮತ್ತೆ ಕೆಲವರು 1 ಗಂಟೆಗೆ ರೂ.3200/-, ರೂ.3300/- ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಾದ್ಯಂತ ಕಟಾವು, ಒಕ್ಕಲು, ಪೆಂಡಿಕಟ್ಟುವ ಯಂತ್ರಗಳು ಈಗಾಗಲೇ ಬಳ್ಳಾರಿ, ಹೊಸಪೇಟೆ, ಮಂಡ್ಯ ಜಿಲ್ಲೆಗಳಲ್ಲದೇ, ತಮಿಳುನಾಡಿನಿಂದಲೂ ಈ ಯಂತ್ರೋಪಕರಣಗಳು ಬಂದಿವೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ದರನಿಗಧಿ ಪಡಿಸಿರುತ್ತಾರೆ. ಆ ಕಾರಣ ಯಂತ್ರೋಪಕರಣಗಳ ಖರ್ಚು ವೆಚ್ಚಗಳು ಮತ್ತು ಮೌಲ್ಯಾಧಾರಿತ ಲಾಭಾಂಶದೊಂದಿಗೆ ಏಕರೂಪದ ಬೆಲೆನಿಗಧಿ ಮಾಡಲು ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕೆಂದು ಶೀಘ್ರದಲ್ಲಿ ತಾವುಗಳು ಮತ್ತು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್‍ರವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಸಿದ್ಧವೀರಪ್ಪ, ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನಪ್ಪ, ಸದಾಶಿವಪ್ಪ, ಹಿರಿಯೂರು ತಾಲೂಕು ಅಧ್ಯಕ್ಷರಾದ ತಿಪ್ಪೇಸ್ವಾಮಿ, ಹೊಳಲ್ಕೆರೆ ತಾಲ್ಲೂಕು ರಂಗಸ್ವಾಮಿ, ಮೊಳಕಾಲ್ಮೂರ ತಾಲೂಕು ಅಧ್ಯಕ್ಷರು ರವಿ, ಹೊಸದುರ್ಗ ತಾಲೋಕ್ ಶಶಿಧರ್, ಚಿತ್ರದುರ್ಗ ತಾಲೋಕ ಮಂಜುನಾಥ ಹಾಗೂ ಜೆ ನಿರಂಜನ್ ಮೂರ್ತಿ.ಕೃಷ್ಣಪ್ಪ ಭಾಗವಹಿಸಿದ್ದರು.