Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದುರ್ಗದ ಪ್ರತಿ‌ ಮನೆಯಲ್ಲೂ ಇಡಲೇಬೇಕಾದ ಡಾ. ಸಂತೋಷ್ ಅವರ ಅಪರೂಪದ ಪುಸ್ತಕ ಇದು : ಶೀಘ್ರದಲ್ಲೇ ಬಿಡುಗಡೆ...!

06:20 AM Jul 14, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 14 : ಹೌದು, ಭಾರತದಲ್ಲಿಯೇ ಐತಿಹಾಸಿಕ ಕಾರಣಕ್ಕೆ ಖ್ಯಾತಿ ಗಳಿಸಿರುವ ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಮಹತ್ವದ ಕೃತಿ ಇದು.

ಅತ್ಯಂತ ಮೌಲ್ಯಯುತ ಪುಸ್ತಕ, ಇಡೀ ತಾಲೂಕೊಂದರ ಸಂಪೂರ್ಣ ಚಿತ್ರಣವನ್ನು ಕುಳಿತಲ್ಲಿಯೇ ಅರಿತುಕೊಳ್ಳುವಷ್ಟು ಮಾಹಿತಿ ಕಣಜವಾಗಿರುವ, ದುರ್ಗದ ಪ್ರತಿ ಮನೆಯಲ್ಲಿ ಇರಲೇಬೇಕಾದ ಪುಸ್ತಕವೊಂದು ಶೀಘ್ರದಲ್ಲಿಯೇ ಬಿಡುಗೊಡೆಗೊಳ್ಳಲಿದೆ ಎಂಬುದು ಕೋಟೆನಾಡು ಜನರ ಮಟ್ಟಿಗೆ ತೀವ್ರ ಕಾತುರದ ವಿಷಯ.

Advertisement

ಅದು ದಂತ ವೈದ್ಯರೊಬ್ಬರು ಪುಸ್ತಕ ಬರೆದಿರುವುದು ಇನ್ನೂ ಅಚ್ಚರಿ..

ಏಳುಸುತ್ತಿನ ಕೋಟೆ, ಶಾಂತವಾಹನರು, ಮದಕರಿನಾಯಕರು, ವೀರ ವನಿತೆ ಒನಕೆ ಓಬವ್ವ, ವಿವಿಧ ಸಂಸ್ಥಾನಗಳ ರಾಜರ ಆಳ್ವಿಕೆ, ಚಕ್ರವರ್ತಿ ಅಶೋಕ, ಮಯೂರವರ್ಮನ ಶಾಸನ, ಚಂದ್ರವಳ್ಳಿ ಕೆರೆ, ಹತ್ತಾರು ಪುಷ್ಕರಣಿಗಳು, ಜೋಗಿಮಟ್ಟಿ, ಗಾಳಿಗೋಪುರ, ರಾಷ್ಟ್ರ ನಾಯಕ ಎಸ್.ನಿಜಲಿಂಗಪ್ಪ ಹೀಗೆ ಅನೇಕ ಕಾರಣಕ್ಕೆ ದೇಶದ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೋಟೆಕೊತ್ತಲುಗಳ ಊರು ಚಿತ್ರದುರ್ಗ ಆಗಿದೆ.

ದೇಶದಲ್ಲಿಯೇ ವಿಶೇಷ ವಿನ್ಯಾಸ, ರೋಮಾಂಚನೆಗೊಳಿಸುವ ರೀತಿ ರೂಪುಗೊಂಡಿರುವ ಏಳುಸುತ್ತಿನ ಕೋಟೆ  ವ್ಯಾಪ್ತಿಯಲ್ಲಿನ ಪ್ರತಿ ಊರು, ಕಲ್ಲುಗಳು, ಸ್ಥಳಗಳು ನೂರಾರು ಇತಿಹಾಸದ ಕತೆಗಳನ್ನೇ ಹೇಳುತ್ತವೆ‌.

ಆದರೆ, ಊರು, ಕಲ್ಲು, ಧಾರ್ಮಿಕ ಕಟ್ಟಡ ಹೀಗೆ ಅನೇಕ ಸ್ಥಿರವಸ್ತುಗಳು ಐತಿಹಾಸಿಕವಾಗಿ ಜೀವಂತಿಕೆ ಹೊಂದಿದ್ದು, ಅದರ ಹಿನ್ನೆಲೆ ಅರಿತು ಅಕ್ಷರ ರೂಪಕ್ಕೆ ಇಳಿಸಲು ಅವುಗಳೊಂದಿಗೆ ಮಾತನಾಡುವ ವಿಶೇಷ ಶಕ್ತಿ ಇರಲೇಬೇಕು. ಅಂತಹ ಕೆಲಸ, ಶಕ್ತಿ ಸಂಶೋಧಕರಲ್ಲಿ ಮಾತ್ರ ಕಾಣಲು ಸಾಧ್ಯ.

ಅಂತಹದ್ದೊಂದು ಸಿದ್ಧ ಮಾದರಿಯನ್ನು ಒಡೆದು ಸಂಶೋಧನಾ ವಿದ್ಯಾರ್ಥಿಗಳೇ ನಿಬ್ಬೆರಗಾಗುವ ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚಿತ್ರದುರ್ಗ ತಾಲೂಕಿನ ಪ್ರತಿ ಹಳ್ಳಿಗಳನ್ನು ಹಗಲು-ರಾತ್ರಿ ಸುತ್ತಾಡಿ ತಾಲೂಕಿನ ಇಡೀ ಚಿತ್ರಣಕ್ಕೆ ಅಕ್ಷರಗಳ ರೂಪ ಕೊಟ್ಟು ಕಣ್ಣೇದುರಿಗೆ ಚಿತ್ರದುರ್ಗ ತಾಲೂಕು ಹಾದು ಹೋದಂತೆ ಭಾಸವಾಗುವ ರೀತಿ ಕೃತಿಯೊಂದನ್ನು ದಂತ ವೈದ್ಯ ಡಾ.ಸಂತೋಷ್ ಕೆ.ವಿ. ಹೊರತಂದಿರುವುದು ಓದುಗರನ್ನೇ ಅಚ್ಚರಿ ಮೂಡಿಸುತ್ತದೆ.

ಕೃತಿ ಹೆಸರು ಚಿತ್ರದುರ್ಗ ತಾಲೂಕು ದರ್ಶನ.

ಹೆಸರೇ ಸೂಚಿಸುವಂತೆ ಒಮ್ಮೆ ಈ ಕೃತಿಯನ್ನು ಕೈಗೆತ್ತುಕೊಂಡರೇ ಇಡೀ ಚಿತ್ರದುರ್ಗ ತಾಲೂಕನ್ನು ಒಂದು ಸುತ್ತು ಹಾಕಿದಂತೆ ಆಗುತ್ತದೆ. ಪ್ರತಿ ಊರು, ಅದರ ಹಿನ್ನೆಲೆ, ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕೇಂದ್ರಗಳು, ಪ್ರಮುಖ ವ್ಯಕ್ತಿಗಳು ಕಣ್ಣಮುಂದೆ ಬಂದು ನಮ್ಮೊಂದಿಗೆ ಮಾತನಾಡುತ್ತವೇ, ಜೊತೆಗೆ ಪರಿಚಯಿಸಿಕೊಳ್ಳುತ್ತವೆ.

ಈ ಕೃತಿ ಚಿತ್ರದುರ್ಗ ಜಿಲ್ಲೆಯ ಪ್ರತಿ ಮನೆಯಲ್ಲಿ ಇರಲೇಬೇಕಾದಷ್ಟು ಮಹತ್ವವನ್ನು ಹೊಂದಿದೆ. ಈ ಕೃತಿ ಎಷ್ಟೊಂದು ಮಹತ್ವ ಹೊಂದಿದೆ ಎಂಬುದಕ್ಕೆ ನಾಡಿನ ಖ್ಯಾತ ಸಂಶೋಧಕ ಡಾ. ಲಕ್ಷಣ್ ತೆಲಗಾವಿ‌ ತಮ್ಮ ಆಶಯ ನುಡಿಗಳಲ್ಲಿ ಬೆನ್ನು ತಟ್ಟಿರುವುದೇ ಸಾಕ್ಷಿ. ಹಿರಿಯ ಸಂಶೋಧಕರ ಪ್ರತಿ ಮಾತುಗಳು ಕೃತಿಯ ಮಹತ್ವ ಮತ್ತು ಕೃತಿಕಾರನ ಶ್ರಮವನ್ನು ಹೇಳುತ್ತವೆ.

ಜೊತೆಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ ಅವರು ಬೆನ್ನುಡಿ ಬರೆದು ವೈದ್ಯರ ದುಸ್ಸಾಹಸದ ಕುರಿತು ಅಚ್ಚರಿ ವ್ಯಕ್ತಪಡಿಸಿರುವುದು ಕೃತಿಯ ಮಹತ್ವ ಹಾಗೂ ಡಾ.ಸಂತೋಷ್ ಅವರ ಬದ್ಧತೆ, ಕಾಳಜಿಗೆ ಅಧಿಕೃತ ಮುದ್ರೆಯನ್ನೊತ್ತಿದೆ. ಹೀಗೆ ಅನೇಕ ಅನುಭವಿಗಳ ಮಾತುಗಳು, ಮೆಚ್ಚುಗೆಯ ಬರಹಗಳು ಕೃತಿಯನ್ನು ಓದಲೇಬೇಕೆಂಬ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ.

ಹೌದು, ಡಾ.ಸಂತೋಷ್ ಕೆ.ವಿ. ಅವರು ಮೂಲತಃ ದಂತ ವೈದ್ಯರು. ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಹೊಂದಿರುವ ಅವರು, ಜಿಲ್ಲೆಯ ಜನರಿಗೆ ಚಿರಪರಿಚಿತವಾಗಿರುವ ವ್ಯಕ್ತಿ.‌ ಅದೇ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇವರು ವೃತ್ತಿ ಮಾಡುತ್ತಿರುವ ಕ್ಷೇತ್ರಕ್ಕೂ ಮತ್ತು  ಸಂಶೋಧನಾ ಕ್ಷೇತ್ರಕ್ಕೂ ಸಂಬಂಧವೇ ಇಲ್ಲ.

ಆದರೆ, ಹುಟ್ಟಿದ ಊರು ಮೇಲಿನ ಅಭಿಮಾನ, ನಿರಂತರ ಓದು, ತಿರುಗಾಟದ ಹವ್ಯಾಸ, ಛಲ-ಗುರಿ ಇದ್ದರೇ ಸಂಬಂಧವೇ ಇಲ್ಲದ ಕ್ಷೇತ್ರಕ್ಕೆ ಪ್ರವೇಶಿಸಿ, ಅಂದುಕೊಂಡಿದ್ದನ್ನು ಸಾಧಿಸಬಹುದು. ಜನ್ಮಕೊಟ್ಟ ಊರಿನ ಋಣ ತೀರಿಸುವ ಪ್ರಯತ್ನ ನಡೆಸಬಹುದು ಎಂಬುದಕ್ಕೆ ಡಾ.ಸಂತೋಷ್ ಅವರ ಚಿತ್ರದುರ್ಗ ತಾಲೂಕು ದರ್ಶನ ಕೃತಿಯೇ ನಮ್ಮ ಕಣ್ಣಮುಂದಿರುವುದು ಸಾಕ್ಷಿ.

ಕೃತಿಯ ಆರಂಭದಿಂದ ಅಂತ್ಯದವರೆಗೂ ಎಲ್ಲಿಯೂ ಬೇಸರ ಮೂಡಿಸದೆ ತಣ್ಣನೆಯ ರೀತಿಯಲ್ಲಿ ಓದಿಸಿಕೊಂಡು ಹೋಗುವ ಶಕ್ತಿ ಹೊಂದಿರುವುದು ಪುಸ್ತಕದ ವಿಶೇಷ.

ಜೊತೆಗೆ ನಮಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ನಮಗೆ ಹೇಳುತ್ತಾ ಹೋಗುತ್ತದೆ. ಅಲ್ಲಲ್ಲಿ ಚಿತ್ರಗಳ ಸಮೇತ ನಮಗೆ ಆ ಊರಿನ ಹಿನ್ನೆಲೆ, ಮಹತ್ವ, ಅಲ್ಲಿನ ದೇವಸ್ಥಾನಗಳು, ಅಲ್ಲಿ ದೊರೆತ ಪುರಾತನ ಶಾಸನಗಳು, ಅಲ್ಲಿ ವಾಸಿಸುವ ಪ್ರಾಣಿ, ಪಕ್ಷಿಗಳು,  ಪ್ರಮುಖ ಸ್ಥಳಗಳು, ಅಲ್ಲಿನ ಜನರ ಉಡುಗೆ ತೊಡುಗೆ, ಆಹಾರ ಪದ್ದತಿ, ಅಲ್ಲಿನ ಜನಸಂಖ್ಯೆ ಹೀಗೆ ಆ ಊರಿಗೆ ಸಂಬಂಧಿಸಿದ ಇಂಚಿಂಚು ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ. ಓದುತ್ತಾ ಹೋದರೆ  ಓದುಗರನ್ನು ನಿಜಕ್ಕೂ ವಿಸ್ಮಯಗೊಳಿಸುತ್ತದೆ.

ನಾವು ಕಂಡ ಊರು, ಐತಿಹಾಸಿಕ ಸ್ಥಳಗಳು ಇಷ್ಟೊಂದು ವಿಶೇಷತೆ ಹೊಂದಿವೆ ಎಂಬುದನ್ನು ಚಿತ್ರದುರ್ಗ ತಾಲೂಕು ದರ್ಶನ ನಮಗೆ ಹೇಳುವ, ಅರ್ಥೈಸುವ ರೀತಿ ಬಹಳ ವಿಶೇಷತೆ ಅನಿಸುತ್ತದೆ.

ಅದರಲ್ಲೂ ಸಂಶೋಧನಾ, ಇತಿಹಾಸ ವಿಷಯದ ಆಸಕ್ತ ವಿದ್ಯಾರ್ಥಿಗಳ ಪಾಲಿಗೆ ಈ ಕೃತಿ ಮಾಹಿತಿ ಕಣಜ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು.

ಚಿತ್ರದುರ್ಗ ತಾಲೂಕನ್ನು ಹತ್ತಾರು ಬಾರಿ ಸುತ್ತುವರಿದರೂ ಆ ಊರು, ಅಲ್ಲಿನ ಮಹತ್ವ ಅರಿತುಕೊಳ್ಳುವುದು ಕಷ್ಟ. ಆದರೆ, ಈ ಕೃತಿ ಕೈಗೆತ್ತುಕೊಂಡು ಓದಿದರೇ ಸಂಪೂರ್ಣ ಚಿತ್ರಣ ಕಣ್ಣಮುಂದೆ ಹಾದುಹೋಗುತ್ತವೆ.

ಈ ಕೃತಿ ಓದಿದ ಅಧಿಕಾರಿ, ರಾಜಕಾರಣಿ, ಪತ್ರಕರ್ತರಿಗೆ ತಾಲೂಕಿನ ಪ್ರತಿ ಊರು ಆತ್ಮೀಯವಾಗುತ್ತವೆ. ಊರು, ಐತಿಹಾಸಿಕ ಸ್ಥಳಗಳ ಪರಿಚಯ ಆಗುತ್ತದೆ. ಅಧಿಕಾರಿ, ಜನಪ್ರತಿನಿಧಿಗಳಿಗೆ ತಾಲೂಕಿನಲ್ಲಿ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಯೋಜನೆಗಳ ಕುರಿತು ಚಿಂತನೆಗೆ ಈ ಕೃತಿ ಸಹಕಾರಿಯಾಗಲಿದೆ. ಇನ್ನೂ ಪತ್ರಕರ್ತರಿಗೆ ಊರು, ಐತಿಹಾಸಿಕ ಸ್ಥಳಗಳಲ್ಲಿನ ಮಹತ್ವದ ಜೊತೆಗೆ, ಅಲ್ಲಿನ ಸಮಸ್ಯೆ ಪ್ರಕಟಿಸಿ ಸರ್ಕಾರ, ಅಧಿಕಾರಿಗಳ ಗಮನಸೆಳೆಯಲು ಈ ಕೃತಿ ಹೆಚ್ಚು ಸಹಕಾರ ನೀಡಲಿದೆ. ಅಪರಿಚಿತರು ಕೂಡ ಯಾವುದೇ ಊರು, ಸ್ಥಳದ ಕುರಿತು ಅಧಿಕೃತವಾಗಿ ಮಾತನಾಡುವ ಶಕ್ತಿಯನ್ನು ಈ ಪುಸ್ತಕ ಒದಗಿಸುತ್ತದೆ.

ಒಟ್ಟಿನಲ್ಲಿ ಅತ್ಯಂತ ಹೆಚ್ಚು ಮೌಲ್ಯಯುತ ಕೃತಿ ಚಿತ್ರದುರ್ಗ ತಾಲೂಕು ದರ್ಶನ ದುರ್ಗದ ಪ್ರತಿ ಮನೆಯಲ್ಲಿ ಇರಬೇಕಷ್ಟೇ ಅಲ್ಲ; ಪ್ರತಿ ಊರು, ಅಲ್ಲಿನ ಮಹತ್ವದ ಕುರಿತು  ಅರಿತುಕೊಳ್ಳಬೇಕು ಎಂಬ ಆಸಕ್ತರಿಗೆ ಈ ಕೃತಿ ಮಾಹಿತಿ ಕಣಜವಾಗಿದೆ.

ದೇಶ ಸುತ್ತಬೇಕು, ಇಲ್ಲ ಕೋಶ ಓದಬೇಕು ಎಂಬ ನಾಣ್ಣುಡಿಯಂತೇ ಈ ಕೃತಿಯನ್ನು ಪ್ರತಿ ವ್ಯಕ್ತಿ ಒಮ್ಮೆ ಓದಲೇಬೇಕಿದೆ.

ಶೀಘ್ರದಲ್ಲಿ ಬಿಡುಗಡೆಗೊಳ್ಳುವ ಮೂಲಕ ನಿಮ್ಮ‌ ಕೈ ಸೇರಲಿರುವ ಈ ಕೃತಿಯನ್ನು ಒಮ್ಮೆ ನೀವು ಕೈಗೆತ್ತುಗೊಂಡರೇ ಆ ಪುಸ್ತಕದ ಪ್ರತಿ ಪುಟಗಳು ಎಡೆಬಿಡದೆ ಓದಿಸಿಕೊಂಡು ಹೋಗುವುದಂತೂ ಸತ್ಯ. ಈ ಕೃತಿಯ ಪ್ರತಿ ಪದ, ಪುಟ ಫೋಟೋಗಳು ನಮಗೆ ಕೊಡುವ ಸಂತಸ, ಸಂಭ್ರಮ, ಮಾಹಿತಿ, ಜ್ಞಾನ ನಿಜಕ್ಕೂ ಕೃತಿಕಾರ ಡಾ.ಸಂತೋಷ್ ಕೆ.ವಿ. (ಮೊ.ನಂ: 9342466936) ಅವರ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ ಅವರು ಕೃತಿ ರಚನೆಗೆ ಅರ್ಪಿಸಿಕೊಂಡ ರೀತಿ ಕಣ್ಣಿಗೆ ರಾಚುತ್ತದೆ.

ಹುಲ್ಲೂರು ಶ್ರೀನಿವಾಸ ಜೋಯಿಸರು, ಪ್ರೊ.ಲಕ್ಷಣ್ ತೆಲಗಾವಿ, ಪ್ರೊ.ಶ್ರೀಶೈಲಾರಾಧ್ಯ, ಡಾ.ಬಿ.ರಾಜಶೇಖರಪ್ಪ, ಡಾ.ತಿಪ್ಪೇಸ್ವಾಮಿ, ಡಾ.ಗುಡುದೇಶಪ್ಪ ಸೇರಿದಂತೆ ಅನೇಕ ಸಂಶೋಧಕರು, ಇತಿಹಾಸ ಉಪನ್ಯಾಸಕರು ಹಾಗೂ ಖ್ಯಾತ ಸಾಹಿತಿ ತರಾಸು, ಬಿ.ಎಲ್.ವೇಣು, ಡಾ.ಗಿರಿಜಾ, ಸಾಹಿತ್ಯ ಪರಿಚಾರಕ ಕೆ.ವೆಂಕಣ್ಣಾಚಾರ್ ಅವರಂತಹ ನೂರಾರು ಬರಹಗಾರರು, ಸಾಹಿತಿಗಳು, ನಾಗರಹಾವು ಚಲನಚಿತ್ರದ ಮೂಲಕ ಕಣಗಲ್ ಪುಟ್ಟಣ್ಣಯ್ಯ, ಕಲ್ಲರಳಿ ಹೂವಾಗಿ ಮೂಲಕ ನಾಗಭರಣ್ ಸೇರಿದಂತೆ ನೂರಾರು ದಿಗ್ಗಜರು ನೇರ ಹಾಗೂ ಪರೋಕ್ಷವಾಗಿ ಚಿತ್ರದುರ್ಗದ ಇತಿಹಾಸವನ್ನು ತಮ್ಮದೇ ಕ್ಷೇತ್ರದ ಮೂಲಕ ಹೊರಜಗತ್ತಿಗೆ ಪರಿಚಯಿಸಿದ್ದಾರೆ.

ಈಗ ಇಂತಹ ಸಾಲಿನತ್ತ ಡಾ.ಸಂತೋಷ್ ಕೆ.ವಿ. ಅವರು 415 ಪುಟಗಳ ಕೃತಿ ರಚನೆ ಮೂಲಕ ಹೆಜ್ಜೆ ಹಾಕಿರುವುದು ದುರ್ಗದ ಜನರ ಪಾಲಿಗೆ ಹೆಮ್ಮೆ ವಿಷಯ ಆಗಿದೆ.

ಇಂತಹ ಕೃತಿಗಳು ಹೆಚ್ಚು ಹೆಚ್ಚು ಹೊರತರಲು ಪ್ರತಿಯೊಬ್ಬ ಬರಹಗಾರರು ಮುಂದಾಗಬೇಕು. ಅಂತಹ ಕೆಲಸ ಕೈಗೊಳ್ಳುವ ಲೇಖಕರಿಗೆ ಓದುಗರ ಪ್ರೋತ್ಸಾಹದ ಮಾತುಗಳು ಬಹಳ ಅಗತ್ಯ ಎಂಬುದು ಸುದ್ದಿಒನ್ (suddione.com website) ಆಶಯ.

ಪಿ.ಎಲ್.ನಾಗೇಂದ್ರ ರೆಡ್ಡಿ
ಸಂಪಾದಕರು,
ಸುದ್ದಿಒನ್, ಚಿತ್ರದುರ್ಗ
ಮೊ.ನಂ: 9036974702

Advertisement
Tags :
bengaluruchitradurgadr santhosheveryoneRare Bookreleased soonsuddionesuddione newsಅಪರೂಪಚಿತ್ರದುರ್ಗಡಾ.ಸಂತೋಷ್ಪುಸ್ತಕಬಿಡುಗಡೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article