ಕೈಗಾರಿಕಾ ಯುಗ ಆರಂಭವಾದಾಗಿನಿಂದಲೂ ಪರಿಸರ ನಾಶವಾಗುತ್ತಿದೆ : ಜೆ.ಯಾದವರೆಡ್ಡಿ ವಿಷಾದ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂ.05 : ವಿಜ್ಞಾನ-ತಂತ್ರಜ್ಞಾನ, ಕೈಗಾರಿಕಾ ಯುಗ ಆರಂಭವಾದಾಗಿನಿಂದಲೂ ಪರಿಸರ ನಾಶವಾಗುತ್ತಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ವಿಷಾದಿಸಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಗಾಟಿಸಿ ಮಾತನಾಡಿದರು.
ಹಿಂದಿನ ಕಾಲದ ಜನ ಗಿಡ-ಮರ, ಬಳ್ಳಿ, ಪಶು, ಪಕ್ಷಿ ಪ್ರಾಣಿಗಳೊಂದಿಗೆ ಸಂಬಂಧವಿಟ್ಟುಕೊಂಡಿದ್ದರಿಂದ ಆರೋಗ್ಯವಂತರಾಗಿರುತ್ತಿದ್ದರು.
ಎಲ್ಲಿ ಅರಣ್ಯ, ಗಿಡ-ಮರ, ಫಲವತ್ತತೆಯಾದ ಮಣ್ಣು ಇರುತ್ತದೋ ಅಲ್ಲಿ ಉತ್ತಮ ಆರೋಗ್ಯವಿರುತ್ತದೆ. ಎಲ್ಲಿ ಗಿಡ ಮರಗಳು, ಪರಿಸರವನ್ನು ನಾಶ ಮಾಡಲಾಗುತ್ತದೋ ಅಲ್ಲಿ ಬರಗಾಲ ಎದುರಿಸಬೇಕಾಗುತ್ತದೆ. ಕೈಗಾರಿಕೆಗಳಿಂದ ಹೊರ ಸೂಸುವ ತ್ಯಾಜ್ಯಗಳಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಜಪಾನ್, ಚೀನಾದಲ್ಲಿ ಇಂದಿಗೂ ಸೈಕಲ್‍ಗಳನ್ನು ಬಳಸಲಾಗುತ್ತಿದೆ. ಅದೇ ನಮ್ಮ ದೇಶದಲ್ಲಿ ಪ್ರತಿಯೊಬ್ಬರು ವಾಹನಗಳನ್ನು ಬಳಸುತ್ತಿರುವುದರಿಂದ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದರು ಹೇಳಿದರು.
ನಿಸರ್ಗವೇ ನಮ್ಮ ಮಾಲೀಕ, ಗಾಳಿ, ಶಬ್ದ, ಜಲ ಮಾಲಿನ್ಯವಾಗಿದೆ. ಗಿಡ ನೆಡುವುದು ಪ್ರತಿಯೊಬ್ಬರ ಜವಾಬ್ದಾರಿ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ಕೊಡಬೇಕು. ಹಸಿರೆ ಉಸಿರು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಿ ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ನ್ಯಾಯವಾದಿ ಕೆ.ಎಸ್.ವಿಜಯ ಮಾತನಾಡಿ ಪರಿಸರದ ಮೇಲೆ ಮಾನವ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವುದರಿಂದ ಭೂಮಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಐದು ಕೋಟಿ ಸಸಿಗಳನ್ನು ನೆಡುವಂತೆ ರಾಜ್ಯ ಸರ್ಕಾರ ಘೋಷಿಸಿದೆ. ಸಾಲು ಮರದ ತಿಮ್ಮಕ್ಕ, ಮಲ್ಲಾಡಿಹಳ್ಳಿಯ ತಿರುಕು ಇವರುಗಳ್ಯಾರು ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ. ಶಿಕ್ಷಣ ವೃತ್ತಿಯಾಗಬಾರದು. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಬೇಕು. ಮಕ್ಕಳ ಮೇಲೆ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿಯಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ. ಕಲುಷಿತವಾಗಿರುವ ಸಮಾಜದಲ್ಲಿ ಸಾಮಾಜಿಕ ಪಿಡುಗುಗಳನ್ನು ಓಡಿಸಬೇಕಿದೆ ಎಂದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಎಂ.ಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ವಿದ್ಯಾರ್ಥಿಗಳೊಂದಿಗೆ ಪರಸರ ಸಂರಕ್ಷಣೆ ಕುರಿತು ಸಂವಾದ ನಡೆಸಿದರು.