ಅಂಧರ ಬಾಳಿಗೆ ಬೆಳಕು ಚೆಲ್ಲುವ ಬೆಂಗಳೂರಿನ ಎನೋಬಲ್ ಇಂಡಿಯಾ ಪರಿವರ್ತನಾ ಸಂಸ್ಥೆ : ಚಿತ್ರದುರ್ಗದಲ್ಲಿ ಐದು ದಿನಗಳ ಕಾರ್ಯಾಗಾರ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.23 : ಅಂಧರ ಬಾಳಿಗೆ ಬೆಳಕಾಗುವ ದೂರದೃಷ್ಟಿಯಿಟ್ಟುಕೊಂಡು ಬೆಂಗಳೂರಿನ ಎನೋಬಲ್ ಇಂಡಿಯಾ ಪರಿವರ್ತನಾ ಸಂಸ್ಥೆ ಮಾಳಪ್ಪನಹಟ್ಟಿ ಸಮೀಪವಿರುವ ತೀಕ್ಷ್ಣ ಅಂಧರ ಶಾಲೆಯಲ್ಲಿ ಎಲ್ಲಾ ಕಡೆ ವರ್ಕ್‍ಶಾಪ್ ನಡೆಸುತ್ತಿದ್ದು, ದೃಷ್ಟಿಹೀನ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಎಸ್.ಜೆ.ಎಂ.ಕಾಲೇಜು ಪ್ರಾಂಶುಪಾಲರಾದ ಪಂಚಾಕ್ಷರಿ ತಿಳಿಸಿದರು.
ಮಾಳಪ್ಪನಹಟ್ಟಿ ಸಮೀಪವಿರುವ ತೀಕ್ಷ್ಣ ಅಂಧರ ಪುನಶ್ಚೇತನ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂಧರಿಗೆ ಸಾಮಾನ್ಯ ಜನರಿಗಿಂತ ಹೆಚ್ಚು ಪ್ರತಿಭೆಯಿರುತ್ತದೆ. ಅನೇಕ ವರ್ಷಗಳಿಂದಲೂ ತೀಕ್ಷ್ಣ ಅಂಧರ ಪುನಶ್ಚೇತನ ಶಾಲೆ ನಿಮ್ಮ ಭವಿಷ್ಯಕ್ಕಾಗಿ ದುಡಿಯುತ್ತಿದೆ. ನಮ್ಮ ಕಾಲೇಜಿಗೆ ಪ್ರವೇಶ ಪಡೆಯಲು ಬರುವ ಅಂಧರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಸ್ಕಾಲರ್‍ಶಿಪ್ ಸೌಲಭ್ಯವಿದೆ. ಅದನ್ನು ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.
ಎನೋಬಲ್ ಇಂಡಿಯಾ ಸಂಸ್ಥೆಯ ರಾಜೇಶ್ ಮಾತನಾಡಿ 1990 ರಲ್ಲಿ ಎನೋಬಲ್ ಇಂಡಿಯಾ ಸ್ಥಾಪನೆಯಾಯಿತು. ಆರಂಭದಲ್ಲಿ ನಾಲ್ಕು ಅಂಧ ಮಕ್ಕಳಿಗೆ ಕಂಪ್ಯೂಟರ್ ಕಲಿಸುತ್ತಿತ್ತು. ಈಗ ಸಾವಿರಾರು ಮಕ್ಕಳಿಗೆ ಹೇಳಿಕೊಡುತ್ತಿದ್ದು, ದೇಶಾದ್ಯಂತ ಮುಂದೆ ಹತ್ತು ಲಕ್ಷ ಅಂಧ ಮಕ್ಕಳಿಗೆ ಕಂಪ್ಯೂಟರ್ ಹೇಳಿಕೊಡುವ ಗುರಿಯಿಟ್ಟುಕೊಂಡಿದೆ. ಹಾಗಾಗಿ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಎಲ್ಲಾ ಕಡೆ ಅಂಧ ಮಕ್ಕಳಿಗೆ ಕಾರ್ಯಾಗಾರ ನಡೆಸಲಾಗುವುದು. ಪೆನ್ ಲೇಬಲರ್, ಆರ್ಬಿಟ್ ರೀಡರ್, ಹ್ಯಾಂಡ್ ಮ್ಯಾಗ್ನಿಫೈಯರ್, ಕೀಬೋ ಆಕ್ಸಿಸ್ ಡಿವೈಸರ್ ಇನ್ನು ಹತ್ತು ಹಲವಾರು ಸಾಧನಗಳ ಮೂಲಕ ಅಂಧರು ಸುಲಭವಾಗಿ ಬರೆಯುವ, ಓದುವ ಹಾಗೂ ಕಂಪ್ಯೂಟರ್‍ನಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು ಎಂದು ಹೇಳಿದರು.
ಮಣಿಕಂಠ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಓದಿದ ಅನೇಕ ಅಂಧರು ಸರ್ಕಾರಿ ನೌಕರಿಯಲ್ಲಿದ್ದಾರೆ. ಬೆಂಗಳೂರಿನ ಎನೋಬಲ್ ಇಂಡಿಯಾ ಸಂಸ್ಥೆಯವರು ಅತ್ಯುತ್ತಮವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ತೀಕ್ಷ್ಣ ಅಂಧರ ಪುನಶ್ಚೇತನ ಸಂಸ್ಥೆಯ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ತೀಕ್ಷ್ಣ ಅಂಧರ ಪುನಶ್ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಕೌಶಲ್ಯ ಮಾತನಾಡುತ್ತ ಅಂಧರಿಗೆ ಬೆಳಕು ನೀಡುವ ಉದ್ದೇಶದಿಂದ ಎನೋಬಲ್ ಇಂಡಿಯಾ ಪರಿವರ್ತನಾ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಐದು ದಿನಗಳ ಕಾರ್ಯಾಗಾರ ಏರ್ಪಡಿಸಿದ್ದು, ಅಂಧ ಮಕ್ಕಳಿಗೆ ಇದೊಂದು ವಿಶೇಷ ಅವಕಾಶ ಎಲ್ಲರೂ ಇದರಲ್ಲಿ ಪಾಲ್ಗೊಂಡು ಡಿವೈಸರ್‍ಗಳ ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದರು.
ಕೃಷ್ಣಪ್ಪ, ಕೃಷ್ಣೋಜಿರಾವ್ ವೇದಿಕೆಯಲ್ಲಿದ್ದರು.
ಗೀತ ಪ್ರಾರ್ಥಿಸಿದರು. ಕಾತ್ಯಾಯಿನಿ ಸ್ವಾಗತಿಸಿದರು.