For the best experience, open
https://m.suddione.com
on your mobile browser.
Advertisement

ಮಕ್ಕಳು ಮೂಲವಿಜ್ಞಾನದ ಅಧ್ಯಯನದಲ್ಲಿ ತೊಡಗಬೇಕು : ಫಣಿಂಧರ್ ಕುಮಾರ್

05:26 PM Mar 01, 2024 IST | suddionenews
ಮಕ್ಕಳು ಮೂಲವಿಜ್ಞಾನದ ಅಧ್ಯಯನದಲ್ಲಿ ತೊಡಗಬೇಕು   ಫಣಿಂಧರ್ ಕುಮಾರ್
Advertisement

ಸುದ್ದಿಒನ್, ನಾಯಕನಹಟ್ಟಿ : ಮಾ.01. ವಿಧ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ಮೂಲ ವಿಜ್ಞಾನದ ಅಧ್ಯಯನದಲ್ಲಿ ತೊಡಗಬೇಕು ಎಂದು ಎಸ್.ಟಿ.ಎಸ್.ಆರ್ ವಿದ್ಯಾಸಂಸ್ಥೆಯ ಶಿಕ್ಷಕ ಎಂ.ಫಣೀಂಧರ್ ಕುಮಾರ್ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಂದ ರಚಿತವಾದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಮೌಢ್ಯ ಅಂಧಕಾರವನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ವಿನಾಶಮಾಡಲು ವಿಜ್ಞಾನ ಅತ್ಯಂತ ಸಹಕಾರಿಯಾಗಲಿದೆ. ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾಟ ಮಂತ್ರ ತಂತ್ರ ಎಂಬ ಹಲವು ಮೌಢ್ಯಗಳನ್ನು ಕೆಲ ಪಟ್ಟಭದ್ರರು ಬಿತ್ತುತ್ತಿರುತ್ತಾರೆ. ಅವುಗಳನ್ನೇ ನಂಬಿ ಸಾರ್ವಜನಿಕರು ಮೋಸ ಹೋಗುತ್ತಾರೆ. ಈ ಎಲ್ಲ ಮಾಟಮಂತ್ರ ತಂತ್ರಗಳಲ್ಲಿ ಯಾವುದೇ ಅತಿಮಾನುಷ ಶಕ್ತಿ ಇರುವುದಿಲ್ಲ. ಬದಲಿಗೆ ಶುದ್ಧವಾದ ಮೂಲವಿಜ್ಞಾನದ ಅಂಶಗಳು ಅಡಗಿರುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ಮೂಲ ವಿಜ್ಞಾನದ ಅಧ್ಯಯನದಲ್ಲಿ ತೊಡಗಬೇಕು ಎಂದರು.

Advertisement

ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲಿ ಸಣ್ಣ ಸಣ್ಣ ಪ್ರಯೋಗಗಳು ಮತ್ತು ಮಾದರಿಗಳನ್ನು ರಚಿಸಲು ಮುಂದಾಗಬೇಕು. ಆಗ ವಿಜ್ಞಾನದ ಪರಿಚಯವಾಗಿ ವೈಜ್ಞಾನಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಸಾಮಥ್ರ್ಯ ಲಭಿಸುತ್ತದೆ. ಆಗ ಮೌಢ್ಯತೆಗಳು, ಕಂದಾಚಾರಗಳು, ಮೂಢನಂಬಿಕೆಗಳ ಹಿಂದೆ ಇರುವ ತರ್ಕ ಅರ್ಥವಾಗಿ ಮೋಸ ಹೋಗುವುದು ತಪ್ಪುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಗಮನವಿಟ್ಟು ವಿಜ್ಞಾನ ತರಗತಿಗಳನ್ನು ಕೇಳಬೇಕು. ಮತ್ತು ಆಸಕ್ತಿವಹಿಸಿ ವಿಜ್ಞಾನ ವಿಷಯವನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ.ಪಂ.ಸದಸ್ಯ ಸೈಯದ್‍ಅನ್ವರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಕಣ್ಮನ ಸೆಳೆಯುವ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶನ ನೀಡುತ್ತಿರುವುದು ತುಂಬಾ ಸಂತಸದ ಸಂಗತಿ. ಹಾಗೇ ಶಾಲಾ ಹಂತದಲ್ಲಿ ಪ್ರತಿ ಮಗುವೂ ಎಲ್ಲ ವಿಷಯಗಳಲ್ಲಿ ತೀವ್ರ ಕುತೂಹಲಿಗಳಾಗಿರಬೇಕು. ಕುತೂಹಲ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ವಿಜ್ಞಾನ ಅಧ್ಯಯನ ಕ್ರಮಬದ್ಧ ಮತ್ತು ಶಿಸ್ತು ಕಲಿಕೆಗೆ ಪೂರಕವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಹಿರಿಯ ಮುಖ್ಯಶಿಕ್ಷಕಿ ಎನ್.ಇಂದಿರಮ್ಮ, ಶಿಕ್ಷಕ ತೀರ್ಥಕುಮಾರ್, ಇಸಿಒ ಈರಸ್ವಾಮಿ, ಸಿಆರ್‍ಪಿ ಈಶ್ವರಪ್ಪ, ಡಾನ್‍ಬಾಸ್ಕೋ ಶಾಲೆ ಕಾರ್ಯದರ್ಶಿ ಎಸ್.ಟಿ.ಬೋರಸ್ವಾಮಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮಲತಾ, ಸದಸ್ಯರಾದ ರಾಜಣ್ಣ, ಸುಮಯ್ಯ, ಅನಿತಾ, ನಾಗರತ್ನಮ್ಮ ಶಿಕ್ಷಕರಾದ ಗಾಯಿತ್ರಮ್ಮ, ಮಂಜುಳಮ್ಮ, ಶಿಲ್ಪ, ಕೃಷ್ಣರೆಡ್ಡಿ, ಮಂಜುನಾಥ್, ಉಷಾ, ಸುಮಾ ಉಪಸ್ಥಿತರಿದ್ದರು.

Tags :
Advertisement