For the best experience, open
https://m.suddione.com
on your mobile browser.
Advertisement

ಜನಸ್ನೇಹಿ ಆಡಳಿತಕ್ಕೆ ಒತ್ತು :  ನೂತನ ಜಿಲ್ಲಾಧಿಕಾರಿ ವೆಂಕಟೇಶ್. ಟಿ.

04:16 PM Jan 31, 2024 IST | suddionenews
ಜನಸ್ನೇಹಿ ಆಡಳಿತಕ್ಕೆ ಒತ್ತು    ನೂತನ ಜಿಲ್ಲಾಧಿಕಾರಿ ವೆಂಕಟೇಶ್  ಟಿ
Advertisement

Advertisement
Advertisement

ಚಿತ್ರದುರ್ಗ. ಜ. 31 :  ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಪ್ರಸ್ತುತ ಬರ ಪರಿಸ್ಥಿತಿ ಇದ್ದು, ಬರ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಶ್ರಮಿಸುವುದಾಗಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಪತ್ರಕರ್ತರೊಂದಿಗೆ ಪರಿಚಯಾತ್ಮ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಮೊದಲು ಚಿತ್ರದುರ್ಗ ಉಪವಿಭಾಗಾಧಿಕಾರಿಯಾಗಿ, ಹರಪನಹಳ್ಳಿ ಉಪವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ ಅಪರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ ಅಪರ ಜಿಲ್ಲಾಧಿಕಾರಿ, ರಾಜ್ಯ ಪುರಾತತ್ವ ಇಲಾಖೆ ಆಯುಕ್ತರು, ಕೆಎಸ್‍ಆರ್‍ಟಿಸಿ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಇದೀಗ ಚಿತ್ರದುರ್ಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದೇನೆ.

Advertisement
Advertisement

ಈ ಹಿಂದೆ ಜಿಲ್ಲೆಯಲ್ಲಿ ಕೆಲಸ ಮಾಡಿದ ಅನುಭವವಿದೆ, ಹೀಗಾಗಿ ಇಲ್ಲಿನ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಇದೆ.  ಪ್ರಸ್ತುತ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಬರ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.  ಸಾರ್ವಜನಿಕರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ದೂರದೂರುಗಳಿಂದ ತಮ್ಮ ಕೆಲಸ ಕಾರ್ಯಗಳಿಗೆ, ವಿವಿಧ ಬಗೆಯ ಅರ್ಜಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುತ್ತಾರೆ.  ಅಂತಹವರು ಇಡೀ ದಿನ ಅಧಿಕಾರಿಗಳ ಭೇಟಿಗಾಗಿ ಕಾಯುವಂತಾಗಬಾರದು, ಅವರ ಸಮಯ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು, ಅರ್ಜಿಗಳನ್ನು ಸ್ವೀಕರಿಸಲು ಶಾಶ್ವತ ಕೌಂಟರ್ ಒಂದನ್ನು ಸ್ಥಾಪಿಸಲಾಗುವುದು.

ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪಡೆದು, ಅವರಿಗೆ ಸ್ವೀಕೃತಿ ನೀಡಲಾಗುವುದು. ಅಲ್ಲದೆ ಅಂತಹ ಅರ್ಜಿಗಳನ್ನು ಗಣಕೀಕರಣಗೊಳಿಸಿ, ಕಾಲಮಿತಿಯಲ್ಲಿ ವಿಲೇವಾರಿ ಮಾಡಲು, ಅರ್ಜಿಗಳಿಗೆ ಸ್ಪಂದಿಸಲು ವಿಶೇಷ ಆದ್ಯತೆ ನೀಡಲಾಗುವುದು.  ಅರ್ಜಿಗಳ ವಿಲೇವಾರಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ, ಪರಿಶೀಲನೆ ಮಾಡಲಾಗುವುದು.

ಜಿಲ್ಲಾಧಿಕಾರಿಯಾಗಿ ಕಚೇರಿಗೆ ಮಾತ್ರ ಸೀಮಿತವಾಗದೇ, ಗ್ರಾಮಗಳಿಗೆ ತೆರಳಿ, ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಂದಲೇ ಮಾಹಿತಿ ಪಡೆಯಲು ಬಯಸುತ್ತೇನೆ.  ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ಒದಗಿಸಲು ಶ್ರಮಿಸುವ ಮೂಲಕ ಜನಸ್ನೇಹಿ ಆಡಳಿತ ನೀಡುವುದಾಗಿ ನೂತನ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಸೇರಿದಂತೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement
Tags :
Advertisement