ಮಾದಕ ವಸ್ತುಗಳ ವ್ಯಸನ: ಯುವ ಜನತೆ ಜಾಗೃತಿ ವಹಿಸಿ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್
ಚಿತ್ರದುರ್ಗ. ಜೂನ್.26: ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಾಣಿಕೆಯನ್ನು ಯುವ ಜನತೆ ಜಾಗೃತಿ ವಹಿಸಿ ತಡೆಗಟ್ಟಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ನಗರದ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಸರ್‍ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಜೂನ್ 26 ಅನ್ನು ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಾದಕ ವಸ್ತುಗಳ ವ್ಯಸನವು ಯುವ ಜನತೆಗೆ ಮಾರಕವಾಗಿದೆ. ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಾಣಿಕೆಯನ್ನು ಯುವಜನರು ಜಾಗೃತ ವಹಿಸಿ ತಡೆಗಟ್ಟಬೇಕು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ತಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರಪಂಚದ ದೊಡ್ಡ ಬಿಸಿನೆಸ್ ಗಳಲ್ಲಿ ಡ್ರಗ್ಸ ಮೊದಲನೆಯದಾಗಿದೆ, ಡ್ರಗ್ಸ್‍ನಿಂದ ಅಪರಾಧಗಳು ಪ್ರಾರಂಭವಾಗುತ್ತವೆ.
ವ್ಯಸನಿಗಳಾಗುತ್ತಾರೆ ಎಂದು ತಿಳಿಸಿದ ಅವರು, ಒಳ್ಳೆಯ ಪ್ರಜೆಯಾಗಿ ಬಾಳಬೇಕು. ವಿದ್ಯಾರ್ಥಿಗಳು ಡ್ರಗ್ಸ್‍ನಿಂದ ದೂರವಿರಬೇಕು. ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಮಾದಕ ವ್ಯಸನಕ್ಕೆ ಒಳಗಾದರೆ ಯುದ್ದವಿಲ್ಲದೇ ದೇಶ ಸರ್ವನಾಶವಾಗುತ್ತದೆ. ಮಾದಕ ವಸ್ತುಗಳು ಮನುಷ್ಯನ ದೇಹ ಮತ್ತು ಮನಸ್ಸು ಹಾಳು ಮಾಡುತ್ತದೆ. ಡ್ರಗ್ಸ್ ಮಾಫಿಯಾ ತಡೆಗಟ್ಟುವ ಸಾಮಾಜಿಕ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಮಾತನಾಡಿ, ಕಾಲೇಜು, ಹಾಸ್ಟೆಲ್ ಯುವಕರಲ್ಲಿ ಮಾದಕ ವಸ್ತುಗಳ ವ್ಯಸನ ಹೆಚ್ಚಾಗುತ್ತಿದೆ. ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿ ಮಾದಕ ವಸ್ತುಗಳ ದಾಸರಾಗದಂತೆ ಮನೋವೈದ್ಯರಿಂದ ಮನೋಚೈತನ್ಯ ಶಿಬಿರಗಳಲ್ಲಿ ಚಿಕಿತ್ಸೆ ಮತ್ತು ಸಮಾಲೋಚನೆಯಿಂದ ಗುಣಪಡಿಸಬೇಕು. ಟೆಲಿಮಾನಸ 14416 ಉಚಿತ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಚಿಕಿತ್ಸೆ, ಸಮಾಲೋಚನೆ ಪಡೆಯಬಹುದು ಎಂದು ಕೋರಿದರು.
ಮನೋವೈದ್ಯ ಡಾ.ಆರ್.ಮಂಜುನಾಥ್ ಉಪನ್ಯಾಸ ನೀಡಿದರು. ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಪಿ.ಬಿ.ಭರತ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಕಾಲೇಜಿನ ಎನ್‍ಎಸ್‍ಎಸ್ ಸಂಚಾಲಕ ಡಾ.ನಿರಂಜನ್, ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಇದ್ದರು.