ಚಿತ್ರದುರ್ಗದಲ್ಲಿ ವ್ಯರ್ಥವಾಗಿ ಹರಿದ ಕುಡಿಯುವ ನೀರು : ಸಾರ್ವಜನಿಕರ ಆಕ್ರೋಶ
ಸುದ್ದಿಒನ್, ಚಿತ್ರದುರ್ಗ, ಮೇ. 30 : ಕಳೆದ ವರ್ಷ ಮಳೆಯಿಲ್ಲದೆ ಬೆಳೆ ಇರಲಿ ಕುಡಿಯುವ ನೀರಿಗೂ ಎಷ್ಟು ಸಮಸ್ಯೆಯಾಗಿದೆ ಎಂಬುದು ಜನ ಕಂಡಿದ್ದಾರೆ. ಜೀವ ಜಲ ಬರಿದಾಗಿದೆ. ಈಗಷ್ಟೇ ಮಳೆಯ ಸಿಂಚನವಾಗಿದೆ. ಆದರೆ ಭೂಮಿಯೊಳಗಿನ ಅಂತರ್ಜಲ ಬತ್ತಿ ಹೋಗದಂತೆ ಕಾಪಾಡಲು ಮರಗಿಡಗಳನ್ನು ಹಾಕಬೇಕು. ಇರುವ ಮರವೆಲ್ಲಾ ಕಡಿದು ಅಂತರ್ಜಲ ಬತ್ತಿ ಹೋಗುತ್ತಿದೆ. ಹೀಗಿರುವಾಗ ಪ್ರತಿ ಸಲ ನೀರಿನ್ನು ವ್ಯರ್ಥ ಮಾಡಬೇಡಿ. ನೀರು ಉಳಿಸಿ ಅನ್ನೋ ಸಲಹೆಗಳು ಕೇಳಿ ಬರುತ್ತವೆ.
ಆದರೆ ನಗರದಲ್ಲಿ ಕುಡಿಯುವ ನೀರು ಚರಂಡಿ ನೀರಿನಂತೆ ಹರಿದು ಹೋಗುತ್ತಿದೆ. ಈ ದೃಶ್ಯವನ್ನು ನೋಡುತ್ತಿದ್ದರೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಹಳೆಯ ನಾಣ್ಣುಡಿಯೊಂದು ನೆನಪಾಗುತ್ತಿದೆ. ಹೌದು ನಗರದಲ್ಲಿ ಬಹಳಷ್ಟು ಕಡೆ ಕುಡಿಯಲು ನೀರಿಲ್ಲದಿದ್ದರೂ ಕೆಲವೆಡೆ ಮಾತ್ರ ನೀರು ಹೀಗೆ ವ್ಯರ್ಥವಾಗಿ ರಸ್ತೆಯ ಮೇಲೆ ಹರಿಯುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ರಾತ್ರಿಯಿಡೀ ನೀರು ವ್ಯರ್ಥವಾಗಿ ಹರಿಯುತ್ತಿದ್ದ ದೃಶ್ಯ ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ನಗರದ ಮಧ್ಯ ಭಾಗದಲ್ಲಿರುವ ತಾಲ್ಲೂಕು ಕಚೇರಿಯ ಮುಂಭಾಗದ ರಸ್ತೆಯಲ್ಲಿ ವಾಸವಿ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಹರಿದು ಜಿಲ್ಲಾ ಖಜಾನೆಯ ಬಿಳಿಯ ಚರಂಡಿಗೆ ನೀರು ಹರಿದಿದೆ.
ಹೇಳಿ ಕೇಳಿ ಚಿತ್ರದುರ್ಗ ಬಯಲು ಸೀಮೆ. ಇಲ್ಲಿ ನೀರಿಗಾಗಿ ಆಗಾಗ ಸಮಸ್ಯೆ ಕಾಣಿಸುತ್ತಲೇ ಇರುತ್ತದೆ. ಇರುವ ನೀರನ್ನು ವ್ಯರ್ಥ ಮಾಡದಂತೆ ಕಾಪಾಡಿಕೊಳ್ಳಬೇಕಿದೆ. ಆದರೆ ಹೀಗೆ ಸರ್ಕಾರಿ ಕಚೇರಿಗಳಲ್ಲೇ ನೀರು ವ್ಯರ್ಥವಾದರೇ ಹೇಗೆ ಎಂಬುದು ನೋಡುಗರ ಆಕ್ರೋಶವಾಗಿತ್ತು.
ಬುಧವಾರ ಮಧ್ಯರಾತ್ರಿ ಸುಮಾರು 1 ಗಂಟೆಯಿಂದ ಗುರುವಾರ ಬೆಳಿಗ್ಗೆ 6 ಗಂಟೆಯಾದರೂ ನೀರು ಪೋಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿಒನ್ ಗೆ ಮಾಹಿತಿ ನೀಡಿದರು. ನಗರದಲ್ಲಿಯೇ ಕೆಲವು ಪ್ರದೇಶಗಳಲ್ಲಿ 15 ದಿನಗಳಾದರೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರಿಗೆ ಜನ ಸಂಕಷ್ಟ ಪಡುತ್ತಿದ್ದಾರೆ. ಇಲ್ಲಿ ನೋಡಿದರೆ ಮಧ್ಯರಾತ್ರಿಯಲ್ಲಿ ಪೋಲಾಗುತ್ತಿರುವುದನ್ನು ನೋಡಿದರೆ ತುಂಬಾ ನೋವಾಗುತ್ತದೆ ಎಂಬುದು ನೀರಿನ ಮಹತ್ವ ಅರಿತಿದ್ದವರ ಪ್ರತ್ಯಕ್ಷದರ್ಶಿಗಳ ಮಾತಾಗಿತ್ತು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಹೀಗೆ ಅತ್ಯಮೂಲ್ಯವಾದ ಜೀವಜಲ ವ್ಯರ್ಥವಾಗದಂತೆ ನೋಡಿಕೊಳ್ಳಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.