ಶೋಷಿತ ವರ್ಗದಲ್ಲಿ ಜನಿಸಿ ದೇಶದ ಉಪ ಪ್ರಧಾನಿ ಹುದ್ದೆಯವರೆಗೆ ಏರಿದ ಮಹಾ ನಾಯಕ ಡಾ.ಬಾಬು ಜಗಜೀವನರಾಮ್ : ಬಿ.ಎನ್.ಚಂದ್ರಪ್ಪ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.05 : ಶೋಷಿತ ವರ್ಗದಲ್ಲಿ ಜನಿಸಿದ ಡಾ.ಬಾಬು ಜಗಜೀವನರಾಮ್‍ರವರು ದೇಶದ ಉಪ ಪ್ರಧಾನಿ ಹುದ್ದೆಯವರೆಗೆ ಏರಿದರು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಾಬುಜಗಜೀವನರಾಂರವರ 117 ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ರಕ್ಷಣಾ ಸಚಿವರಾಗಿದ್ದಾಗ ದೇಶಕ್ಕೆ ಭದ್ರತೆ ಒದಗಿಸಿದ್ದರು. ಯಾವುದೇ ಖಾತೆ ನೀಡಿದರು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಅವರಲ್ಲಿ ಅಷ್ಟೊಂದು ಪ್ರಾಮಾಣಿಕತೆ ದೇಶಭಕ್ತಿಯಿತ್ತು. ದೇಶದಲ್ಲಿ ಆಹಾರಕ್ಕೆ ಅಭಾವವಾದಾಗ ವಿದೇಶದಿಂದ ಕೆಂಪು ಜೋಳ ತರಿಸಿ ಬಡವರ ಹೊಟ್ಟೆ ತುಂಬಿಸಿದ ಮಹಾನ್ ಚೇತನ ಎಂದು ಹೇಳಿದರು.
ಜೈಜವಾನ್ ಜೈಕಿಸಾನ್ ಎನ್ನುವ ತತ್ವದಡಿ ರೈತರಿಗೆ ನೆರವಾಗಿ ನಿಂತ ಡಾ.ಬಾಬುಜಗಜೀವನರಾಂರವರನ್ನು ಎಲ್ಲರೂ ನೆನೆಯಲೇಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ ನರೇಂದ್ರಮೋದಿ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬ ಬಡವರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮ ಮಾಡುವುದಾಗಿ ಆಸೆ ಹುಟ್ಟಿಸಿದರು. ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿ ಕೊನೆಗೆ ಪಕೋಡ ಮಾರಿ ಎಂದು ವ್ಯಂಗ್ಯವಾಡಿದರು. ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಿಜೆಪಿ.ಯನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಮನೆಗೆ ಕಳಿಸುತ್ತಾರೆಂದರು.ನಮ್ಮಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲರೂ ಒಟ್ಟಿಗೆ ಸೇರಿ ಲೋಕಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಸ್ವಾಮಿ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.