ಡಾ.ಬಿ.ಆರ್.ಅಂಬೇಡ್ಕರ್ ಕಾನೂನು ಪಿತಾಮಹ : ನ್ಯಾಯಾಧೀಶೆ ಕೆ.ಬಿ.ಗೀತಾ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 29 : ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಬೋಧಿಸುವ ಧರ್ಮವನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಇಷ್ಟ ಪಡುತ್ತಿದ್ದರು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ.ಗೀತ ಹೇಳಿದರು.
ಜಿಲ್ಲಾ ವಕೀಲರ ಬಳಗದಿಂದ ವಕೀಲರ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ 133 ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಆಳವಾದ ಅಧ್ಯಯನ ಮಾಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಷ್ಟ ಸಹಿಷ್ಣುವಾಗಿದ್ದರು. ಪ್ರಪಂಚ ಪರ್ಯಟನೆ ಮಾಡಿ ಭಾರತಕ್ಕೆ ಅತ್ಯಂತ ಶಕ್ತಿಶಾಲಿಯಾದ ಸಂವಿಧಾನವನ್ನು ರಚಿಸಿ ಕೊಡುಗೆಯಾಗಿ ನೀಡಿದ್ದಾರೆ. ಹಾಗಾಗಿ ಅವರೊಬ್ಬ ಕಾನೂನು ಪಿತಾಮಹ ಎಂದು ತಿಳಿಸಿದರು.
ಪ್ರತಿಯೊಬ್ಬರು ಜೀವನ ಉದ್ದೀಪನಗೊಳಿಸಿಕೊಳ್ಳಲು ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವ ಆಶಯ ಅವರದಾಗಿತ್ತು. ಎಲ್ಲಾ ಜಾತಿ ಧರ್ಮದವರ ಸಮಾನತೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಹಕ್ಕಿಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ರಾಜಕೀಯ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವವಿರಬೇಕೆಂಬುದು ಡಾ.ಬಿ.ಆರ್.ಅಂಬೇಡ್ಕರ್‍ರವರ ಆಶಯವಾಗಿತ್ತು. ಕಾನೂನು ರಕ್ಷಣೆ ಮಾಡಬೇಕಾದರೆ ಕಾನೂನು ಮತ್ತು ಸುವ್ಯವಸ್ಥೆ ಇರಬೇಕು. ಆಗ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಹೋರಾಟದಿಂದ ಹಕ್ಕು ಪಡೆಯಬಹುದು ಎನ್ನುವುದು ಸಂವಿಧಾನದ ಮೂಲ ಆಶಯ ಎಂದರು.
ಸಂವಿಧಾನದಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ನೀಡಲಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಶಿಕ್ಷಣವಂತರಾಗುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಒಂದನೆ ಜಿಲ್ಲಾ ಸತ್ರ ನ್ಯಾಯಾಧೀಶರಾದ ನಿಂಬಣ್ಣ ಶಂಕರಪ್ಪ ಕಲ್ಕಣಿ ಮಾತನಾಡಿ ಶಿಕ್ಷಣ, ಸಂಘಟನೆ, ಹೋರಾಟ ಸಂವಿಧಾನ ನೀಡಿರುವ ಮೂಲ ಹಕ್ಕು, ದೇಶಕ್ಕೆ ಸಂವಿಧಾನವನ್ನು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ವಿದ್ವತ್ತನ್ನು ಸ್ವಂತಕ್ಕೆ ಎಂದಿಗೂ ಬಳಸಿಕೊಳ್ಳಲಿಲ್ಲ. ಜನಸಾಮಾನ್ಯರ ಹಕ್ಕುಗಳ ರಕ್ಷಣೆಗೆ ಹೊಸ ಹೊಸ ಕಾನೂನುಗಳನ್ನು ಜಾರಿಗೆ ತಂದರು. ದೇವಾಲಯಗಳಿಗಿಂತ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂಬುದು ಅಂಬೇಡ್ಕರ್‍ರವರ ಚಿಂತನೆಯಾಗಿತ್ತು. ಬಾಲ್ಯದಿಂದಲೂ ಜೀವನದಲ್ಲಿ ಅನೇಕ ವಿರೋಧಗಳನ್ನು ಎದುರಿಸಿದ ಡಾ.ಬಿ.ಆರ್.ಅಂಬೇಡ್ಕರ್ ತತ್ವಗಳಂತೆ ಎಲ್ಲರೂ ನಡೆಯುವುದೆ ಅವರಿಗೆ ನೀಡುವ ಬಹುದೊಡ್ಡ ಗೌರವ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ ಚಿಕ್ಕಂದಿನಿಂದಲೂ ಹಸಿವು, ನೋವು, ಅವಮಾನ, ಹಿಂಸೆಗಳನ್ನು ಅನುಭವಿಸಿದ್ದರಿಂದಲೇ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಲು ಸಾಧ್ಯವಾಯಿತು. ಜ್ಞಾನ, ಶಿಕ್ಷಣದ ಹಸಿವಿತ್ತು. ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್‍ರವರ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು ಎಂದು ನುಡಿದರು.
ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಮಾತನಾಡುತ್ತ ವಕೀಲರ ಬಳಗದಿಂದ ಕಳೆದ ಹತ್ತು ವರ್ಷಗಳಿಂದಲೂ ಡಾ.ಬಿ.ಆರ್.ಅಂಬೇಡ್ಕರ್‍ರವರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಕೇವಲ ದಲಿತರಿಗಷ್ಟೆ ಅಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಸಿಗಬೇಕೆನ್ನುವುದು ಅವರ ಉದ್ದೇಶವಾಗಿತ್ತು. ಶಿಕ್ಷಣ, ಸಂಘಟನೆ, ಹೋರಾಟ ಅವರ ಮೂಲ ಮಂತ್ರವಾಗಿತ್ತು. ಕಬೀರದಾಸರ ಚಿಂತನೆ ಮೈಗೂಡಿಸಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಪಾಸ್ ಆಗಲಿಲ್ಲವೆಂದು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ ಬಂದರು. ಅಧಿಕಾರದ ಹಿಂದೆ ಎಂದಿಗೂ ಹೋಗಲಿಲ್ಲ. ಅಂತಹ ಶ್ರೇಷ್ಟ ವ್ಯಕ್ತಿತ್ವ ಅವರದಾಗಿತ್ತು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ, ಒಂದನೆ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರುಗಳಾದ ಎ.ಎಂ.ಚೈತ್ರ, ನೇಮಿಚಂದ್, ಎರಡನೆ ಅಪರ ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಜಂಟಿ ಕಾರ್ಯದರ್ಶಿ ಗಿರೀಶ್ ಮಲ್ಲಾಪುರ, ಖಜಾಂಚಿ ಪ್ರದೀಪ್‍ಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ವೇದಿಕೆಯಲ್ಲಿದ್ದರು.
ಎಸ್.ವಿಜಯಕುಮಾರ್ ಪ್ರಾರ್ಥಿಸಿದರು, ಎಂ.ಕೆ.ಲೋಕೇಶ್ ಸ್ವಾಗತಿಸಿದರು. ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಟಿ.ಹನುಮಂತಪ್ಪ ನಿರೂಪಿಸಿದರು.
ಹಿರಿಯ ವಕೀಲರುಗಳಾದ ಬಿ.ಕೆ.ರಹಮತ್‍ವುಲ್ಲಾ, ವಿಶ್ವನಾಥಯ್ಯ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಬಿ.ವಿಶ್ವನಾಥ್, ಡಿ.ವೆಂಕಟೇಶ್ ಸೇರಿದಂತೆ ನೂರಾರು ವಕೀಲರುಗಳು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿದ್ದರು