ಹೃದಯ ಸಂಬಂಧಿ ಕಾಯಿಲೆಗಳನ್ನು ಗ್ಯಾಸ್ಟ್ರಿಕ್ ಎಂದು ಉದಾಸೀನ ಮಾಡಬೇಡಿ : ಡಾ.ಬಿ.ಗುರುರಾಜ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂ.18 : ಹೃದಯ ಸಂಬಂಧಿ ಕಾಯಿಲೆಗಳನ್ನು ಗ್ಯಾಸ್ಟ್ರಿಕ್ ಸಮಸ್ಯೆಯೆಂದು ಉದಾಸೀನ ಮಾಡಬೇಡಿ. ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ದಾವಣಗೆರೆಯ ಎಸ್.ಎಸ್.ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಬಿ.ಗುರುರಾಜ್ ಹೇಳಿದರು.
ಜಿಲ್ಲಾ ಸ್ವಾತಂತ್ರ್ಯ ಯೋಧರ ಸ್ಮಾರಕ ಸೇವಾ ಟ್ರಸ್ಟ್, ನೂತನ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸೊಸೈಟಿ ಸಹಯೋಗದೊಂದಿಗೆ ಸಿದ್ದಾಪುರದಲ್ಲಿರುವ ನೂತನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಗಾಟಿಸಿ ಮಾತನಾಡಿದರು.
ರಕ್ತದ ಒತ್ತಡದಿಂದ ಹೃದಯ ಖಾಯಿಲೆಗಳು ಬರುತ್ತವೆ. ಅಧಿಕ ಕೊಬ್ಬಿನಂಶ ಸೇವನೆ ಒಳ್ಳೆಯದಲ್ಲ. ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ವ್ಯಾಯಾಮ, ನಡಿಗೆಯಿಂದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸಿಕೊಳ್ಳಬಹುದೆಂದು ತಿಳಿಸಿದರು.
ಡಿಜಿಟಲ್ ವರ್ಲ್ಡ್ ನ ದಾದಾಪೀರ್ ಮಾತನಾಡಿ ಈಗಿನ ಆಹಾರ ಪದ್ದತಿ ಒತ್ತಡದ ಜೀವನದಿಂದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಕಠಿಣ ಪರಿಶ್ರಮ ಹಾಗೂ ದೇಹ ದಂಡನೆಯಿಂದ ಕಾಯಿಲೆಗಳು ಜಾಸ್ತಿ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗಿನ ಪೀಳಿಗೆ ಎಲ್ಲದಕ್ಕೂ ಯಂತ್ರಗಳನ್ನು ಬಳಸುತ್ತಿರುವುದರಿಂದ ನಾನಾ ರೀತಿಯ ರೋಗಗಳು ಆವರಿಸಿಕೊಳ್ಳುತ್ತವೆ ಎಂದರು.
ನೂತನ್ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಡಾ.ಜಿ.ರಾಘವೇಂದ್ರ ಮಾತನಾಡಿ ಉಚಿತ ಆರೋಗ್ಯ ಶಿಬಿರಗಳಲ್ಲಿ ಎಲ್ಲರೂ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಳ್ಳಿಗಾಡಿನ ಜನ ದೂರದ ನಗರಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟ ಎಂದು ಹೇಳಿದರು.
ಅನಂತಮೂರ್ತಿನಾಯ್ಕ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿದ್ದರು.