ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರೆಂಟಿಗಳಿಗೆ ಮೋಸ ಹೋಗದಿರಿ, ಗೋವಿಂದ ಕಾರಜೋಳರವರಿಗೆ ಮತ ನೀಡಿ ಗೆಲ್ಲಿಸಿ : ಕೆ.ಎಸ್.ನವೀನ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ಒಳ ಮೀಸಲಾತಿ ಜಾರಿಯಿಂದ ದೊಡ್ಡ ಸಂಖ್ಯೆಯಲ್ಲಿರುವ ಮಾದಿಗರಿಗೆ ಅನುಕೂಲವಾಗಲಿದೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನಾಳೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರವರಿಗೆ ಮತ ನೀಡಿ ಗೆಲ್ಲಿಸಿ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾದಿಗ ಜನಾಂಗದವರಲ್ಲಿ ಮನವಿ ಮಾಡಿದರು.
ನಗರದ ಜೆ.ಜೆ.ಹಟ್ಟಿಯಲ್ಲಿ ಬುಧವಾರ ಮತಯಾಚಿಸಿ ಮಾತನಾಡಿದ ಅವರು ಆರು ಬಾರಿ ಶಾಸಕರಾಗಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸಾಕಷ್ಟು ಅನುಭವವಿರುವ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರಿಗೆ ನಿಮ್ಮ ಅಮೂಲ್ಯವಾದ ಮತ ಹಾಕಿದರೆ ಕ್ಷೇತ್ರ ಅಭಿವೃದ್ದಿಯಾಗಲಿದೆ. ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿದರೆ ಸಂಸತ್‍ನಲ್ಲಿ ವಿರೋಧ ಪಕ್ಷದಲ್ಲಿ ಕೂರುತ್ತಾರೆ. ಹಾಗಾಗಿ ನಿಮ್ಮ ಮತ ಕಸದ ಬುಟ್ಟಿ ಸೇರಿದಂತಾಗುತ್ತದೆ. ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ವಿನಂತಿಸಿದರು.
ಗೋವಿಂದ ಕಾರಜೋಳರವರನ್ನು ಗೆಲ್ಲಿಸಿ ಸಂಸತ್‍ಗೆ ಕಳಿಸಿದರೆ ಪ್ರಧಾನಿ ಜೊತೆ ಕುಳಿತುಕೊಳ್ಳುತ್ತಾರೆ. ಕಾಂಗ್ರೆಸ್‍ನ ಬಿ.ಎನ್.ಚಂದ್ರಪ್ಪ ಗೆದ್ದರೆ ಯಾರ ಕೈಗೂ ಸಿಗಲ್ಲ. ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸಬೇಕೆಂಬ ಉದ್ದೇಶವಿಟ್ಟುಕೊಂಡು ಗೋವಿಂದ ಕಾರಜೋಳರವರವನ್ನು ಕರೆದುಕೊಂಡು ಬಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಕಾಂಗ್ರೆಸ್‍ನ ಐದು ಗ್ಯಾರೆಂಟಿಗಳು ಯಾವಾಗ ನಿಲ್ಲುತ್ತವೋ ಗೊತ್ತಿಲ್ಲ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿಯುವ ಹುನ್ನಾರ ಮಾಡುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರೆಂಟಿಗಳಿಗೆ ಮೋಸ ಹೋಗದಿರಿ ಎಂದು ಕೆ.ಎಸ್.ನವೀನ್ ಮಾದಿಗರನ್ನು ಎಚ್ಚರಿಸಿದರು.
ಒಳ ಮೀಸಲಾತಿ ನಿಮ್ಮ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಊರುಗೋಲಾಗಲಿದೆ. ಕಾಂಗ್ರೆಸ್ ಒಳ ಮೀಸಲಾತಿಯನ್ನು ವಿರೋಧಿಸುತ್ತಿದೆ ಎನ್ನುವುದು ನಿಮಗೆ ಗೊತ್ತಿರಲಿ. ಪ್ರಧಾನಿ ನರೇಂದ್ರಮೋದಿ ನಿಮ್ಮ ಸಮಾಜಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶದ ನೂರ ನಲವತ್ತು ಕೋಟಿ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದರಿಂದ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ. ಮುಂದುವರೆದ ಬೇರೆ ಬೇರೆ ದೇಶಗಳಲ್ಲಿ ಹಣ ಪಡೆಸು ಲಸಿಕೆ ನೀಡಲಾಗಿದೆ. ಇವೆಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರಿಗೆ ಮತ ನೀಡಿ ಎಂದು ಕೆ.ಎಸ್.ನವೀನ್ ಕೋರಿದರು.
ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ, ಎಸ್ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ಶಿವಣ್ಣ, ಎಸ್ಸಿ. ಮೋರ್ಚಾದ ಕಿರಣ್ ಡಿ.ಎಸ್.ಹಳ್ಳಿ, ಮಾದಿಗ ಸಮುದಾಯದ ಮುಖಂಡರುಗಳಾದ ಮಂಜು, ಮೈಲಾರಿ, ನವೀನ್, ತಿಪ್ಪಣ್ಣ, ಅರುಣ್, ಶಿವು ಇವರುಗಳು ಮತಯಾಚನೆಯಲ್ಲಿದ್ದರು.
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : : ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಈ ಬಾರಿಯ ಲೋಕಸಭೆ ಚುನಾವಣೆ ಅತ್ಯಂತ ಮಹತ್ವವಾದುದು.
ಅದಕ್ಕಾಗಿ ನಾಳೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಬೇಕೆಂದು ಬಿಜೆಪಿ. ಮುಖಂಡ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಎಸ್.ಆರ್.ಗಿರೀಶ್ ಮತದಾರರಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ರಾಮಗಿರಿ ಹೋಬಳಿ ತುಪ್ಪದಹಳ್ಳಿ, ಬಿದರೆಕೆರೆ, ನವಣೆಕೆರೆ, ಮುದ್ದಾಪುರ ಲಂಬಾಣಿಹಟ್ಟಿ, ಕಣಿವೆಹಳ್ಳಿ, ಕೆಂಚಾಪುರ, ಸಿಂಗೇನಹಳ್ಳಿ ಲಂಬಾಣಿಹಟ್ಟಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿ ಮತಯಾಚಿಸಿ ಮಾತನಾಡಿದರು.
ದೇಶವನ್ನು ವಿಶ್ವಗುರುವಾಗಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ನರೇಂದ್ರಮೋದಿರವರು ಮತ್ತೆ ಪ್ರಧಾನಿಯಾದಾಗ ಮಾತ್ರ ಭಾರತ ಸುಭದ್ರವಾಗಿರಲು ಸಾಧ್ಯ. ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ವಿಶ್ವಕರ್ಮ ಯೋಜನೆ, ಆಯುಷ್ಮಾನ್ ಭಾರತ್, ಕಾರ್ಮಿಕರಿಗೆ ಹೆಲ್ತ್ ಕಾರ್ಡ್, ಒಂದೆ ಭಾರತ್ ರೈಲು, ರಾಷ್ಟ್ರೀಯ ಹೆದ್ದಾರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿ ನುಡಿದಂತೆ ನಡೆದಿದ್ದಾರೆ. ಇಂತಹ ದಿಟ್ಟ ಪ್ರಧಾನಿ ನಮಗೆ ಸಿಗುವುದಿಲ್ಲ. ಈ ಅವಕಾಶವನ್ನು ಕಳೆದುಕೊಳ್ಳದೆ ಬಿಜೆಪಿ.ಯ ಗೋವಿಂದ ಕಾರಜೋಳರನ್ನು ಗೆಲ್ಲಿಸಿ ಮೋದಿ ಕೈಬಲಪಡಿಸಿ ಎಂದು ವಿನಂತಿಸಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್, ಮಾಜಿ ಮಂಡಲ ಅಧ್ಯಕ್ಷ ರಾಜಶೇಖರ್ ಸೇರಿದಂತೆ ಹಲವಾರು ಮುಖಂಡರು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.