ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಎಚ್ಚರಿಕೆ
ಚಿತ್ರದುರ್ಗ. ಏ.29: ಚಿತ್ರದುರ್ಗ ತಾಲ್ಲೂಕಿನ ಹಲವು ಕಡೆ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸರ್ಕಾರದಿಂದ ಸೂಕ್ತ ಮಾನ್ಯತೆ ಪಡೆಯದೆ ಶಾಲೆ ನಡೆಸುತ್ತಿವೆ. ದಯಮಾಡಿ ಪೋಷಕರು ಹೊಸದಾಗಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಥವಾ ಒಂದು ಶಾಲೆಯಿಂದ ಇನ್ನೊಂದು ಶಾಲೆ ಮಕ್ಕಳನ್ನು ದಾಖಲಿಸುವಾಗ ಎಚ್ಚರಿಕೆಯನ್ನು ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷನ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ರಾಜ್ಯ ಪಠ್ಯಕ್ರಮದ 77, ಸಿಬಿಎಸ್‌ಸಿ ಪಠ್ಯಕ್ರಮದ 05 ಮತ್ತು ಸಿ.ಐ.ಎಸ್.ಸಿ.ಇ ಪಠ್ಯಕ್ರಮದ 3 ಶಾಲೆಗಳು ಅಧಿಕೃತವಾಗಿ ನೊಂದಣಿಯಾಗಿವೆ. ಈ ಶಾಲೆಗಳ ಹೆಸರು, ಆಡಳಿತ ಮಂಡಳಿ ವಿಳಾಸ, ಶಾಲಾ ವಿಳಾಸ, ಡೈಸ್ ಸಂಖ್ಯೆ, ನೊಂದಣಿ ಪಡೆದ ವರ್ಷ, ನೊಂದಣಿ ಪಡೆದ ಮಾಧ್ಯಮ, ಮಾನ್ಯತೆ ನವೀಕರಣ, ಅನುಮತಿ ಪಡೆದ ತರಗತಿಗಳು, ಪಠ್ಯಕ್ರಮ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟ ಮಾಡಲಾಗಿದೆ.
ಈ ಶಾಲೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸಿದಲ್ಲಿ ಶಾಲಾ ಶಿಕ್ಷಣ ಇಲಾಖೆ ಯಾವುದೇ ರೀತಿಯಾ ಜವಾಬ್ದಾರಿಯಾಗಿರುವುದಿಲ್ಲ. ಆಯಾ ಪೋಷಕರೇ ಜವಾಬ್ದಾರಿಯಾಗಿರುತ್ತಾರೆ. ಆದ್ದರಿಂದ ಪೋಷಕರು ಅಧಿಕೃತವಾಗಿ ಮಾನ್ಯತೆ ಪಡೆದ ಶಾಲೆಗಳ ಬಗ್ಗೆ ಮಾಹಿತಿ ಪಡೆದು ಮಕ್ಕಳನ್ನು ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಕೋರಿದ್ದಾರೆ.