ಅಕ್ಟೋಬರ್ 04 ರಿಂದ 07 ರವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಜಯದೇವ ಕಪ್ ಕ್ರೀಡಾಕೂಟ
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಚಿತ್ರದುರ್ಗ ಮುರುಘರಾಜೇಂದ್ರ ಶ್ರೀಮಠದ ವತಿಯಿಂದ ಪ್ರತಿ ವರ್ಷ ದಸರಾ ಹಬ್ಬದ ಪ್ರಯುಕ್ತ ಶರಣಸಂಸ್ಕೃತಿ ಉತ್ಸವ ಆಚರಿಸಲಾಗುತ್ತಿದ್ದು, ಈ ವರ್ಷ ಶ್ರೀ ಜಯದೇವ ಮುರುಘರಾಜೇಂದ್ರ ಮಹಾ ಸ್ವಾಮೀಜಿಗಳ 150ನೇ ಜಯಂತಿ ಅಂಗವಾಗಿ ಜಯದೇವ ಕಪ್-2024 ಕ್ರೀಡಾ ಜಾತ್ರೆಯನ್ನು ಸಂಘಟಿಸಲಾಗುತ್ತಿದ್ದು, ಈ ಪ್ರಯುಕ್ತ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಕ್ಟೋಬರ್ 04 ರಿಂದ 07 ರವರೆಗೆ ಜಿಲ್ಲಾ ಮಟ್ಟದ ಕ್ರೀಡಾ ವಿಭಾಗದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಸಹಕಾರಿಯಾಗುವಂತೆ ಪ್ರೌಢಶಾಲಾ ಬಾಲಕ, ಬಾಲಕಿಯರಿಗಾಗಿ (17ವರ್ಷ ಒಳಗಿನವರಿಗೆ) ಕಬಡ್ಡಿ, ಖೋ ಖೋ, ವಾಲಿಬಾಲ್ ಹಾಗೂ ಹ್ಯಾಂಡ್ ಬಾಲ್, ಹೊನಲು ಬೆಳಕಿನ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಈ ಪಂದ್ಯಾವಳಿಗಳಿಗೆ ಇಲಾಖೆಯಿಂದ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಹೊರ ತಾಲ್ಲೂಕುಗಳಿಂದ ಬರುವ ಕ್ರೀಡಾ ಪಟುಗಳಿಗೆ ವಸತಿ, ಊಟ, ತಿಂಡಿ, ವ್ಯವಸ್ಥೆ ಇದ್ದು, ಬಂದು ಹೋಗುವ ಪ್ರಯಾಣ ಭತ್ಯೆಯನ್ನು ಸಹ ನೀಡಲಾಗುವುದು. ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ ರೂ.10,000, 8,000, 6,000, 4000 ನಗದು ಹಾಗೂ ಆಕರ್ಷಕ ಟ್ರೋಪಿ, ಮೆಡಲ್, ಟೀ ಷರ್ಟ್, ಕ್ರೀಡಾ ಪರಿಕರಗಳು ಮತ್ತು ವೈಯಕ್ತಿಕ ವಿಶೇಷ ಟ್ರೋಪಿ ಸಹ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.