For the best experience, open
https://m.suddione.com
on your mobile browser.
Advertisement

ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ವಿರೋಧಿಸಿ ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

05:36 PM Jul 27, 2024 IST | suddionenews
ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ವಿರೋಧಿಸಿ ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ.27 : ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವಂತೆ ಕೆ.ಪಿ.ಸಿ.ಸಿ. ಸೂಚನೆ ಮೇರೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಹಾಗೂ ಮುಖಂಡರುಗಳು ತಲೆ ಮೇಲೆ ಚೊಂಬು ಇಟ್ಟುಕೊಂಡು ಪ್ರತಿಭಟಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಭದ್ರಾಮೇಲ್ಡಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿಯೇ ಕೇಂದ್ರ ಸರ್ಕಾರ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಘೋಷಿಸಿದ್ದು, ಇದುವರೆವಿಗೂ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಜನತೆಗೆ ಮಂಕು ಬೂದಿ ಎರಚುತ್ತಿದ್ದಾರೆ. ಬೆಂಗಳೂರು ಒಂದರಿಂದಲೇ ಶೇ.೬೦ ರಷ್ಟು ತೆರಿಗೆ ಕೇಂದ್ರಕ್ಕೆ ಪಾವತಿಯಾಗುತ್ತಿದೆ. ರಾಜ್ಯದ ಎಲ್ಲಾ ಸಂಸದರು ಸೇರಿಕೊಂಡು ಕರ್ನಾಟಕಕ್ಕೆ ಹೆಚ್ಚಿನ ಅನುದಾನ ತರಬೇಕು. ಅಪ್ಪರ್‌ಭದ್ರಾ ಯೋಜನೆ, ಮೇಕೆದಾಟು, ಕೃಷ್ಣ ಬೇಸಿನ್ ಕಾಮಗಾರಿಗಳು ಇನ್ನು ನಡೆಯುತ್ತಲೆ ಇವೆ. ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ನೀರಾವರಿಗೆ ಒತ್ತು ಕೊಟ್ಟಿಲ್ಲ. ಇದರ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಎಚ್ಚರಿಸಿದರು.

Advertisement

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕಳೆದ ಬಾರಿಯೂ ಕರ್ನಾಟಕಕ್ಕೆ ಅದರಲ್ಲೂ ಚಿತ್ರದುರ್ಗಕ್ಕೆ ಯಾವ ಅನುಕೂಲವೂ ಆಗಿಲ್ಲ. ಬಿಜೆಪಿ. ಜೆಡಿಎಸ್.ಸೇರಿಕೊಂಡು ರಾಜ್ಯದಲ್ಲಿ ಹತ್ತೊಂಬತ್ತು ಸಂಸದರು ಗೆದ್ದಿದ್ದಾರೆ. ಕಾಂಗ್ರೆಸ್‌ನವರ ಜೊತೆ ಕೈಜೋಡಿಸಿ ಅಭಿವೃದ್ದಿಗೆ ಹಣ ತರಬೇಕು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಇವರುಗಳು ಕೇಂದ್ರಕ್ಕೆ ಅರ್ಜಿ ಕೊಡುತ್ತಿರುವುದು ನಗೆಪಾಟಲು. ಅವರದೆ ಪಕ್ಷ ಕೇಂದ್ರದಲ್ಲಿರುವಾಗ ಹಣ ತರಲು ಏಕೆ ಇವರ ಕೈಯಲ್ಲಿ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಬೂಟಾಟಿಕೆ ಸಾಕು. ಇನ್ನು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಬೇಡ. ಬಿಹಾರ, ಆಂಧ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಮೋಸ ಮಾಡಿಕೊಂಡು ಬರುತ್ತಿದೆ. ಅಪ್ಪರ್‌ಭದ್ರಾ ಯೋಜನೆ ಅರ್ಧಕ್ಕೆ ನಿಂತಿದೆ. ಘೋಷಣೆ ಮಾಡಿರುವ ಹಣ ಬಿಡುಗಡೆಗೊಳಿಸಿಲ್ಲ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಸುಳ್ಳು ಹೇಳಿ ಚುನಾವಣೆಯಲ್ಲಿ ಮತ ಪಡೆದಿರುವ ಬಿಜೆಪಿ. ಈಗ ಅದರ ಚಕಾರವೆತ್ತುತ್ತಿಲ್ಲ. ನೀರಾವರಿಗೆ ಬಿಡುಗಡೆಗೊಳಿಸಿರುವ ಐದು ಸಾವಿರದ ಮುನ್ನೂರು ಕೋಟಿ ರೂ. ಹಣವನ್ನು ಸಂಸದರು ತರಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡುತ್ತ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಜಿಲ್ಲೆಗೆ ಯಾವಾಗ ಬಂದರೂ ಕಪ್ಪು ಪಟ್ಟಿ ಪ್ರದರ್ಶಿಸಿ ಬಹಿಷ್ಕಾರವಾಕುವ ತೀರ್ಮಾನ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಉಳಿದಿರುವುದು ಕಾಂಗ್ರೆಸ್‌ನಿಂದ ಮಾತ್ರ. ಕೇಂದ್ರ ಸರ್ಕಾರದ ಬಜೆಟ್ ಶ್ರೀಮಂತರ ಪರವಾಗಿದೆ. ಜಿಲ್ಲೆಗೆ ಯಾವ ಅನುದಾನವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
ಆರ್.ಕೆ.ಸರ್ದಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮುನಿರಾ ಎ.ಮಕಾಂದಾರ್, ಮೋಕ್ಷರುದ್ರಸ್ವಾಮಿ, ರುದ್ರಾಣಿಗಂಗಾಧರ್, ಭಾಗ್ಯಮ್ಮ, ಸೇವಾದಳದ ಇಂದಿರಾ, ಸುಧಾ, ಸೈಯದ್ ವಲಿಖಾದ್ರಿ, ಯು.ಲಕ್ಷ್ಮಿಕಾಂತ್, ಖುದ್ದೂಸ್, ಪ್ರಕಾಶ್‌ರಾಮನಾಯ್ಕ, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಬಿ.ಮಂಜುನಾಥ್, ಚೋಟು, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಮಹಮದ್ ಫಕೃದ್ದಿನ್, ಹಾಲುಮರದಟ್ಟಿ ಟಿ.ರಂಗಯ್ಯ, ಖಾದಿ ರಮೇಶ್, ಮೋಹನ್ ಪೂಜಾರಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ,
ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags :
Advertisement