Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ : ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ತಾಕೀತು

04:30 PM Jun 13, 2024 IST | suddionenews
Advertisement

ಚಿತ್ರದುರ್ಗ. ಜೂನ್13 :  ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಗೆ ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಭೇಟಿ ನೀಡಿ, ಜಿಲ್ಲಾಸ್ಪತ್ರೆಯ ಕಾರ್ಯವೈಖರಿ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ವೈದ್ಯರು ಹಾಗೂ ರೋಗಿಗಳಿಂದ ಆಸ್ಪತ್ರೆಯ ಕುರಿತು ಮಾಹಿತಿ ಪಡೆದರು.  

Advertisement

ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸ್ವತಃ ತಾವೇ ಖುದ್ದಾಗಿ ರೋಗಿಗಳ ವಾರ್ಡ್‍ಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸುವುದರ ಜೊತೆಗೆ ಅಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾಸ್ಪತ್ರೆಯಲ್ಲಿನ ಔಷಧಿ ವಿತರಿಸುವ ಸ್ಘಳ, ಚುಚ್ಚುಮದ್ದು ನೀಡುವ ರೂಂ, ಸಹಾಯ ಕೇಂದ್ರ, ಎಂ.ಎಲ್‍ಸಿ ವಿಭಾಗ, ಹೊರರೋಗಿಗಳ ವಿಭಾಗದ ಅರ್ಥೋಪೆಡಿಕ್ ಒಪಿಡಿ, ಸರ್ಜಿಕಲ್ ಒಪಿಡಿ, ಡ್ರೆಸಿಂಗ್ ರೂಂ, ಫಿಜಿಯೋಥೆರಪಿ, ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಕಣ್ಣಿನ ಶಸ್ತ್ರಚಿಕಿತ್ಸಾ ವಿಭಾಗ, ಹೈಟೆಕ್ ಲ್ಯಾಬ್, ಹಿರಿಯ ನಾಗರಿಕರ ವಾರ್ಡ್, ಡಯಾಲಿಸಿಸ್ ವಿಭಾಗ, ಮಕ್ಕಳ ಮತ್ತು ನವಜಾತ ಶಿಶು ವಿಭಾಗ, ರಕ್ತನಿಧಿ ಕೇಂದ್ರ ಹಾಗೂ ಅಡುಗೆ ಮನೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ವೀಕ್ಷಣೆ ಮಾಡಿದರು.  ಅಲ್ಲದೆ ತುರ್ತು ಚಿಕಿತ್ಸಾ ವಿಭಾಗದ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿನ ಶೌಚಾಲಯ ಸ್ವಚ್ಛತೆ  ಕುರಿತು ಹೆಚ್ಚಿನ ದೂರುಗಳು ಕೇಳಿಬರುತ್ತವೆ.  ಹೀಗಾಗಿ ಶೌಚಾಲಯವನ್ನು ಪ್ರತಿನಿತ್ಯ ನಿಯಮಿತವಾಗಿ ಸ್ವಚ್ಛವಾಗಿರಿಸಲು ತಾಕೀತು ಮಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ವಿಕಲಚೇತನರಿಗೆ ಅಂಗವೈಕಲ್ಯ ಕುರಿತು ವೈದ್ಯಕೀಯ ಪರೀಕ್ಷೆ ನಡೆಸಿ, ಗುರುತಿನ ಚೀಟಿ ನೀಡುವ ಸಂದರ್ಭದಲ್ಲಿ ಏಕ ವೈದ್ಯರ ತಂಡ ನೀಡುವ ಬದಲಿಗೆ, ನಿಯಮಾನುಸಾರ ತಜ್ಞ ವೈದ್ಯರ ತಂಡವು ಪರಿಶೀಲಿಸಿಯೇ ವೈದ್ಯಕೀಯ ಪ್ರಮಾಣಪತ್ರ ಹಾಗೂ ಗುರುತಿನ ಪತ್ರ ನೀಡಬೇಕು ಎಂದು ಸೂಚನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟಂತೆ ದೂರುಗಳು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ಹಾಗಾಗಿ ಆಸ್ಪತ್ರೆಗೆ ಅಗತ್ಯವಿರುವ ಕೆಲವು ಮೂಲಸೌಕರ್ಯಗಳ ಅವಶ್ಯಕತೆ ಇದೆ. ಡಿಎಂಎಫ್ ಹಾಗೂ ಕೆಎಂಇಆರ್‍ಸಿ ಅನುದಾನದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲಾಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿಯೂ ಸಿಬ್ಬಂದಿ ಸಮರ್ಪಕವಾಗಿದ್ದು, ಆಸ್ಪತ್ರೆಯ ಕಟ್ಟಡ ನಿರ್ವಹಣೆ ಸಮರ್ಪಕವಾಗಿಲ್ಲ. ಮಳೆ ಬಂದಾಗ ನೀರು ನಿಲ್ಲುವುದು, ಸಣ್ಣಪುಟ್ಟ ದುರಸ್ಥಿಯ ಅವಶ್ಯಕತೆ ಇದೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ದೂರು ಬಾರದಂತೆ ರೋಗಿಗಳಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಅನಗತ್ಯವಾಗಿ ಎಂಎಲ್‍ಸಿ ಮಾಡಬೇಡಿ: ಕಾನೂನಿಗೆ ಸಂಬಂಧಿಸಿದ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಕರಣಗಳನ್ನು ನಿಯಮಾನುಸಾರ ಮಾಡಬೇಕು, ಆದರೆ ನಿಯಮಗಳಿಗೆ ವಿರುದ್ಧವಾಗಿ ಮತ್ತು ಅನಗತ್ಯವಾಗಿ ಎಂಎಲ್‍ಸಿ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಎಂಎಲ್‍ಸಿಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಇದರ ಜೊತೆಗೆ ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್ ಚಿತ್ರದುರ್ಗ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಶೇಷ ವೈದ್ಯಾಧಿಕಾರಿ ಡಾ.ಯುವರಾಜ್ ಸೇರಿದಂತೆ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಇದ್ದರು.

Advertisement
Tags :
Chitradurga District HospitalDistrict Collector T. Venkateshhigh priority to cleanlinessಆಸ್ಪತ್ರೆಯ ಸ್ವಚ್ಛತೆಚಿತ್ರದುರ್ಗ ಜಿಲ್ಲಾಸ್ಪತ್ರೆಜಿಲ್ಲಾಧಿಕಾರಿ ಟಿ.ವೆಂಕಟೇಶ್ಹೆಚ್ಚಿನ ಆದ್ಯತೆ
Advertisement
Next Article