ಹಳೆದ್ಯಾಮವ್ವನಹಳ್ಳಿಯಲ್ಲಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಐದು ಲಕ್ಷ ವಿತರಣೆ
ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.13 : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಗ್ರಾಮಾಭಿವೃದ್ದಿ ಯೋಜನೆಗಳ ಮೂಲಕ ಸ್ವಸಹಾಯ ಸಂಘಗಳ ಲಕ್ಷಾಂತರ ಫಲಾನುಭವಿಗಳ ಕುಟುಂಬಕ್ಕೆ ಆರ್ಥಿಕ ಭದ್ರೆಯನ್ನು ಒದಗಿಸಿದ್ದಾರೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ರವಿ ಹಿತ್ತಲಮನಿ ತಿಳಿಸಿದರು.
ಹಳೆದ್ಯಾಮವ್ವನಹಳ್ಳಿಯಲ್ಲಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗಡೆರವರು ಮಂಜೂರು ಮಾಡಿರುವ ಐದು ಲಕ್ಷ ರೂ.ಗಳ ಡಿ.ಡಿ.ಯನ್ನು ದೇವಸ್ಥಾನದ ಕಮಿಟಿಯವರಿಗೆ ಹಸ್ತಾಂತರಿಸಿ ಮಾತನಾಡಿದರು.
ಶಿಕ್ಷಣ, ಮೂಲಭೂತ ಸೌಕರ್ಯ, ಬ್ಯಾಂಕಿನಿಂದ ನೇರ ಪ್ರಗತಿನಿಧಿ ಸೌಲಭ್ಯ, ಉಳಿತಾಯ, ಸ್ವ-ಉದ್ಯೋಗ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಪ್ರಯೋಜನವಾಗಿದೆ. ಸಂಘದ ಸದಸ್ಯರ ಮಕ್ಕಳ ವೃತ್ತಿ ಶಿಕ್ಷಣಕ್ಕೆ ಸುಜ್ಞಾನ ನಿಧಿ ಶಿಷ್ಯ ವೇತನ ಹಾಗೂ ನಿರ್ಗತಿಕರಿಗೆ ಅನಾಥರಿಗೆ ಪ್ರತಿ ತಿಂಗಳು ಮಾಶಾಸನ ಮತ್ತು ವಾತ್ಯಲ್ಯ ಮನೆ ನಿರ್ಮಿಸಿಕೊಡುವ ಯೋಜನೆಗಳು ಪ್ರಮುಖವಾಗಿವೆ ಎಂದರು.
ದೇವಸ್ಥಾನಕ್ಕೆ ಕಳಿಸಿರುವ ಐದು ಲಕ್ಷ ರೂ.ಗಳನ್ನು ಸದುಪಯೋಗಪಡಿಸಿಕೊಂಡು ಆದಷ್ಠು ಬೇಗನೆ ದೇವಸ್ಥಾನ ನಿರ್ಮಾಣವನ್ನು ಪೂರ್ಣಗೊಳಿಸಿ ಎಂದು ಕಮಿಟಿಯವರಿಗೆ ಸೂಚಿಸಿದರು.
ತಾಲ್ಲೂಕು ಯೋಜನಾಧಿಕಾರಿ ಅಶೋಕ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೇಣುಗೋಪಾಲ್, ಗ್ರಾಮ ಪಂಚಾಯಿತಿ ಸದಸ್ಯ ಓಬಳೇಶ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಅಶ್ವಿನಿ, ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿಗಳು, ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ವೈ.ನರಸಿಂಹಮೂರ್ತಿ, ಸದಸ್ಯರು, ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.