ಭೀಕರ ಬರಗಾಲದ ನಡುವೆಯೂ ಚಿತ್ರದುರ್ಗ ರೈತನ ಮೊಗದಲ್ಲಿ ಸಂತಸ: ಕೊಳವೆ ಬಾವಿಯಲ್ಲಿ 5 ಇಂಚು ನೀರು...!
ಚಿತ್ರದುರ್ಗ: ರಾಜ್ಯದ ಮೂಲೆ ಮೂಲೆಯಲ್ಲೂ ಬರಗಾಲದ ವಿಚಾರ ತಾಂಡವವಾಡುತ್ತಿದೆ. ಎಷ್ಟೋ ಕಡೆ ಕುಡಿಯುವ ನೀರಿಗೂ ಬರ ಬಂದಿದೆ. ಜಾನುವಾರುಗಳ ಪರಿಸ್ಥಿತಿ ಅಂತು ಹೇಳುವಂತೆ ಇಲ್ಲ. ಅಷ್ಟು ಬೀಕರ ಪರಿಸ್ಥಿತಿಯಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. ಅದರ ಜೊತೆಗೆ ಬೆಳೆದಿರುವ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೇನೆ ಜಮೀನಿನ ಬೋರ್ವೆಲ್ ನಲ್ಲಿ ನೀರು ಬರುತ್ತಿಲ್ಲ. ಹೀಗಿರುವಾಗ ರೈತನೊಬ್ಬನ ಮುಖದಲ್ಲಿ ಸಂತಸ ಮನೆ ಮಾಡಿದೆ. ಧೈರ್ಯ ಮಾಡಿ ಕೊರೆಸಿದ ಬೋರ್ವೆಲ್ ನಲ್ಲಿ ಗಂಗಮ್ಮ ತಾಯಿ ಚಿಮ್ಮಿದ್ದಾಳೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಚೆಲ್ಲೂರು ಗ್ರಾಮದಲ್ಲಿ ಹೊಸದಾಗಿ ಬೋರ್ವೆಲ್ ಕೊರೆಸಲಾಗಿದೆ. ರೈತ ಹರೀಶ್ ಎಂಬುವವರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದಾರೆ. ಆದರೆ ಇಂತ ಬಿರುಬೇಸಿಗೆಯಲ್ಲಿ, ಭೀಕರ ಬರಗಾಲದಲ್ಲಿ ನೀರು ಸಿಕ್ಕಿರುವುದು ಖುಷಿಗೆ ಕಾತಣವಾಗಿದೆ. ಅದರಲ್ಲೂ ಐದು ಇಂಚು ನೀರು ಬಂದಿದೆ.
ರೈತ ಹರೀಶ್ ಇದೇನು ಮೊದಲ ಬಾರುಗೆ ಬೋರ್ವೆಲ್ ಕೊರೆಸಿರುವುದಲ್ಲ. ಕಳೆದ ಬಾರಿಯೂ ಕೊರೆಸಿ ಕೈ ಸುಟ್ಟು ಕೊಂಡಿದ್ದರು. ಈ ಬಾರಿಯೂ ದೇವರ ಮೇಲೆ ಭಾರ ಹಾಕಿ, ಪ್ರಾರ್ಥನೆ ಮಾಡಿ ಬೋರ್ವೆಲ್ ಕೊರೆಸುವುದಕ್ಕೆ ಮುಂದಾಗಿದ್ದರು. ಈ ಬಾರಿ ದೇವರು ಕಣ್ಣು ಬಿಟ್ಟಿದ್ದಾನೆ. ಜೀವಗಂಗೆ ಸಿಕ್ಕಿದ್ದಾಳೆ. ಚಿಮ್ಮಿದ ಗಂಗೆಯನ್ನು ಕಂಡು ರೈತ ಹರೀಶ್ ಕುಟುಂಬದವರು ಹರ್ಷೊದ್ಘಾರ ಪಟ್ಟಿದ್ದಾರೆ. ಭೂಮಿಯಲ್ಲಿ ಫಲವತ್ತಾದ ಬೆಳೆ ತೆಗೆಯುವ ಆಸೆಯಲ್ಲಿದ್ದ ರೈತನಿಗೆ ಈ ಗಂಗಾ ಜಲ ದರ್ಶನ ಮತ್ತಷ್ಟು ಹುಮ್ಮಸ್ಸು ತಂದುಕೊಟ್ಟಿದೆ. ಆದರೆ ಈ ಭೀಕರ ಬರಗಾಲದಲ್ಲೂ ನೀರು ಸಿಕ್ಕಿರುವುದು ಮಾತ್ರ ಸ್ಥಳೀಯರಿಗೆ ಖುಷಿಯಾಗಿದೆ, ಆಶ್ಚರ್ಯವೂ ಆಗಿದೆ.