ದೆಹಲಿ ಸಿಎಂ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆ : ಸತ್ಯಕ್ಕೆ ಸಿಕ್ಕ ಜಯ : ಎಎಪಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.14 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 156 ದಿನಗಳ ನಂತರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಚಿತ್ರದುರ್ಗ ಎಎಪಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ಅವರು ಕೂಡಾ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ ಮತ್ತು ಕೇಜ್ರಿವಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ತೀರ್ಪಿನಿಂದ ಪಕ್ಷದ ಅಭಿಮಾನಿಗಳಿಗೆ ಸಂತಸ ತಂದಿದೆ. ಪಂಜರದ ಗಿಳಿಯಾಗಿ ಕೆಲಸ ಮಾಡಬಾರದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ರಾಜಕೀಯ ಪಕ್ಷದವರು ಅಧಿಕಾರಿಗಳು ತಪ್ಪು ಹೆಜ್ಜೆಗಳನ್ನು ಇಡಬಾರದು.ಕಾನೂನು ಎಲ್ಲರಿಗೂ ಒಂದೇ. ಮುಂದಿನ ದಿನಗಳಲ್ಲಿ ಕೇಜ್ರಿವಾಲ್ ರವರು ಪಕ್ಷವನ್ನು ಬಲಪಡಿಸುತ್ತಾರೆ. ರಾಜ್ಯ ಸೇರಿದಂತೆ ದೇಶದೆಲ್ಲೆಡೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಜೈಲಿನಿಂದ ಹೊರಬಂದ ಅವರನ್ನು ಪಕ್ಷದ ಮುಖಂಡರು ತಿಹಾರ್ ಜೈಲಿನ ಹೊರಗೆ ಮುಖ್ಯಮಂತ್ರಿಯನ್ನು ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ಸಿಎಂ ಪತ್ನಿ ಸುನೀತಾ ಕೇಜ್ರಿವಾಲ್ ಹಾಗೂ ಅವರ ಪುತ್ರಿ ಉಪಸ್ಥಿತರಿದ್ದರು. ಪಂಜಾಬ್ ಸಿಎಂ ಮಾನ್ ಕೂಡ ಕೇಜ್ರಿವಾಲ್ ಅವರನ್ನು ಸ್ವಾಗತಿಸಲು ಬಂದಿದ್ದರು. ಸಿಎಂ ಕೇಜ್ರಿವಾಲ್ ಅವರು ತಿಹಾರ್ ನಿಂದ ರೋಡ್ ಶೋ ಮೂಲಕ ಅವರ ಮನೆಗೆ ತೆರಳಿದರು.
ಶುಕ್ರವಾರ (ಸೆಪ್ಟೆಂಬರ್ 13) ಬೆಳಗ್ಗೆ ಕೇಜ್ರಿವಾಲ್‌ಗೆ 10 ಲಕ್ಷ ರೂಪಾಯಿ ಬಾಂಡ್‌ನಲ್ಲಿ ಸುಪ್ರೀಂ ಕೋರ್ಟ್ ನಿಯಮಿತ ಜಾಮೀನು ನೀಡಿತು. ಇಡಿ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಈಗಾಗಲೇ ಮಧ್ಯಂತರ ಜಾಮೀನು ನೀಡಿದೆ. ಅಬಕಾರಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಈ ವರ್ಷ ಮಾರ್ಚ್ 21 ರಂದು ಇಡಿ ಮತ್ತು ಜೂನ್ 26 ರಂದು ಸಿಬಿಐ ಬಂಧಿಸಿತ್ತು.
ಜೈಲಿನಿಂದ ಹೊರಬಂದ ನಂತರ ಅರವಿಂದ ಕೇಜ್ರಿವಾಲ್, ನಾನು ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇನೆ, ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ, ಆದರೆ ದೇವರು ನನಗೆ ಪ್ರತಿ ಹೆಜ್ಜೆಗೂ ಬೆಂಬಲ ನೀಡಿದ್ದಾನೆ. ಸಮಾಜದ ಎಲ್ಲಾ ವರ್ಗದ ಜನರು ಬೆಂಬಲಿಸಿದ್ದಾರೆ. ಜನರ ಪ್ರಾರ್ಥನೆಯಿಂದ ಜೈಲಿನಿಂದ ಹೊರಬಂದಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೀಗ ನನ್ನ ಧೈರ್ಯ 100 ಪಟ್ಟು ಹೆಚ್ಚಾಯಿತು. ದೇಶವನ್ನು ದುರ್ಬಲಗೊಳಿಸಲು ದೇಶವಿರೋಧಿ ಶಕ್ತಿಗಳು ಕೆಲಸ ಮಾಡುತ್ತಿವೆ.. ಅವರ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದರು.