For the best experience, open
https://m.suddione.com
on your mobile browser.
Advertisement

ಕಾಂಗ್ರೆಸ್ ಉತ್ತಮ ಆಡಳಿತ ನೀಡಿದರೂ ಸೋಲು, ಜನರ ತೀರ್ಪಿಗೆ ತಲೆಬಾಗುವೆ : ಬಿ.ಎನ್.ಚಂದ್ರಪ್ಪ

06:41 PM Jun 04, 2024 IST | suddionenews
ಕಾಂಗ್ರೆಸ್ ಉತ್ತಮ ಆಡಳಿತ ನೀಡಿದರೂ ಸೋಲು  ಜನರ ತೀರ್ಪಿಗೆ ತಲೆಬಾಗುವೆ   ಬಿ ಎನ್ ಚಂದ್ರಪ್ಪ
Advertisement

ಸುದ್ದಿಒನ್, ಚಿತ್ರದುರ್ಗ, ಜೂ.4  : ಉತ್ತಮ ಆಡಳಿತ ನೀಡಿದರೂ ಸೋಲು, ಮತ್ತೊಂದು ಕಡೆ ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ವರ್ಗಕ್ಕೆ ಜಯ.  ಇದೊಂದು ಸಂದಿಗ್ಧ ಪರಿಸ್ಥಿತಿ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ತಮ್ಮ ಸೋಲನ್ನು ವಿಮರ್ಶಿಸಿದ್ದಾರೆ.

Advertisement
Advertisement

ಮಂಗಳವಾರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು,  ಜನ ನೀಡಿರುವ ತೀರ್ಪಿಗೆ ತಲೆಬಾಗುವೆ ಎಂದು ಹೇಳಿದ್ದಾರೆ.

2019ರ ಚುನಾವಣೆಯಲ್ಲಿ ಸೋಲು ಬಳಿಕ ಕ್ಷೇತ್ರದ ಜನರೊಂದಿಗೆ ಸದಾ ಸಂಪರ್ಕ ಹೊಂದಿದ್ದೇ. ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇ. ಚಿತ್ರದುರ್ಗ ಕ್ಷೇತ್ರವನ್ನೇ ತನ್ನ ಕರ್ಮಭೂಮಿ ಎಂದು ಭಾವಿಸಿ, ಜನರೊಂದಿಗೆ ನಾನು ಒಬ್ಬನಾಗಿ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಡಿದೆ. ಜನರು ಕೂಡ ಪ್ರೀತಿ ತೋರಿದ್ದರು. ಆದರೆ, ಜನರ ಪ್ರೀತಿ-ಅಭಿಮಾನ ಗೆಲುವಾಗಿ ಪರಿವರ್ತನೆ ಆಗಿಲ್ಲ. ಈ ನೋವು ನನ್ನಲ್ಲಿದೆ. ಹಾಗೇಂದು ನಾನು ಧೃತಿಗೆಡುವುದಿಲ್ಲ. ಆರು ಲಕ್ಷಕ್ಕಿಂತಲೂ ಹೆಚ್ಚು ಜನ ನನಗೆ ಮತ ಹಾಕಿರುವುದು, ಅವರಿಗೆ ಋಣಿ ಆಗಿರುವುದು ನನ್ನ ಕರ್ತವ್ಯ ಎಂದು ತಿಳಿಸಿದ್ದಾರೆ.

Advertisement

ಸಮೀಕ್ಷೆಗಳನ್ನು ಸುಳ್ಳಾಗಿಸಿ ದೇಶದಲ್ಲಿ ಇಂಡಿಯಾ ಒಕ್ಕೂಟ ಹೆಚ್ಚು ಸ್ಥಾನ ಪಡೆದಿದ್ದು, ಅಧಿಕಾರದ ಹೊಸ್ತಲಲ್ಲಿ ಇದೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದೆ. ಇದನ್ನು ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದಿದ್ದಾರೆ.

Advertisement

ಸೋಲಿಗೆ ಅಂಜದೇ ಕ್ಷೇತ್ರದ ಜನರೊಂದಿಗೆ ಹೆಜ್ಜೆ ಹಾಕುವೆ. ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ, ಸರ್ಕಾರಿ ಮೆಡಿಕಲ್ ಕಾಲೇಜು ಹೀಗೆ ಅನೇಕ ಯೋಜನೆಗಳು ನನ್ನ ಅಧಿಕಾರವಧಿಯಲ್ಲಿ ಹೆಚ್ಚು ವೇಗ ಪಡೆದಿದ್ದು, ಅವುಗಳನ್ನು ಈ ಬಾರಿ ಸಂಸದನಾಗಿ ಪೂರ್ಣಗೊಳಿಸುವ ಮಹಾದಾಸೆ ನನ್ನದಾಗಿತ್ತು. ಆದರೆ, ಜನರ ತೀರ್ಪು ವ್ಯತಿರಿಕ್ತವಾಗಿ ಬಂದಿದೆ. ಅದನ್ನು ಸ್ವೀಕರಿಸುವ ಜೊತೆಗೆ ಈ ಯೋಜನೆಗಳನ್ನು ಪೂರ್ಣಗೊಳಿಸುವ ಜೊತೆಗೆ ಶಿಕ್ಷಣ, ಕೈಗಾರಿಕೆ, ದುಡಿಯುವ ಜನರ ಕೈಗೆ ಕೆಲಸ ದೊರೆಯುವ ರೀತಿ ರಾಜ್ಯ ಸರ್ಕಾರದ ಜೊತೆಗೂಡಿ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗಳನ್ನು ತರುವ ಪ್ರಯತ್ನ ಮಾಡುವೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಸೋಲನ್ನು ಮುಂದಿಟ್ಟುಕೊಂಡು ಹೊಣೆಗಾರಿಕೆಯಿಂದ ನುಣಚಿಕೊಳ್ಳುವ ಸಣ್ಣ ಪ್ರಯತ್ನವನ್ನು ಮಾಡುವುದಿಲ್ಲ. ಅದು ನನ್ನ ಗುಣವೂ ಅಲ್ಲ. ಸೋಲು-ಗೆಲುವು ಮತ್ತು ಸಾಮಾಜಿಕ ಕಾರ್ಯಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ದೇಶದ ಯಾವುದೇ ರಾಜ್ಯದಲ್ಲಿ ಮಾಡದ ಜನಪರ ಕಾರ್ಯಗಳನ್ನು ಮಾಡಿದೆ. ಅದರಲ್ಲೂ ಪಂಚ ಗ್ಯಾರಂಟಿಗಳು ಜನರ ಮನಸ್ಸನ್ನು ಗೆದ್ದಿದ್ದು, ಕೋಟ್ಯಂತರ ಜನ ಫಲಾನುಭವಿ ಆಗಿದ್ದಾರೆ. ಸಹಜವಾಗಿ ಮಾಡಿದ ಕೆಲಸಕ್ಕೆ ಕಾಂಗ್ರೆಸ್ ಪಕ್ಷ ಕೂಲಿ ಕೇಳುವುದು, ಫಲಾನುಭವಿಗಳಾದ  ಜನರು ಕೂಡ ಮತದಾನದ ಮೂಲಕ ಕೂಲಿ ಕೊಡುವುದು ಪದ್ಧತಿ. ಆದರೆ, ಈ ವಿಷಯದಲ್ಲಿ ಲೋಪವಾಗಿರುವುದು ವಿಮರ್ಶೆಗೊಳಪಡಿಸಬೇಕಾದ ಸಂದರ್ಭ ಎದುರಾಗಿದೆ ಎಂದಿದ್ದಾರೆ.

ಸಮಾಜದಲ್ಲಿ ಧ್ವನಿಯಿಲ್ಲದ ಕೋಟ್ಯಂತರ ಬಡವರು, ನೊಂದ ಜನರ ಪರ ಯೋಜನೆ ರೂಪಿಸಿದಾಗ, ಬೆರಳೆಣಿಕೆ ಸಂಖ್ಯೆಯಲ್ಲಿರುವ ಉಳ್ಳವರು ಅಸೂಯೆ ಪಟ್ಟು, ಯೋಜನೆ ರೂಪಿಸಿದವರ ವಿರುದ್ಧವೇ ಎಲ್ಲ ಕ್ಷೇತ್ರಗಳ ಜನರನ್ನು ಎತ್ತಿಕಟ್ಟುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈಗ ಆಗಿರುವುದು ಕೂಡ ಅದೇ ರೀತಿ ಎಂದು ಹೇಳಿದ್ದಾರೆ.

ಶತಮಾನಗಳ ಹಿಂದಿನಿಂದಲೂ ಯಾರೂ ತಮ್ಮ ಪರ ಹೋರಾಟ ನಡೆಸುತ್ತಾರೆ ಅಂತಹವರ ಪರ ಜನ ಹೆಚ್ಚು ಪ್ರೀತಿ-ಅಭಿಮಾನ ಹೊಂದಿರುತ್ತಾರೆ. ಆದರೆ, ಪಟ್ಟಭದ್ರರ ಆರ್ಭಟಕ್ಕೆ ಭೀತಿಗೊಂಡು ಹೊರಬರುವುದಿಲ್ಲ. ಬಹಿರಂಗವಾಗಿ ಬೆಂಬಲಕ್ಕೆ ನಿಲ್ಲುವುದಿಲ್ಲ. ಇದೇ ಕಾರಣಕ್ಕೆ ಬಹಳಷ್ಟು ಜನಪರ ಚಿಂತಕರು, ಉತ್ತಮ ಆಡಳಿತಗಾರರು ಸೋಲುಂಡ ಕಹಿನೆನಪು ಇತಿಹಾಸದಲ್ಲಿ ದಾಖಲಾಗಿದೆ. ಅಂತಹ ದಿಗ್ಗಜರ ಇತಿಹಾಸದ ಅರಿವು ನನಗಿರುವ ಕಾರಣಕ್ಕೆ ಈ ಸೋಲು ನನ್ನನ್ನು ಸಣ್ಣದಾಗಿಯೂ ಧೃತಿಗೆಡಿಸುವುದಿಲ್ಲ ಎಂದು ಹೇಳಿದ್ದಾರೆ.

ಸಂಸದನಾಗಿದ್ದಾಗ ಅನುದಾನವನ್ನು ಜಾತ್ಯತೀತವಾಗಿ, ಸಣ್ಣ ಭ್ರಷ್ಟಾಚಾರ ಹತ್ತಿರ ಸುಳಿಯದಂತೆ ಹಂಚಿಕೆ ಮಾಡಿದ್ದೇನೆ. ಜೊತೆಗೆ ಸೋತ ಬಳಿಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿದ್ದ ಸಂದರ್ಭ ನನ್ನ ಹುಟ್ಟುಗುಣ ಸಜ್ಜನಿಕೆ, ಸೌಜನ್ಯ, ಸರಳತೆಗೆ ಧಕ್ಕೆ ಬಾರದ ರೀತಿ ನಡೆದುಕೊಂಡಿದ್ದೆನೆ. ಇಂತಹ ಸಂದರ್ಭ ಸೋಲು ಆಗಿರುವುದು ರಾಜಕಾರಣದ ಮರುವಿಮರ್ಶೆ ಮಾಡುವ ಚಿಂತನೆಗ ಎಡೆಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರು, ಶಾಸಕರು, ಸಚಿವರು, ಮುಖಂಡರು ನನ್ನ ಗೆಲುವಿಗೆ ಟೊಂಕ ಕಟ್ಟಿ ಶ್ರಮಿಸಿದ್ದಾರೆ. ಅವರುಗಳು ಯಾವುದೇ ಕಾರಣಕ್ಕೂ ನೊಂದುಕೊಳ್ಳಬೇಕಿಲ್ಲ. ಕ್ಷೇತ್ರದಲ್ಲಿದ್ದು ನೊಂದ ಜನರ ಹಾಗೂ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ರಾಜಕಾರಣದಲ್ಲಿ ಸಂತೃಪ್ತಿ ಕಾಣುವ ಮನೋಭಾವ ಹೆಚ್ಚಿಸಿಕೊಳ್ಳಬೇಕು, ಜನರಿಗೆ ಒಳಿತು ಮಾಡುವ ಮೂಲಕ ಕಹಿ ಘಟನೆಗಳನ್ನು ಮರೆಯಬೇಕು ಎಂಬುದು ನನ್ನಾಸೆ. ಆದ್ದರಿಂದ ಫಲಿತಾಂಶವನ್ನು ಮರೆತು ಪಕ್ಷ ಸಂಘಟನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣೋ. ಈ ವಿಷಯದಲ್ಲಿ ಕಾರ್ಯಕರ್ತರು, ಮುಖಂಡರು, ಕ್ಷೇತ್ರದ ಜನರೊಂದಿಗೆ ನಾನು ಸದಾ ಇರುವೆ ಎಂದು ಚಂದ್ರಪ್ಪ ಹೇಳಿದ್ದಾರೆ.

Tags :
Advertisement